ಕನ್ನಡ ಪಠ್ಯಪುಸ್ತಕಗಳನ್ನು ಸರಳಗೊಳಿಸಬೇಕು: ಪ್ರೊ. ಬಿಳಿಮಲೆ

ತುಮಕೂರು: ಕನ್ನಡ ಭಾಷೆಯ ಕಡೆಗೆ ಹೊಸ ತಲೆಮಾರಿನ ಆಸಕ್ತಿ ಕಡಿಮೆಯಾಗಿದೆ. ಕನ್ನಡ ಪತನಮುಖಿಯಾಗಿದೆ. ಕನ್ನಡದ ಬಗ್ಗೆ ಎಳೆಯರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳನ್ನು ಸರಳೀಕರಣಗೊಳಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮುಂದಿನ ಯುವ ಪೀಳಿಗೆಗೆ ಕನ್ನಡ ಕೀರ್ತಿ ಉಳಿಸುವಿಕೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಮಾತನಾಡಿದರು.

ತೊಂಬತ್ತರ ದಶಕದ ಜಾಗತೀಕರಣದ ಬಳಿಕ ಕನ್ನಡ ಭಾಷೆ ದುರ್ಬಲಗೊಳ್ಳುತ್ತ ಸಾಗಿದೆ. ಕರ್ನಾಟಕದಲ್ಲಿ ಬೇರೆ ಭಾಷಿಕರೇ ಹೆಚ್ಚಾಗಿದ್ದಾರೆ. ಇಲ್ಲಿನ ಕೈಗಾರಿಕೆಗಳಲ್ಲೂ ಹೊರರಾಜ್ಯದವರೇ ಹೆಚ್ಚಾಗಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಕನ್ನಡ ಭಾಷೆಗೆ ವಿಸ್ತಾರ ಪರಂಪರೆಯೇನೋ ಇದೆ, ಆದರೆ ಉತ್ತರಾಧಿಕಾರಿಗಳಿಲ್ಲ ಎಂದು ವಿಷಾದಿಸಿದರು.

ಜಾಗತೀಕರಣ ಅನೇಕ ಭಾಷೆಗಳ ಸಾವಿಗೆ ಕೂಡ ಕಾರಣವಾಗಿದೆ. ಕನ್ನಡಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯಿದೆ. ಆದರೆ ಕನ್ನಡದ ವಿಷಯದಲ್ಲಿ ನಾವು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮವಿಶ್ವಾಸವನ್ನು ಕಳೆದುಕೊಂಡರೆ ಕನ್ನಡವನ್ನೂ ಕಳೆದುಕೊಳ್ಳುತ್ತೇವೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಪಾನಂದಜಿ ಮಹಾರಾಜ್ ಮಾತನಾಡಿ, ಮಾತೃಭೂಮಿ, ಮಾತೃಭಾμÉ, ತಾಯಿಯನ್ನು ಗೌರವಹಿತವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಪಂಪ, ರನ್ನ, ಜನ್ನ ಅವರು ಬೆಳೆಸಿದ ಸಾಹಿತ್ಯ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇಂದು ಗುರು-ಶಿಷ್ಯರ ಪರಂಪರೆ ಬದಲಾಗಿದ್ದು ಅಂಕಗಳಿಗೆ ಮಾತ್ರ ಓದು ಮುಖ್ಯವಾಗಿದೆ ಜೀವನ ಮೌಲ್ಯವನ್ನು ಯುವ ಜನತೆ ಕಳೆದುಕೊಂಡಿದ್ದಾರೆ. ಹಳಗನ್ನಡ, ನಡುಗನ್ನಡ, ಆಧುನಿಕ ಕನ್ನಡದ ಅರ್ಥ ಮಾಡಿಕೊಂಡು ಪ್ರತಿಯೊಬ್ಬನೂ ಕನ್ನಡಿಗನೆಂದು ಗರ್ವದಿಂದ ಹೇಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡಿಗರ ಸಂಖ್ಯೆ ಕಡಿಮೆಯಾಗಿರುವುದು ವಿಷಾದನೀಯ. ಕನ್ನಡಿಗರಾದ ನಾವು ಕನ್ನಡಕ್ಕೆ ದ್ರೋಹ ಮಾಡದೆ ಕನ್ನಡವನ್ನು ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸೋಣ ಎಂದು ಹೇಳಿದರು.

ಪ್ರೇರಣಾ ಉಪನ್ಯಾಸ ಸಮಿತಿಯ ಅಧ್ಯಕ್ಷ ಪೆÇ್ರ. ಜಿ. ಸುದರ್ಶನ ರೆಡ್ಡಿ, ಸಂಚಾಲಕ ಡಾ. ನೀಲಕಂಠ ಎನ್.ಟಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *