ತುಮಕೂರು: ರಾಮಾಯಣದಲ್ಲಿ ಸೀತಾಮಾತೆಯು ಲಕ್ಷ್ಮಣ ರೇಖೆಯನ್ನು ದಾಟಿದಾಗ ಅಪಹರಣನಾದಳು, ಅಂತೆಯೇ ನಮ್ಮ ಸಂವಿಧಾನಾತ್ಮಕ ಕಾನೂನುಗಳನ್ನು ಮೀರಿದಾಗ ಬದುಕು ಅಸ್ತವ್ಯಸ್ತವಾಗುತ್ತದೆ, ಪ್ರಸ್ತುತ ಯುವಜನತೆ ಕಾನೂನು ಅರಿಯುವುದರ ಜೊತೆಗೆ ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಯಂತ ಕುಮಾರ್ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಬುಧವಾರ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
1949 ನವೆಂಬರ್ 26ರಂದು ಭಾರತ ಸಂವಿಧಾನ ಅಂಗೀಕಾರಗೊಂಡಿದ್ದದರ ದಿನವನ್ನು ಇಂದು ಸಂವಿಧಾನ ದಿನಾಚರಣೆ ಭಾರತಾದ್ಯಂತ ಸಂಭ್ರಮಿಸುತ್ತಿದ್ದೇವೆ. ಸಂವಿಧಾನದ ಮುಖ್ಯಸ್ಥರಾದ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾರತ ದೇಶದ ಅಭಿವೃದ್ದಿಯ ದೂರದೃಷ್ಟಿಯನ್ನು ಮತ್ತು ಭವಿಷ್ಯವನ್ನು ಹೊಂದಿದ್ದ ಬೃಹತ್ ಸಂವಿಧಾನವನ್ನು ನಾವಿಂದು ಓದಿ ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ವಾಸ್ತವಿಕ ಸಮಾಜದಲ್ಲಿ ಸಂವಿಧಾನಿಕ ಮೌಲ್ಯಗಳು ಅತ್ತಾವಶ್ಯಕವಾಗಿದ್ದು, ಸಂಸ್ಕೃತಿ ಮತ್ತು ಸಂಪ್ರದಾಯಗಳ ನೈತಿಕತೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಮುಖ್ಯವಾಗಿ ಗುರುಗಳಿಗೆ ಮತ್ತೆ ಹಿರಿಯರಿಗೆ ಗೌರವ ನೀಡಬೇಕು. ಯಾವುದೇ ವ್ಯಕ್ತಿಯನ್ನು ಬೇರೆಯವರ ಪರಿಣಾಮದಿಂದ ತಪ್ಪಾಗಿ ಅರ್ಥಮಾಡಿಕೊಳ್ಳಬಾರದು ಎಂದು ವಾಸ್ತವಿಕ ಚಿಂತನೆ ಮೂಲಕ ಸಂವಿಧಾನಿಕ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸ ಮಾತನಾಡಿ, ವಿದ್ಯಾರ್ಥಿಗಳು ಪ್ರಮುಖವಾಗಿ ಶ್ರದ್ದೆ ಮತ್ತು ಭಕ್ತಿಯಿಂದ ತಮ್ಮ ಗುರಿಯನ್ನು ಸಾಧಿಸುವ ಮಾರ್ಗವನ್ನು ಹೊಂದಿರಬೇಕು, ಪ್ರಮುಖವಾಗಿ ಯುವಕರು ಕಾನೂನು ಚೌಕಟ್ಟನ್ನು ಮೀರಿ ಪ್ರೀತಿ ಪ್ರೇಮ ಎಂದು 16 ವಯಸ್ಸಿಗಿಂತ ಕಡಿಮೆ ಯುವಕ-ಯುವತಿಯೊಂದಿಗೆ ಮದುವೆ ಸಂಬಂಧ ಹೊಂದಿದರೆ ಕಾನೂನು ಭಾಹಿರವಾಗುತ್ತದೆ, ಪೋಕ್ಸೋ ಕಾಯಿದೆಯ ಅಡಿಯಲ್ಲಿ ಜೈಲು ಸೇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಸಮಯದಲ್ಲಿ ಹೆಚ್ಚಿನ ಅಭ್ಯಾಸ ಮಾಡುವುದರ ಕಡೆ ಹೆಚ್ಚು ಒಲವು ತೋರಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಸಮಾಜದಲ್ಲಿ ವೃದ್ಧಾಶ್ರಮದ ಸಂಖ್ಯೆ ಹೆಚ್ಚಳವಾಗುತ್ತಿದ್ದು ವಿದ್ಯಾವಂತರು ನೈತಿಕ ಶಿಕ್ಷಣದಲ್ಲಿ ದಾರಿ ತಪ್ಪಿದ್ದಾರೆ, ಹಾಗಾಗಿ ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆ ಗುರುಗಳಿಗೆ, ತಂದೆ,ತಾಯಿಗಳಿಗೆ ಮತ್ತು ಹಿರಿಯರಿಗೆ ಗೌರವ ಶ್ರದ್ಧೆ ನೀಡಬೇಕು ಅಲ್ಲದೆ, ಗುರುಗಳ ಬಗ್ಗೆ ಪ್ರೀತಿ ವಿಶ್ವಾಸ ಭಕ್ತಿ ಜೊತೆಗೆ ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಯೊಬ್ಬರು ಅರಿತು ನಡೆಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಿ.ಎ ವಿದ್ಯಾರ್ಥಿಗಳಾದ ಸಿದ್ದಣ್ಣ, ಅಜ್ಜೆಗೌಡ, ಶರತ್ ಕೆ, ರಮೇಶ್ ಕುಮಾರ್, ತಿಪ್ಪೇಸ್ವಾಮಿ, ಕುಮಾರ್ ಗೌಡ ರವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀಮತಿ ವಸಂತ ಟಿ.ವಿ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ಆರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಡಿ.ರೇಣುಕಾಪ್ರಸಾದ್, ಬಿ.ಆರ್, ಆಯೇಶ ಸಿದ್ದಿಕಾ, ಡಾ.ಅನುಸೂಯ ಕೆ ವಿ, ಗಂಗಾಧರ್ ಜಿಜೆ, ಮಧುಶಾಲಿನಿ, ಸೈಯದ್ ಅಕ್ರಂ, ಶಿವಯ್ಯ, ಮಹೇಶ್ ಎ ಆರ್, ಮುನಿಸ್ವಾಮಿ ಗೌಡ, ಪುಟ್ಟರಾಜು, ಶಿವಲಿಂಗ ಮೂರ್ತಿ ಉಪಸ್ಥಿತರಿದ್ದರು.