ತುಮಕೂರು : ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ರಾಗಿ ಕಟಾವು ಯಂತ್ರದ ಬಾಡಿಗೆ ದರವನ್ನು ಪ್ರತೀ ಗಂಟೆಗೆ 2,700 ರೂ.ಗಳನ್ನು ನಿಗದಿಗೊಳಿಸಲಾಗಿದೆ ಎಂದು ತಹಸೀಲ್ದಾರ್ ರಾಜೇಶ್ವರಿ ಹೇಳಿದರು.
ರಾಗಿ ಬೆಳೆ ಕಟಾವು ಯಂತ್ರಗಳಿಗೆ ದರ ನಿಗದಿಪಡಿಸಿರುವ ಕುರಿತು ತಾಲ್ಲೂಕು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ತಾಂತ್ರಿಕ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ರೈತರ ಅನುಕೂಲಕ್ಕಾಗಿ ಟ್ರ್ಯಾಕ್ಟರ್ ಚಾಲಿತ ಕಟಾವು ಯಂತ್ರಗಳಿಗೆ ಪ್ರತಿ ಗಂಟೆಗೆ 2400 ರೂ. ಹಾಗೂ ಕಂಬೈಂಡ್ ಹಾರ್ವೆಸ್ಟರ್(ಬೆಲ್ಟ್ ಮಾದರಿ) ಯಂತ್ರಕ್ಕೆ ಪ್ರತಿ ಗಂಟೆಗೆ 2700 ರೂ.ಗಳನ್ನು ನಿಗದಿಪಡಿಸಲಾಗಿದೆಯಲ್ಲದೆ ರಾಗಿ ಕಟಾವು ನಂತರ ಕಂತೆ ಮಾಡಲು ಬೇಲರ್‍ಗಳಿಗೆ ಪ್ರತಿ ಕಂತೆಗೆ 25 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿಯು ತಾಲ್ಲೂಕಿನಲ್ಲಿ ರಾಗಿ ಕಟಾವು ಮಾಡುವ ಪ್ರತಿ ಯಂತ್ರಗಳು ಸುಸ್ಥಿತಿಯಲ್ಲಿರುವಂತೆ ಗಮನವಿಡಬೇಕೆಂಬ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು. ಕಟಾವು ಯಂತ್ರದವರಿಂದ ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳಬೇಕು. ಕಟಾವಿನ ದರದಲ್ಲಿ ವ್ಯತ್ಯಾಸ ಹಾಗೂ ಸುಸ್ಥಿತಿಯಲ್ಲಿರದ ಯಂತ್ರಗಳ ಬಳಕೆಯಿಂದ ರೈತರಿಗೆ ರಾಗಿ ನಷ್ಟವಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಟಾವು ಯಂತ್ರಗಳ ವಿವರದ ಮಾಹಿತಿಯನ್ನು ಇಲಾಖೆ ಹೊಂದಿರಬೇಕು. ಇದರಿಂದ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮವಹಿಸಲು ಅನುಕೂಲವಾಗುತ್ತದೆ. ಸಹಾಯಕ ಕೃಷಿ ನಿರ್ದೇಶಕರು ರಾಗಿ ಕಟಾವು ಯಂತ್ರದ ಮಾಲೀಕರಿಂದ ಕಟಾವು ಯಂತ್ರದ ಆರ್.ಸಿ. ಪ್ರತಿ, ಚಾಲಕರ ಚಾಲನಾ ಪರವಾನಗಿ ಮತ್ತು ಆಧಾರ್ ಪ್ರತಿಯೊಂದಿಗೆ ಅರ್ಜಿ ಸ್ವೀಕರಿಸಿ ಅನುಮತಿ(ಪರ್ಮಿಟ್) ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪರವಾನಗಿ ಪಡೆಯದೆ ರಾಗಿ ಕಟಾವು ಮಾಡುವ ಯಂತ್ರಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ರಾಗಿ ಕಟಾವು ಯಂತ್ರದ ಬಾಡಿಗೆ ದರವನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದರೆ, ಪರ್ಮಿಟ್ ಪಡೆಯದೆ ಸುಸ್ಥಿತಿಯಲ್ಲಿರದ ಕಟಾವು ಯಂತ್ರಗಳನ್ನು ಬಳಕೆ ಮಾಡಿದರೆ ಕೂಡಲೇ ತಮ್ಮ ವ್ಯಾಪ್ತಿಯ ಕಂದಾಯ, ಕೃಷಿ, ಪೆÇಲೀಸ್, ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಭೇಟಿ ಮಾಡಿ ದೂರು ನೀಡುವ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಅವರು ತಿಳಿಸಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಹೆಚ್.ಬಿ. ದಿವಾಕರ್, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ: ಎನ್. ಲೋಗಾನಂದ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಎಸ್.ಜಿ. ದೇವರಾಜು, ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಸವರಾಜ ವಿ.ಎಸ್., ರೈತ ಮುಖಂಡ ಶ್ರೀನಿವಾಸ್‍ಬಾಬು, ಕೃಷಿ ಅಧಿಕಾರಿ ಹೆಚ್.ಎಸ್. ಹೇಮಂತ ಕುಮಾರ್ ಸೇರಿಂದತೆ ಮತ್ತಿತರರು ಭಾಗಿಯಾಗಿದ್ದರು.