ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಲು ಸೂಚನೆ – ಉಪಲೋಕಾಯುಕ್ತ

ತುಮಕೂರು : ಸರ್ಕಾರಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಮಾತ್ರ ಕೆಲಸ ಮಾಡಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪವತಿ ಖಾತೆಗೆ ಸಂಬಂಧಿಸಿದಂತೆ ಸುಮಾರು 4ಲಕ್ಷ ಅರ್ಜಿಗಳು ಬಾಕಿಯಿವೆ. ತಹಶೀಲ್ದಾರರು ಮನಸ್ಸು ಮಾಡಿದರೆ 4 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಅಭಿಯಾನದ ರೀತಿಯಲ್ಲಿ ಸುಮಾರು 25ಸಾವಿರ ಪವತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಕಷ್ಟು ಅರ್ಜಿಗಳಲ್ಲಿ ಹೆಣ್ಣು ಮಕ್ಕಳನ್ನು ಬಿಟ್ಟು ಪವತಿ ಖಾತೆ ಮಾಡಿಕೊಡಬೇಕೆಂದು ಬೇಡಿಕೆ ಇರುವುದರಿಂದ ಸುಮಾರು ಅರ್ಜಿಗಳು ಬಾಕಿ ಉಳಿದುಕೊಳ್ಳುತ್ತಿವೆ ಎಂದರಲ್ಲದೆ, ಪ್ರಸ್ತುತ ಪವತಿ ಖಾತೆ ಅರ್ಜಿ ವಿಲೇವಾರಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪ್ರತಿದಿನ ಹೋಬಳಿವಾರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪವತಿ ಖಾತೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲು 500 ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಉಪಲೋಕಾಯುಕ್ತರು, ಪವತಿ ಖಾತೆ ಅರ್ಜಿಗಳ ವಿಲೇವಾರಿಯಲ್ಲಿ ಸಿವಿಲ್ ವಿವಾದಗಳಿದ್ದಲ್ಲಿ ಹಿಂಬರಹ ನೀಡಬೇಕು. ಸರ್ಕಾರಿ ಕೆಲಸ ಮಾಡಲು ಅಧಿಕಾರಿ-ಸಿಬ್ಬಂದಿಗಳಿಗೆ ಇಚ್ಛಾಶಕ್ತಿ ಇರಬೇಕು. ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕೇ ಹೊರತು ಬಾಕಿ ಉಳಿಸಿಕೊಳ್ಳಬಾರದು ಎಂದು ನಿರ್ದೇಶನ ನೀಡಿದರು.

ವೈಯಕ್ತಿಕ ವಿಚಾರಗಳಿಗೆ ಅನಾವಶ್ಯಕವಾಗಿ ಲೋಕಾಯುಕ್ತಕ್ಕೆ ದೂರು ನೀಡುವುದನ್ನು ಸಾರ್ವಜನಿಕರು ನಿಲ್ಲಿಸಬೇಕು. ಇದರಿಂದ ಲೋಕಾಯುಕ್ತದ ಸಮಯ ಹಾಳಾಗುತ್ತದೆ. ಬಹುತೇಕ ಗ್ರಾಮೀಣ ಪ್ರದೇಶದ ದೂರುಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಪಂಚಾಯತಿ ಅಧಿಕಾರಿಗಳು ಗ್ರಾಮಸ್ಥರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಬೇಕು. ಕಾನೂನು ಮೀರಿ ಯಾವುದೇ ಕಾರ್ಯಗಳನ್ನು ಮಾಡಬಾರದು. ತಮ್ಮ ವ್ಯಾಪ್ತಿಯಲ್ಲಿ ಕಾನೂನು ಪರಿಧಿಯೊಳಗೆ ಬಗೆಹರಿಸಲು ಸಾಧ್ಯವಾಗದ ಅರ್ಜಿಗಳಿಗೆ ಹಿಂಬರಹ ನೀಡಿದಲ್ಲಿ ಅರ್ಜಿದಾರರು ನ್ಯಾಯಾಲಯಕ್ಕೆ ಹೋಗಲು ಅವಕಾಶವಾಗುತ್ತದೆ ಎಂದು ತಿಳಿಸಿದರು.

ಡ್ರೆಸ್ ಕೋಡ್ ಪಾಲಿಸದ ಅಧಿಕಾರಿಗಳ ಮೇಲೆ ಉಪ ಲೋಕಾಯುಕ್ತರ ಗರಂ

ಲೋಕಾಯುಕ್ತ ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿರುವ ಸಂದರ್ಭದಲ್ಲಿ ಡ್ರೆಸ್ ಕೋಡ್ ಪಾಲಿಸದ ಅಧಿಕಾರಿಗಳನ್ನು ಕಂಡ ಅವರು ಕರ್ತವ್ಯದಲ್ಲಿದ್ದಾಗ ಸರ್ಕಾರಿ ಅಧಿಕಾರಿ-ಸಿಬ್ಬಂದಿ ಸರಿಯಾದ ಡ್ರೆಸ್ ಕೋಡ್ ಅನುಸರಿಸುವುದು ಕಡ್ಡಾಯ. ಡ್ರೆಸ್ ಕೋಡ್ ಅಧಿಕಾರಿಗಳ ಹುದ್ದೆ, ಶಿಸ್ತು ಮತ್ತು ಗೌರವದ ಪ್ರಮುಖ ಅಂಶವಾಗಿದ್ದು ಯಾವುದೇ ರೀತಿ ಅಸಡ್ಡೆ ತೋರದೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉಪಲೋಕಾಯುಕ್ತ ಬಿ. ವೀರಪ್ಪ ಅವರು ಸೂಚಿಸಿದರು.

ವಿಚಾರಣೆ ಸಂದರ್ಭದಲ್ಲಿ ಕೆಲವು ಪ್ರಕರಣಗಳು ಸ್ಥಳದಲ್ಲೇ ಪರಿಹರಿಸಬಹುದಾದ ಸಣ್ಣಪುಟ್ಟ ವಿಷಯಗಳಾಗಿದ್ದರೂ ಅವು ಲೋಕಾಯುಕ್ತದವರೆಗೆ ಬರುವುದರ ಬಗ್ಗೆ ವಿμÁದ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲೇ ಉದಾಸೀನತೆ ತೋರದೇ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಸೂಚಿಸಿದರು.

ಜನರು ಕೆಲವೊಮ್ಮೆ ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸುವುದು ಕಂಡುಬಂದಿದೆ ಎಂದು ತಿಳಿಸಿದ ಅವರು, ಇಂತಹ ಪ್ರಕರಣಗಳನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುಳ್ಳು ದೂರುಗಳನ್ನು ದಾಖಲಿಸುವವರ ವಿರುದ್ಧ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಾಕಿ ಪ್ರಕರಣಗಳ ವಿವರವಾದ ಪರಿಶೀಲನೆ, ಸಂಬಂಧಿಸಿದ ಇಲಾಖೆಗಳ ಸ್ಪಷ್ಟೀಕರಣ ಮತ್ತು ತಕ್ಷಣ ವಿಲೇವಾರಿ ಮಾಡಬಹುದಾದ ಪ್ರಕರಣಗಳ ತ್ವರಿತ ಪರಿಹಾರಕ್ಕೆ ಕ್ರಮವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪವತಿ ಖಾತೆ, ಜಮೀನಿನ ಮುಟೇಷನ್, ಪಹಣಿ, ಅಕ್ರಮ ಖಾತೆ ಮತ್ತು ಪಹಣಿ, ರಾಜಗಾಲುವೆ ಒತ್ತುವರಿ, ದೇವಸ್ಥಾನದ ಜಾಗ ಒತ್ತುವರಿ, ರಸ್ತೆ ಒತ್ತುವರಿ, ನಕಾಶೆಯಂತೆ ಕಾಲುದಾರಿ ಬಿಡುವ ಬಗ್ಗೆ ವಿವಾದ, ಮಾಹಿತಿ ಹಕ್ಕು ಅರ್ಜಿ, ನರೇಗಾ ಕಾಮಗಾರಿ ಕೂಲಿ ಪಾವತಿ, ವೇತನ ಪಾವತಿ ವಿಳಂಬ, ಕರ್ತವ್ಯ ಲೋಪ, ಸೇರಿದಂತೆ ಮತ್ತಿತರ ತಕರಾರು ಅರ್ಜಿಗಳಿಗೆ ವಿಚಾರಣೆ ನಡೆಸಲಾಯಿತು.

ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತುಮಕೂರು ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮಿನಾರಾಯಣ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *