ಜೀ ಹುಜೂರ್ ಕಾಂಗ್ರೆಸ್ : ಯುವಕರ ಚಿಂತನೆಗಳಿಲ್ಲದ ಮಾಸಲು ಮುಖಗಳಿಗೆ ಓಟು ಯಾರು ಹಾಕುತ್ತಾರೆ….

ಬಿಹಾರದ ಚುನಾವಣೆಯ ಫಲಿತಾಂಶ ಬಂದ ನಂತರವೂ ರಾಹುಲ್ ಗಾಂಧಿ ಅದೇ ಮಾಸಲು ಮುಖಗಳನ್ನು ಕೂರಿಸಿಕೊಂಡು ಮತಗಳ್ಳತನವಾಗಿದೆ ಎಂದು ಹೇಳುತ್ತಿರುವುದು, ಮಕ್ಕಳು ಚಾಕುಲೇಟ್ ಕದ್ದರು ಎಂದು ಹೇಳುವ ಅಭಾಸದ ಮಾತುಗಳಾಗಿವೆ.

ಕಾಂಗ್ರೆಸ್ ಪಕ್ಷವನ್ನು ಪ್ರಜಾಸತಾತ್ಮಕವಾಗಿ ಕಟ್ಟಿ ಹೊಸ ಹೊಸ ಪ್ರತಿಭೆಗಳು ಬರುವಂತೆ ಮಾಡಿಕೊಂಡಿದ್ದರೆ, ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿರಲಿಲ್ಲ, ದೇಶದಲ್ಲಿ ಎಐಸಿಸಿ ಚುನಾವಣೆ ನಡೆದು 20ವರ್ಷಗಳಾಗಿವೆ, ಕಾಂಗ್ರೆಸ್ ನ ಸಂವಿಧಾನದ ಪ್ರಕಾರ ಪಕ್ಷದ ಅಧ್ಯಕ್ಷರ ಚುನಾವಣೆ ನಡೆದ ಆರು ತಿಂಗಳ ಒಳಗೆ ಎಐಸಿಸಿ ಅಧಿವೇಶನ ಕರೆಯಬೇಕು, ಎಐಸಿಸಿ ಅಧಿವೇಶನ ಕರೆದು ಎಐಸಿಸಿ ಸದಸ್ಯರುಗಳ ಚುನಾವಣೆ ನಡೆಯಬೇಕು, ಎಐಸಿಸಿ ಸದಸ್ಯರುಗಳು 20ಜನ ಸಿಡಬ್ಲುಸಿ ಸದಸ್ಯರುಗಳನ್ನು ಆಯ್ಕೆ ಮಾಡಬೇಕು, ಆದರೆ ಎಐಸಿಸಿ ಚುನಾವಣೆ ಆಗಿಯೇ 20 ವರ್ಷಗಳಾಗಿವೆ.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾಗಿ ಮೂರು ವರ್ಷ ಆಗಿದೆ, ಇದೂವರೆವಿಗೂ ಖರ್ಗೆ ಒಂದೂ ಎಐಸಿಸಿ ಅಧಿವೇಶನ ಅಥವಾ ಸಭೆಯನ್ನು ಮಾಡಿಲ್ಲ, ಅಂದರೆ ಇದರ ಅರ್ಥ ರಾಹುಲ್ ಗಾಂಧಿ ಮಾತ್ರ ಮಾತನಾಡಬೇಕು, ಬೇರೆ ಯಾರೂ ಉಸಿರು ಬಿಡಬಾರದು ಎಂಬುದಾಗಿದೆ. ಹೀಗೆ ರಾಹುಲ್ ಗಾಂಧಿಯನ್ನು ಹೊತ್ತುಕೊಂಡು ತಿರುಗಿದರೆ ಓಟು ಯಾರು ಹಾಕುತ್ತಾರೆ.

ಬಿಜೆಪಿಯವರು ಬಿಹಾರದ ಚುನಾವಣೆಗೆ ತಮ್ಮ ಪಕ್ಷದ ಎಲ್ಲಾ ಮುಖ್ಯಮಂತ್ರಿಗಳನ್ನೂ ಕರೆಸಿ ಪ್ರಚಾರ ಭಾಷಣ ಮಾಡಿಸಿದರು, ದೆಹಲಿಯ ಮುಖ್ಯಮಂತ್ರಿಯಾಗಿ ಒಂದು ವರ್ಷವೂ ಆಗಿಲ್ಲ, ಅಂತಹವರನ್ನು ಸಹ ಬಿಜೆಪಿ ಕರೆಸಿ ಭಾಷಣ ಮಾಡಿಸುತ್ತದೆ, ಇದರ ಜೊತೆಗೆ ಇತ್ತೀಚೆಗೆ ಆಯ್ಕೆಯಾದ 8 ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಪ್ರಚಾರ ಮಾಡುವುದಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ, ಗೋವಾ ಮುಖ್ಯಮಂತ್ರಿಗಳನ್ನೆಲ್ಲಾ ಕರೆಸಿ ಚುನಾವಣಾ ಭಾಷಣ ಮಾಡಿಸಿದರು.

ಕಾಂಗ್ರೆಸ್‍ನವರಿಗೆ ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಎಂದು ಇದ್ದವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರನ್ನು ಒಂದು ದಿನಕ್ಕೂ ಬಿಹಾರದ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಲಿಲ್ಲ, ಎಲ್ಲಿ ಸಿದ್ದರಾಮಯ್ಯ ಹೋಗಿ ಮಾತನಾಡಿದರೆ ರಾಹುಲ್ ಗಾಂಧಿ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಸಣ್ಣತನವನ್ನು ತೋರಿಸಿದಾಗ ಜನರು ಹೇಗೆ ಕಾಂಗ್ರೆಸ್‍ನ್ನು ನಂಬುತ್ತಾರೆ, ಜನ ಇವರಿಗೆ ಯಾಕೆ ಓಟು ಹಾಕುತ್ತಾರೆ.

ಹೊಸ ತಲೆಮಾರುಗಳಿಗೆ ಪಕ್ಷ ಕಟ್ಟುವ ಜವಾಬ್ದಾರಿಯನ್ನು ನೀಡದೆ ಕುಟುಂಬ ರಾಜಕಾರಣವನ್ನು ಪೋಷಿಸಿಕೊಂಡು ಬರುತ್ತಾ, ನಾನು ಆದ ಮೇಲೆ ನನ್ನ ಮಗ, ಮಗ ಆದ ಮೇಲೆ ಮೊಮ್ಮಗ ಎಂದುಕೊಂಡು ಹೊಸ ಮುಖಗಳಿಗೆ, ಯುವಕರಿಗೆ ಪಕ್ಷಕಟ್ಟುವ ಮತ್ತು ಪಕ್ಷದಲ್ಲಿ ಸ್ಥಾನಮಾನಗಳನ್ನು ನೀಡುವ ಗೋಜಿಗೆ ಹೋಗುತ್ತಿಲ್ಲ, ಬರೀ ಜೀ ಹುಜೂರ್ ಎಂಬ ಹಳಸಲು ಮುಖಗಳಿಗೆ ಜೈ ಎನ್ನುವುದರಿಂದ ಯುವಕರ ಹೊಸ ಆಲೋಚನೆಗಳು ಕಾಂಗ್ರೆಸ್‍ನಲ್ಲಿ ಎಲ್ಲಿದೆ.

ಜನ ಏನು ದಡ್ಡರೇ, ಇವರು ಯುವಕರ ಪಡೆ ಕಟ್ಟದೆ, ಯುವಕರ ಚಿಂತನೆಗಳಿಗೆ, ಯುವಕರ ನಾಯಕತ್ವಕ್ಕೆ ಮೂರು ಕಾಸಿನ ಬೆಲೆ ಇಲ್ಲದ ಮೇಲೆ ಪಕ್ಷವನ್ನು ಯಾರು ಕಟ್ಟುತ್ತಾರೆ, ಯಾರಾದರೂ ಪಕ್ಷ ಕಟ್ಟಲು ಯುವಕರು ಮುಂದೆ ಬಂದರೆ ಆತನನ್ನು ತಬ್ಬಿಕೊಂಡು ಜವಾಬ್ದಾರಿಗಳನ್ನು ನೀಡುವುದು ಬಿಟ್ಟು ಆತನಿಗೆ ಯಾವುದೇ ಸ್ಥಾನಮಾನ ನೀಡದೆ ಹಳಸಲು ನಾಯಕರು ಹೇಳಿದಂತೆ ಕೇಳು, ಅವರು ಹೇಳಿದರೆ ನಿನಗೆ ಸ್ಥಾನಮಾನ, ಟಿಕೆಟ್ ಎಂದರೆ ಪಕ್ಷ ಕಟ್ಟುವವರು ಯಾರು?

ಈಗ ಕಾಂಗ್ರೆಸ್ ಪಕ್ಷ ಜನರ ಜೊತೆ ಸಂಪರ್ಕವನ್ನೇ ಇಟ್ಟುಕೊಂಡಿಲ್ಲ, ಅದೇ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ, ಜನರು ಏನು ಯೋಚನೆ ಮಾಡುತ್ತಾರೆ, ಜನ ಏನನ್ನು ಬಯಸುತ್ತಾರೆ ಎಂಬ ಆಲೋಚನೆಗಳೇ ಇಲ್ಲ, ಕಾಂಗ್ರೆಸ್‍ನ ಹಳೆ ಮುಖಗಳು ಹೇಳುವುದನ್ನು ಜನ ಕೇಳಬೇಕೆಂದು ಕಾಂಗ್ರೆಸ್ ನಾಯಕರು ಬಯಸುತ್ತಾರೆ, ಇಂದು ಮನೆಯ ಮಕ್ಕಳೇ ನಮ್ಮ ಮಾತು ಕೇಳುವುದಿಲ್ಲ ಮೊದಲು ಆಫ್‍ಡೇಟ್ ಆಗು ಎನ್ನುತ್ತಾರೆ, ನಾವು ದರ್ಪದಿಂದ ಮಾತನಾಡಿದರೆ ನಮ್ಮ ಹೆತ್ತಮಕ್ಕಳೇ ನಮ್ಮ ಮಾತು ಕೇಳುವುದಿಲ್ಲ, ಇನ್ನ ಜನ ಇವರ ಮಾತು ಹೇಗೆ ಕೇಳುತ್ತಾರೆ.

ಕಾಂಗ್ರೆಸ್‍ನವರು ಜನ ಏನು ಯೋಚನೆ ಮಾಡುತ್ತಾರೆ, ಗ್ರೌಂಡ್ ಲೆವೆಲ್‍ನಲ್ಲಿ ವಸ್ತುಸ್ಥಿತಿ ಏನಿದೆ, ಜನರ ಆಶೋತ್ತರಗಳೇನು, ಅಕಾಂಕ್ಷೆಗಳೇನು, ಎಂಬುದರ ಬಗ್ಗೆಯೇ ಕಾಂಗ್ರೆಸ್‍ನವರಿಗೆ ತಿಳುವಳಿಕೆಯೇ ತಿಳುವಳಿಕೆಯೇ ಇಲ್ಲ. ತಿಳುವಳಿಕೆ ಇರುವವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವುದಿಲ್ಲ.

ಕಾಂಗ್ರೆಸ್‍ನವರು ತಮ್ಮ ಇತಿಹಾಸವನ್ನೊಮ್ಮೆ ಓದಿಕೊಳ್ಳಲಿ ಅಥವಾ ತಿರುಗಿ ನೋಡಲಿ, ಸ್ವಾತಂತ್ರ್ಯಕ್ಕೂ ಮುಂಚೆ ಪ್ರತಿ ವರ್ಷ ಕಾಂಗ್ರೆಸ್ ಸಮಾವೇಶಗಳನ್ನು ಮಾಡುತ್ತಿದ್ದರು, ಪ್ರತಿ ವರ್ಷ ಅಧ್ಯಕ್ಷರ ಚುನಾವಣೆ ನಡೆಯುತ್ತಿತ್ತು, ಅಮೇಲೆ ಎಐಸಿಸಿ ಸದಸ್ಯರುಗಳ ಚುನಾವಣೆ ನಡೆಯುತ್ತಿತ್ತು, ಸಿಡಬ್ಲುಸಿ ಮೆಂಬರ್ಸ್ ಚುನಾವಣೆ ಆಗುತ್ತಿತ್ತು, ಮೂರು ದಿನ ಸಮಾವೇಶ ಮಾಡಿ ಮೂರು ದಿನದಲ್ಲಿ ಇಡೀ ದೇಶದ ಸಮಸ್ಯೆಯೇನು ಎಂದು ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಚರ್ಚೆ ನಡೆಯುತ್ತಿತ್ತು, ಸಮಸ್ಯೆಯೇನು, ಅದಕ್ಕೆ ಪರಿಹಾರವೇನು ಎಂಬುದನ್ನು ಪ್ರತಿಯೊಂದು ಭಾಗದಿಂದ ಬಂದ ಜನ ತಾಳ್ಮೆಯಿಂದ ಹೇಳಿ, ಕೇಳಿ ಅದಕ್ಕೊಂದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು, ಇಡೀ ನಾಯಕರೆಲ್ಲರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಈಗ ಯಾರು ಮಾತನಾಡುವಂತೆಯೂ ಇಲ್ಲ, ಅಭಿಪ್ರಾಯ ಮಂಡಿಸುವಂತೆಯೂ ಇಲ್ಲ.

ಏನೇ ಮಾತನಾಡಿದರೂ ರಾಹುಲ್‍ಗಾಂಧಿ ಒಂಬರೇ ಮಾತನಾಡಬೇಕು, ಇನ್ಯಾರೂ ಮಾತನಾಡುವಂತಿಲ್ಲ, ಇದಕ್ಕೆ ಒಂದು ಉದಾಹರಣೆ ಎಂದರೆ ಕಾಂಗ್ರೆಸ್ ನ ಒಬ್ಬ ಬುದ್ದಿವಂತ ಶಶಿತರೂರು ಎಐಸಿಸಿ ಅಧ್ಯಕ್ಷ ಚುನಾವಣೆಗೆ ನಿಂತುಕೊಂಡರು. ಶಶಿತರೂರು ಚುನಾವಣೆಗೆ ನಿಂತುಕೊಂಡರು ಎಂಬ ಒಂದೇ ಕಾರಣಕ್ಕೆ ಅವರನ್ನು ಮೂಲೆ ಗುಂಪು ಮಾಡಲಾಯಿತು, ಶಶಿತರೂರು ಮಧ್ಯಮ ವರ್ಗಕ್ಕೆ, ಮೇಲ್ವರ್ಗದ ಜನಕ್ಕೆ ಇಷ್ಟವಾಗುತ್ತಿದ್ದರು(ಅಫೀಲಾಗುತ್ತಿದ್ದರು), ಬುದ್ದಿವಂತ, ಚೆನ್ನಾಗಿ ಮಾತನಾಡುತ್ತಿದ್ದರು, ಅದೇ ರೀತಿ ಪಂಚಾಯತ್ ರಾಜ್ ಬಗ್ಗೆ ತುಂಬಾ ತಿಳಿದುಕೊಂಡಿದ್ದ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಆಪ್ತರಾಗಿದ್ದ, ಪಂಚಾಯತ್ ರಾಜ್ ಮಸೂದೆ-73 ಜಾರಿಗೆ ತಂದು ದೇಶದಲ್ಲಿ ಸ್ಥಳಿಯ ಸಂಸ್ಥೆಗಳಿಗೆ ಅಧಿಕಾರ ನೀಡಿದ ಬುದ್ದಿವಂತ ಮಣಿಶಂಕರ್ ಅಯ್ಯರ್ ಅಂತಹವರನ್ನೆಲ್ಲಾ ಮೂಲೆಗುಂಪು ಮಾಡಿದರು, ಹೀಗೆ ಮಾಡಿದಾಗ ಇವರ ಜೊತೆ ಜನ ಹೇಗೆ ನಿಲ್ಲುತ್ತಾರೆ, ಬೆರೆಯುತ್ತಾರೆ.

ಬಿಹಾರದ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ, ಆಗೊಮ್ಮೆ, ಈಗೊಮ್ಮೆ ಪ್ರಿಯಾಂಕ ಗಾಂಧಿ ಬಿಟ್ಟರೆ ಇನ್ಯಾರು ಹೋಗಲಿಲ್ಲ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಇವರನ್ನೆಲ್ಲಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಕಿತ್ತು, ಆದರೆ ಇಲ್ಲಿ ಭಯವೇನೆಂದರೆ ಸಿದ್ದರಾಮಯ್ಯ ಬಂದು ಮಾತನಾಡಿದರೆ, ಸಿದ್ದರಾಮಯ್ಯ ಜನಪ್ರಿಯವಾಗಿ ಬಿಟ್ಟು, ರಾಹುಲ್ ಗಾಂಧಿ ಜನಪ್ರಿಯತೆ ಕಡಿಮೆಯಾಗುತ್ತದೆ ಎಂಬ ಆತಂಕ, ಇಂತಹ ಸಣ್ಣತನಕ್ಕೆ ಇವರನ್ನು ಏನು ಮಾಡುವುದು, ಜನ ಹೇಗೆ ನಂಬುತ್ತಾರೆ.

ಇದೆಲ್ಲಾ ಕೆಲವರಿಗೆ ಗೊತ್ತಾದರೂ ಕಾಂಗ್ರೆಸ್‍ನ ಪಟ್ಟಭದ್ರ ಹಿತಾಶಕ್ತಿಯಿಂದ ಹೊಸಬರು ಬಂದು ನಮ್ಮ ಪಟ್ಟಭದ್ರ ಸ್ಥಾನವನ್ನು ಕಿತ್ತುಕೊಂಡು ಬಿಡುತ್ತಾರೋ ಎಂಬ ಭಯ ಅವರನ್ನು ಕಾಡುತ್ತಾ ಇದೆ, ಇದರಿಂದ ಅವರೇ ಇರಬೇಕು, ಅವರಿಗೆ ಜೀ ಹುಜೂರ್ ಎಂಬುವರೇ ಇರಬೇಕು.

ಈಗ ನೋಡಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ, ಪಕ್ಷದಲ್ಲಿ ಪ್ರಜಾಸತಾತ್ಮತೆ ಇದ್ದು, ಮಾತನಾಡುವ ಸ್ವಾತಂತ್ರ್ಯ ಇದ್ದರೆ, ಚರ್ಚೆ ಮಾಡ್ತಾ ಇದ್ದರೆ, ಒಂದು ಪರಿಹಾರ ಸಿಗುತ್ತದೆ, ಚರ್ಚೆಯನ್ನೇ ಮಾಡುವಂತಿಲ್ಲ ಎಂದರೆ ಯಾರು ಕೇಳುತ್ತಾರೆ, ಕಳೆದ ಇಪ್ಪೈದು, ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಜಿಲ್ಲಾ ಮಟ್ಟದಲ್ಲಿ ಸಮಾವೇಶ, ಕಾರ್ಯಕರ್ತರ ಸಭೆ, ಡಿಸಿಸಿ ಮೆಂಬರ್ಸ್‍ಗಳ ಸಭೆ ಮಾಡಿ, ನಮ್ಮ ಜಿಲ್ಲೆ ಏನು, ನಮ್ಮ ಜಿಲ್ಲೆ ಸಮಸ್ಯೆಯೇನು, ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿಯೇ ಇಲ್ಲ.

ಎನ್‍ಎಸ್‍ಯುಐ, ಯೂತ್ ಕಾಂಗ್ರೆಸ್ ಎಂಬ ಕಾಂಗ್ರೆಸ್‍ನ ಈ ಎರಡೂ ಘಟಕಗಳು ಐಸಿಯುಗೆ ಸೇರಿ ಎಷ್ಟೋ ವರ್ಷಗಳಾಗಿವೆ.

ಇಷ್ಟೆಲ್ಲಾ ಇದ್ದರೂ ದೇಶದಲ್ಲಿ ಒಂದು ಚಿಂತನ-ಮಂಥನ ಮಾಡದ ಕಾಂಗ್ರೆಸ್ ಜನರ ಮನಸ್ಸಿಗೆ ಹೋಗಲು ಸಾಧ್ಯವೇ, ಲೋಕಸಭೆಯಲ್ಲಿ ಬಿಜೆಪಿಗೆ ಸ್ವಲ್ಪ ಹೊಡೆತ ಬಿದ್ದ ಕೂಡಲೇ ಎಚ್ಚೆತ್ತು ಆರಾರು ತಿಂಗಳಿಗೊಂದರಂತೆ ಸಭೆ ಮಾಡಿ, ಎಲ್ಲಿ ಎಡವಿದೆವು ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಲೋಕಸಭೆ ಚುನಾವಣೆಯಾದ ಮೇಲೆ ದೇಶದಲ್ಲಿ 8 ಚುನಾವಣೆಗಳಾಗಿವೆ, 8 ಚುನಾವಣೆಗಳಲ್ಲೂ ಗೆದಿದ್ದಾರೆ. ಇತರೆ ಪಕ್ಷಗಳನ್ನು ಸ್ವೀಪ್ ಮಾಡಿದರು, ಬಿಜೆಪಿಯವರಿಗೆ ಆಗಿದ್ದು, ಕಾಂಗ್ರೆಸ್‍ನವರಿಗೆ ಯಾಕೆ ಆಗುತ್ತಿಲ್ಲ, ಇವರು ಚುನಾವಣೆ ಬರುವತನಕ ನಿದ್ದೆ ಮಾಡುತ್ತಿದ್ದು, ಚಿನಾವಣೆ ಬಂದಾಗ ಎದ್ದೇಳುತ್ತಾರೆ, ಹೀಗಾದರೆ ಕಾಂಗ್ರೆಸ್‍ನ್ನು ಯಾರು ಒಪ್ಪುತ್ತಾರೆ, ಯಾರು ಓಟು ಹಾಕುತ್ತಾರೆ.

2020ರಲ್ಲಿ ಎನ್‍ಡಿಎ ಮತ್ತು ಇಂಡಿಯಾ ಒಕ್ಕೂಟದ ಮತ ಗಳಿಕೆ ಪ್ರಮಾಣ ಶೇಕಡ 37%ರಷ್ಟಿತ್ತು. ಈ ಬಾರಿಯ 2025ರ ಚುನಾವಣೆಯಲ್ಲಿ ಎನ್‍ಡಿಎ ಮತ ಗಳಿಕೆಯ ಪ್ರಮಾಣ ಶೇ.37%ರಿಂದ ಶೇ.48ಕ್ಕೆ ವಿಸ್ತರಣೆ ಮಾಡಿಕೊಂಡಿತು, ಆದರೆ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ಆರ್‍ಜೆಡಿ ಮತಗಳಿಕೆ ಪ್ರಮಾಣ ಶೇ.37%ರಲ್ಲೆ ಇದೆ. ಅಂದರೆ ಕಳೆದ 5ವರ್ಷದಲ್ಲಿ ಇಂಡಿಯಾ ಒಕ್ಕೂಟ ತಮ್ಮ ಮತ ಗಳಿಕೆಯ ಪ್ರಮಾಣದ ನೆಲೆಯನ್ನು ವಿಸ್ತರಣೆ ಮಾಡಿಕೊಳ್ಳಲು ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ಆರ್‍ಜೆಡಿ ಯಾವುದೇ ಕೆಲಸ ಮಾಡಿಲ್ಲ ಇದೂ ಕೂಡ ಬಿಹಾರದ ಸೋಲಿಗೆ ಒಂದು ಪ್ರಮುಖ ಕಾರಣವಿರಬಹುದು.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಮಹಾನಗರ ಪಾಲಿಕೆ ಚುನಾವಣೆಗಳನ್ನು ನಡೆಸಿ ಜನ ಸಾಮಾನ್ಯರಿಗೆ ಅಧಿಕಾರ ನೀಡುವ ಬದಲು ಅಧಿಕಾರವನ್ನು ಕೇಂದ್ರೀಕರಣ ಮಾಡಿಕೊಂಡು ಅಧಿಕಾರವನ್ನೆಲ್ಲಾ ಪಟ್ಟಭದ್ರ ಶಾಸಕರ ಬಳಿಯೇ ಇರಬೇಕು ಎಂಬ ಧೋರಣೆಯನ್ನು ಅನುಸರಿಸಲಾಗಿದೆ.

ಮತಗಳ್ಳತನ ಎಂದು ಮಾತನಾಡುವ ಕಾಂಗ್ರೆಸ್, ಮೊದಲು ತನ್ನ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದನ್ನು ನೋಡಿಕೊಳ್ಳಬೇಕಿದೆ, ಮತಗಳ್ಳತನ ಮಾಡಿ ಅಷ್ಟೊಂದು ಸೀಟುಗಳನ್ನು ಬಿಜೆಪಿ ಗೆಲ್ಲಲು ಸಾಧ್ಯವೇ, ಮೊದಲು ತನ್ನ ಪಕ್ಷದಲ್ಲಿ ಪಟ್ಟಭದ್ರ ಹಿತಾಸಕ್ತಿ, ಜೀ ಹುಜೂರ್, ಹಳಸಲು ಮುಖಗಳನ್ನು ಓಡಿಸಿ, ಯುವಕರ ಆಲೋಚನೆಗಳೊಂದಿಗೆ, ಯುವಕರನೊಳಗೊಂಡ ತಳ ಮಟ್ಟದ ನಾಯಕರುಗಳನ್ನು ಕಾಂಗ್ರೆಸ್ ಪಕ್ಷ ಹುಟ್ಟು ಹಾಕದಿದ್ದರೆ ಕೆಲವೇ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಸೋತು ಸುಣ್ಣವಾಗಿ ಮೂಲೆ ಗುಂಪಾಗಲಿದೆ.
ಈಗಲಾದರೂ ಕಾಂಗ್ರೆಸ್ ಪಕ್ಷವನ್ನು ಹೊತ್ತು ತಿರುಗುತ್ತಿರುವ ಹಗಲುಗನಸ್ಸಿನ ರಾಜಕೀಯ ಭೌದ್ಧಿಕ ದಾರಿದ್ರರು ಎನಿಸಿಕೊಂಡಿರುವ ಸಮಾಜವಾದಿಗಳು, ಲೋಹಿಯಾವಾದಿಗಳು, ಪ್ರಗತಿಪರರು, ಕಾಂಗ್ರೆಸ್‍ನ ವಂದಿಮಾದರು ಎಚ್ಚತ್ತುಕೊಳ್ಳದಿದ್ದರೆ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಸುಮ್ಮಿನಿರುವುದು ಒಳಿತು.
-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *