ರಂಗ ಚಟುವಟಿಕೆಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿದೆ-ಕೆ. ದೊರೈರಾಜು

ತುಮಕೂರು ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ ಎಂದು ಪ್ರಗತಿ ಪರ ಚಿಂತಕ ದೊರೈರಾಜು ಅವರು ಅಭಿಪ್ರಾಯಪಟ್ಟರು.

ಅವರು ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮೈಸೂರು ರಂಗಾಯಣ ವತಿಯಿಂದ ಆಯೋಜಿಸಲಾಗಿದ್ದ ರಂಗ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೈಸೂರಿನ ರಂಗಾಯಣ ತುಮಕೂರಿನಲ್ಲಿ ಒಂದು ವಾರಗಳ ಕಾಲ ರಂಗ ಉತ್ಸವ ಆಚರಿಸುತ್ತಿರುವುದು ಖುಷಿಯ ಸಂಗತಿ. ಈ ಮೂಲಕ ರಂಗಭೂಮಿ ಹೆಚ್ಚೆಚ್ಚು ಸಕ್ರಿಯಗೊಳ್ಳುವಂತಾಗಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಜೀವನೋತ್ಸಾಹ ತುಂಬುವಂತಹ ಕಥಾ ಹಂದರಗಳುಳ್ಳ ನಾಟಕಗಳು ಹೆಚ್ಚೆಚ್ಚು ಬರಲಿ ಎಂದ ಅವರು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕುಟುಂಬದ ಎಲ್ಲರಿಗಾಗಿ ಈ ನಾಟಕ ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದರು.

ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ ರಂಗಾಯಣ ಮೈಸೂರು ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯ ಮೂಲಕ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಮಾನಸಿಕ ಹಾಗೂ ದೈಹಿಕ ಸಹಜ ವಿಕಾಸಕ್ಕೆ ಪೂರಕವಾಗುವಂತೆ ಈ ರಂಗ ಉತ್ಸವ ಹಮ್ಮಿಕೊಂಡಿದೆ ಎಂದರು.

ನಾಟಕಗಳನ್ನು ಪ್ರದರ್ಶಿಸುವ ಮೂಲಕ ಆರೋಗ್ಯಕರ ರಂಜನೆ ಕೊಡುವುದರ ಜೊತೆಗೆ ಅವರಲ್ಲಿ ಹೊಸ ಬಗೆಯ ಸಾಂಸ್ಕøತಿಕ ಎಚ್ಚರವನ್ನು ಮೂಡಿಸುವುದು, ಸಾಮಾಜಿಕ ಅರಿವು, ವ್ಯಕ್ತಿತ್ವ ಹಾಗೂ ಕಲ್ಪನಾ ಶಕ್ತಿಯನ್ನು ವಿಸ್ತಾರಗೊಳಿಸುವುದು ಈ ರಂಗ ಉತ್ಸವದ ಆಶಯವಾಗಿದೆ ಎಂದರು.

ಮಕ್ಕಳಿಗಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಈ ಕಾಲವು ಸೃಷ್ಟಿಸುತ್ತಿರುವ ರಮ್ಯಲೋಕ ವಿನ್ಯಾಸಗಳು ಏಕಕಾಲದಲ್ಲಿ ಕಾಲ-ದೇಶ- ಭಾಷೆಗಳ ಹಂಗಿಲ್ಲದೆ ವಿವಿಧ ಲಯಗಳಲ್ಲಿ ಮಕ್ಕಳ ಪ್ರಜ್ಞೆಯನ್ನು ಪ್ರವೇಶಿಸಿ ಅವರ ನಿಜ ಜಗತ್ತಿನ ವಾಸ್ತವವಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ಮಗುವೂ ಸಮುದಾಯದಿಂದ ಬೇರ್ಪಟ್ಟು ಪ್ರತ್ಯೇಕವಾಗುತ್ತಿರುವಂತೆ ಭಾಸವಾಗುತ್ತಿದೆ. ಮಕ್ಕಳಷ್ಟೆ ಅಲ್ಲದೆ ಯುವ ಸಮುದಾಯಗಳೂ ಕೂಡ ಆಧುನಿಕ ತಂತ್ರಜ್ಞಾನದ ಭಾಗವಾಗುತ್ತಿರುವ ಕಾಲವನ್ನು ಸರಿಯಾಗಿ ಗ್ರಹಿಸಿ ಅರಿವಾಗಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ ಎಂದರು.

ಒಂದು ವಾರಗಳ ಕಾಲ ನಡೆಯುವ ಈ ಉತ್ಸವದಲ್ಲಿ 3 ಸಾವಿರ ಮಕ್ಕಳು ನಾಟಕ ನೋಡಲಿದ್ದಾರೆ. ಕೊನೆಯ ಎರಡು ದಿವಸ ಸಾರ್ವಜನಿಕ ಪ್ರದರ್ಶನಗಳು ಇರಲಿವೆ ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮಾತನಾಡಿ ಮೈಸೂರು ರಂಗಾಯಣ ತುಮಕೂರಿನಲ್ಲಿ ರಂಗ ಉತ್ಸವದ ಮೂಲಕ ಹೊಸ ಅಭಿಯಾನಕ್ಕೆ ಕಾರಣೀಭೂತವಾಗಿದೆ. ಈ ಹಿಂದೆ ಕೂಡ ಈ ನಾಟಕ ತುಮಕೂರಿನಲ್ಲಿ ಪ್ರದರ್ಶಿಸಲಾಗಿತ್ತು. ಪೋಷಕರಿಗೆ ಹಾಗೂ ಮಕ್ಕಳಿಗೆ ಉತ್ತಮ ಸಂದೇಶ ನೀಡುವ ಕಥಾ ಹಂದರ ಈ ನಾಟಕದಲ್ಲಿದೆ. ಹೆಚ್ಚೆಚ್ಚು ಮಕ್ಕಳು ಹಾಗೂ ಪೋಷಕರು ಈ ನಾಟಕ ನೋಡುವಂತಾಗಲಿ ಎಂದರು.

ಡಿಡಿಪಿಐ ರಘುಚಂದ್ರ ಮಾತನಾಡಿ ನಾಟಕ ಕಲೆಗಳು ಸದಾ ಜೀವಂತವಾಗಿರುತ್ತದೆ. ಈಗ ಮೈಸೂರು ರಂಗಾಯಣ ಮಕ್ಕಳು ಹಾಗೂ ಪೋಷಕರನ್ನು ಗುರಿಯಾಗಿಸಿಕೊಂಡು ಮೈ ಫ್ಯಾಮಿಲಿ ನಾಟಕ ಪ್ರದರ್ಶಿಸುತ್ತಿರುವುದು ಸಮಯೋಚಿತವಾಗಿದೆ ಎಂದು ರಂಗ ಉತ್ಸವಕ್ಕೆ ಶುಭ ಕೋರಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ಮೈಸೂರು ರಂಗಾಯಣ ರಂಗ ಉತ್ಸವ ತುಮಕೂರು ಜಿಲ್ಲೆಯಲ್ಲಿ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಇಡೀ ರಾಜ್ಯದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮಾತನಾಡಿದರು. ಮೈಸೂರು ರಂಗಾಯಣ ಉಪನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಸ್ವಾಗತಿಸಿದರು.ರಂಗ ಉತ್ಸವದ ಸಂಚಾಲಕ ಯೋಗಾನಂದ ಅರಸೀಕೆರೆ ನಿರೂಪಿಸಿದರು. ವೇದಿಕೆಯಲ್ಲಿ ಸುನೀಲಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *