ಸಂವಿಧಾನ ಕುರಿತ ಪ್ರಶ್ನೆಗೆ ಉತ್ತರಿಸಿ ಬಹುಮಾನ ಪಡೆದ ಮಕ್ಕಳು

ತುಮಕೂರು : ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಂವಿಧಾನದ ವಿವಿಧ ಅನುಚ್ಛೇದ ಹಾಗೂ ತಿದ್ದುಪಡಿ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ “ಭಾರತ ಸಂವಿಧಾನ ಪುಸ್ತಕ” ಬಹುಮಾನ ಹಾಗೂ ಸಿಹಿ ವಿತರಿಸಲಾಯಿತು.

ನಗರದ ಗುಂಚಿ ಚೌಕದಲ್ಲಿರುವ ಮೌಲಾನಾ ಆeóÁದ್ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಖಾಸಿಂ ಸಾಬ್ ಹಾಗೂ ಜೋಯನಾಜ್, ಬಿಕ್ಕೆಗುಡ್ಡ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಿಂಚನ ಹಾಗೂ ಮಂಜು, ಕೋರಾ ಗ್ರಾಮದ ಡಾ: ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿ ಚೇತನ್, ನಗರದ ಎಂಪ್ರೆಸ್ ಕೆಪಿಎನ್ ಶಾಲೆ ವಿದ್ಯಾರ್ಥಿ ಭಾರ್ಗವಿ ಸೇರಿದಂತೆ 5 ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪುಸ್ತಕ ಬಹುಮಾನ ಹಾಗೂ ಸಿಹಿ ವಿತರಿಸಿದರು.

ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನದಿಂದ ಸಮಾನತೆ, ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಶೋಷಣೆಯ ವಿರುದ್ಧ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು ದೊರೆತಿರುವುದರಿಂದ ನಾವೆಲ್ಲಾ ನೆಮ್ಮದಿಯಾಗಿ ಸಮಾಜದಲ್ಲಿ ಬದುಕುತ್ತಿದ್ದೇವೆ.  ಭಾರತದಲ್ಲಿ 1901ರಲ್ಲಿ ಶೇ.1ರಷ್ಟಿದ್ದ ಮಹಿಳೆಯರ ಸಾಕ್ಷರತಾ ಪ್ರಮಾಣ ಸಂವಿಧಾನದ ಹಕ್ಕುಗಳಿಂದ ಮಹಿಳೆಯರ ಸಾಕ್ಷರತಾ ಪ್ರಮಾಣ ಈಗ ಶೇ.80ಕ್ಕೆ ತಲುಪಿದೆ ಎಂದು ಸಂವಿಧಾನದ ಮಹತ್ವಗಳ ಬಗ್ಗೆ ವಿವರಿಸಿದರು. 

ವಿಶ್ವ ಶ್ರೇಷ್ಠ ಗ್ರಂಥ ನಮ್ಮ ಸಂವಿಧಾನ :-

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಆಧುನಿಕ ಇತಿಹಾಸದಲ್ಲಿ ನಮ್ಮ ಸಂವಿಧಾನವು ವಿಶ್ವ ಶ್ರೇಷ್ಠ ಗ್ರಂಥವೆನಿಸಿಕೊಂಡಿದೆ.  ಭಾರತ ಸಂವಿಧಾನ ಸಮರ್ಪಣೆಗೊಂಡ ದಿನದ ಸವಿನೆನಪಿಗಾಗಿ ಪ್ರತೀ ವರ್ಷ ನವೆಂಬರ್ 26ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತ ಸಂವಿಧಾನವು ನಮ್ಮ ಅಸ್ತಿತ್ವದ ಪ್ರತೀಕ. ಈ ಸುದಿನದಂದು ಸಂವಿಧಾನ ರಚನೆಗೆ ಕೊಡುಗೆ ನೀಡಿರುವ ಮಹನೀಯರ ಪರಿಶ್ರಮದ ಬಗ್ಗೆ ತಿಳಿಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಭಾರತ ಮೂಲ ಸಂವಿಧಾನವು 395 ಅನುಚ್ಛೇಧ, 22 ಭಾಗ ಹಾಗೂ 8 ಅನುಸೂಚಿಗಳನ್ನು ಒಳಗೊಂಡಿದೆ.  ಪ್ರಸ್ತುತ ಹಲವಾರು ತಿದ್ದುಪಡಿಯಾಗಿರುವುದರಿಂದ 448ಕ್ಕೂ ಹೆಚ್ಚು ಅನುಚ್ಛೇಧಗಳು, 25 ಭಾಗ ಹಾಗೂ 12 ಅನುಸೂಚಿಗಳನ್ನು ಒಳಗೊಂಡಿದೆಯಲ್ಲದೆ, ದೇಶದ ಪ್ರಜೆಗಳ ಹಿತ ಕಾಯುವ ಉದ್ದೇಶದಿಂದ ನೆಮ್ಮದಿಯಾಗಿ ಜೀವಿಸಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.

ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿದೆ. ಸಾಮಾನ್ಯ ವ್ಯಕ್ತಿಯು ತಾನು ಅನ್ಯಾಯಕ್ಕೊಳಗಾದಾಗ ನ್ಯಾಯಕ್ಕಾಗಿ ನೇರವಾಗಿ ಸರ್ವೋಚ್ಛ ನ್ಯಾಯಲಯದ ಮೆಟ್ಟಿಲೇರುವ ಹಕ್ಕನ್ನು ಈ ಸಂವಿಧಾನ ನೀಡಿದೆ.  ಅಲ್ಲದೆ, ಪ್ರತಿಯೊಬ್ಬರೂ ಶಾಂತಿ-ಸಹಬಾಳ್ವೆಯಿಂದ ಬದುಕಲು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಪ್ರತಿಯೊಬ್ಬರೂ ಸಂವಿಧಾನ ಪುಸ್ತಕವನ್ನು ಓದಿ ತಿಳಿಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ: ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. 

ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನವು ದೇಶದ ಪ್ರತಿ ಪ್ರಜೆಯ ಸ್ವಾಭಿಮಾನದ ಸಂಕೇತವಾಗಬೇಕು. ಸಂವಿಧಾನದ ಜಾಗೃತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚೊತ್ತಬೇಕು. ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು. ಈ ಆಶಯವನ್ನು ಸಾಕಾರಗೊಳಿಸುವ ದೃಷ್ಟಿಯಿಂದಲೇ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನದ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನವಾಗಿ ವಿತರಿಸುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿದೆ. ಸಂವಿಧಾನದ ಅರ್ಥ, ಮಹತ್ವ ಹಾಗೂ ಜವಾಬ್ದಾರಿಯನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ತಿಳಿಸಿದರು.
ನಂತರ ಡಾ: ಬಿ.ಆರ್. ಅಂಬೇಡ್ಕರ್‍ವಾದಿ, ಭಾಷಣಕಾರ ವಿ.ಎಲ್. ನರಸಿಂಹಮೂರ್ತಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಹನೀಯರಾದ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಭಾರತ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಭೂಮಿ ತಾಯಿ ಬಳಗದ ನಿರ್ಮಲ ಹಾಗೂ ತಂಡದವರು “ಜೈ ಭೀಮ್ ಮಹಾರಾಷ್ಟ್ರದ ಹಣತೆ-ನೀನೊಂದು ಮುಗಿಯದ ಚರಿತೆ”, “ಜಯಹೇ ಭಾರತ ಭಾಗ್ಯವಿಧಾತ-ಜಯವೇ ಸಂವಿಧಾನ ದಾತ”, “ಕತ್ತಲ ಜಗತಿಗೆ ಬೆಳಕನು ನೀಡಿದ ಅರಿವೇ ಅಂಬೇಡ್ಕರ-ದಿಕ್ಕು ದಿಕ್ಕಿಗೂ ಹೊಂಗಿರಣ ಬೀರಿದ ಗುರುವೇ ಅಂಬೇಡ್ಕರ” ಸೇರಿದಂತೆ ಹಲವಾರು ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಕುರಿತ ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಹಾಗೂ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಡಿಎಲ್‍ಬಿಸಿ ಸದಸ್ಯ ಶ್ರೀಧರ್, ಡಿಡಿಪಿಐ ರಘುಚಂದ್ರ, ಡಿಡಿಪಿಯು ಬಾಲಗುರುಮೂರ್ತಿ, ಬಿಇಓ ಹನುಮಂತಪ್ಪ, ವಿವಿಧ ದಲಿತ ಮುಖಂಡರು ಹಾಗೂ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಟೌನ್‍ಹಾಲ್ ವೃತ್ತದಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸುವ ಮೂಲಕ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಶೋಕ ರಸ್ತೆಯ ಮೂಲಕ ಎಂಪ್ರೆಸ್ ಕೆಪಿಎಸ್ ಕಾಲೇಜಿನವರೆಗೂ ಸಾಗಿದ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಲಿತ ಮುಖಂಡರು, ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *