ತುಮಕೂರು : ಮಕ್ಕಳು ಪುಸ್ತಕ ಓದುವ ಸಂಸ್ಕøತಿ ಬೆಳೆಸಿಕೊಳ್ಳಬೇಕು. ಓದುವುದರಿಂದ ಜ್ಞಾನ ಬೆಳೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಾಧನೆ ಮಾಡಿದವರೆಲ್ಲಾ ಪುಸ್ತಕ ಓದಿ ಉನ್ನತ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಎಂದು ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ: ಶಿವಶಂಕರ ಕಾಡದೇವರಮಠ ಹೇಳಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ-ಜಿಲ್ಲಾ ಕೇಂದ್ರ ಗ್ರಂಥಾಲಯ, ಇನ್ನರ್ ವ್ಹೀಲ್ ಸಂಸ್ಥೆ, ಗ್ರಂಥಾಲಯ ಸಂಘದ ಆಶ್ರಯದಲ್ಲಿ ಸೋಮವಾರ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಸಮಾರಂಭವನ್ನು ಉದ್ಘಾಟಿಸಿದ ಅವರು, ಈಗ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಮಾತು ಸುಳ್ಳು, ಓದುಗರ ಸಂಖ್ಯೆ, ಓದುವ ಹವ್ಯಾಸ ಬೆಳೆಯುತ್ತಲೇ ಇದೆ. ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ, ಏಕಾಗ್ರತೆ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಹಿರಿಯರು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.

ತಮ್ಮ ರೀಡ್ ಬುಕ್ ಫೌಂಡೇಶನ್‍ನಿಂದ 42 ಸಾವಿರ ಪುಸ್ತಕಗಳನ್ನು ಓದುಗರಿಗೆ ಕೊಡಲಾಗಿದೆ. ರಾಜ್ಯದ 450ಕ್ಕೂ ಹೆಚ್ಚು ಶಾಲೆಗಳಲ್ಲಿ ಪುಸ್ತಕ ಓದುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಲ್ಲಿ ಓದುವ ಸಂಸ್ಕøತಿಯನ್ನು ಬೆಳೆಸಲಾಗುತ್ತಿದೆ. ಡಾ: ಎ.ಪಿ.ಜೆ.ಅಬ್ದುಲ್ ಕಲಾಂ, ಡಾ: ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಡಾ: ಶಿವಕುಮಾರ ಸ್ವಾಮೀಜಿಯಂತಹ ಮಹನೀಯರು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ಸಂಪಾದಿಸಿ ಉನ್ನತ ಸ್ಥಾನ ಗಳಿಸಿದ್ದರು ಎಂದರು.
ಪುಸ್ತಕ ಓದುವ ಆಂದೋಲನವಾಗಿ ‘ಓದು ಕರ್ನಾಟಕ’ ಎಂಬ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದ್ದು, ಡಿಸೆಂಬರ್ 18ರಂದು ತುಮಕೂರಿನಲ್ಲಿ ಉದ್ಘಾಟನೆಯಾಗಲಿದೆ. ನಗರದ ಎಲ್ಲಾ 35 ವಾರ್ಡುಗಳಲ್ಲಿ 35 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಶಾಲಾ ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕøತಿ ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶಿವಶಂಕರ ಕಾಡದೇವರಮಠ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ: ರೂಪೇಶ್‍ಕುಮಾರ್ ಮಾತನಾಡಿ, ಸಾರ್ವಜನಿಕ ಗ್ರಂಥಾಲಯ ಎಂಬುದು ಸಾರ್ವಜನಿಕ ವಿಶ್ವವಿದ್ಯಾಲಯ. ಸಾರ್ವಜನಿಕ ಗ್ರಂಥಾಲಯ ಜೀವನ ಪಯಾರ್ಂತ ಎಲ್ಲರಿಗೂ ಜ್ಞಾನವನ್ನು ಧಾರೆ ಎರೆಯುವ, ವ್ಯಕ್ತಿತ್ವ ರೂಪಿಸುವ ಸಂಸ್ಥೆ. ಗ್ರಂಥಾಲಯವು ಸಮಾಜದ ಮೇಲೆ ತನ್ನದೇ ಆದ ವಿಶೇಷ ಪರಿಣಾಮವನ್ನು ಬೀರುತ್ತದೆ ಎಂದರು.
ಭಾರತದ ಅನೇಕ ಸಮಸ್ಯೆಗಳಿಗೆ ಅನಕ್ಷರತೆ ಕಾರಣ. ದೇಶದಲ್ಲಿ ಸಾಕ್ಷರತಾ ಪ್ರಮಾಣ ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಸಹಕಾರಿ. ಓದುವುದರಿಂದ ಬೌದ್ಧಿಕ ಗುಣಮಟ್ಟ, ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬೆಳೆಯುತ್ತದೆ. ಇಂತಹ ಗ್ರಂಥಾಲಯ ಹಲವು ಪೀಳಿಗೆಗೆ ಜ್ಞಾನ ನೀಡುವ ಪರಂಪರಾಗತ ಸಂಸ್ಥೆ ಎಂದು ಹೇಳಿದರು.
ನಗರ-ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ದಿವಾಕರ್ ಮಾತನಾಡಿ, ಪುಸ್ತಕ ಓದುವ ಮೂಲಕ ಅಧ್ಯಯನಶೀಲತೆ, ಸಂಸ್ಕಾರ, ಪರಿಶ್ರಮದ ಪ್ರಯತ್ನದಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಓದುವುದು ಎಂಬುದು ಜ್ಞಾನದ ಹಸಿವು. ಈ ಹಸಿವು ಇಂಗಿಸಿಕೊಳ್ಳಲು ಪುಸ್ತಕಗಳೇ ಆಹಾರ ಎಂದರು.
ಜ್ಞಾನ ಎಂಬುದು ಸಮುದ್ರ ಇದ್ದಂತೆ, ಎμÉ್ಟೀ ತಿಳಿದರೂ ಅಲ್ಪವೇ. ಪೆÇೀಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದ ಅವರು, ನಗರದ ಗ್ರಂಥಾಲಯದಲ್ಲಿ ನಿತ್ಯ ಸುಮಾರು 800 ವಿದ್ಯಾರ್ಥಿಗಳು ನಿಯಮಿತ ಓದುಗರಾಗಿದ್ದಾರೆ. ಇಲ್ಲಿ ನಿರಂತರ ಓದಿ ಜ್ಞಾನ ಬೆಳೆಸಿಕೊಂಡ ಹಲವರು ಸರ್ಕಾರಿ ಉದ್ಯೋಗ, ವಿವಿಧ ಉನ್ನತ ಸ್ಥಾನಮಾನ ಪಡೆದಿದ್ದಾರೆ ಎಂದರು.
ಸಿ.ವಿ.ರಾಮನ್ ಸಂಶೋಧನಾ ಕೇಂದ್ರದ ಗ್ರಂಥಾಲಯ ಮುಖ್ಯಸ್ಥ ನಾಗರಾಜು, ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್, ಕಾರ್ಯದರ್ಶಿ ಸುಮಿತ್ರಾ ನಾಗರಾಜು, ಗ್ರಂಥಪಾಲಕ ಬಸವರಾಜು, ಬಿ.ಎಸ್.ವಿಜಯಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಓದುಗರಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ರಂಗೋಲಿ ಸ್ಪರ್ಧೆಯ ವಿಜೇತರಿಗೆ, ಗ್ರಂಥಾಲಯದ ಉತ್ತಮ ಓದುಗರಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಸರ್ಕಾರಿ ಉದ್ಯೋಗ ಪಡೆದವರನ್ನು ಗೌರವಿಸಲಾಯಿತು.