ತುಮಕೂರು : ಬಾಲ ಕಾರ್ಮಿಕರ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ–1986ನ್ನು ಸಮಗ್ರವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಬಾಲ ಕಾರ್ಮಿಕತೆಗೆ ಒಳಗಾಗಿರುವ ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಗುರುವಾರ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ–1986ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಾರ್ಮಿಕ ಅಧಿಕಾರಿಗಳು ಗ್ಯಾರೇಜ್, ಟೋಲ್, ಕಾರ್ಖಾನೆ, ಹೋಟೆಲ್, ಅಂಗಡಿ ಮತ್ತು ಇತರ ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆಯನ್ನು ಹೆಚ್ಚಿಸಬೇಕು. ಇದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಿ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಪತ್ತೆ ಹಚ್ಚಿದ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯ ವಾಹಿನಿಗೆ ತಂದಲ್ಲಿ ಅವರು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯವಾಗುತ್ತದೆ. ತಪಾಸಣೆ ತೀವ್ರವಾದರೆ, ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೊಡಗಿಸಿಕೊಳ್ಳಲು ಉದ್ಯೋಗದಾತರು ಹೆದರುತ್ತಾರೆ ಎಂದು ಹೇಳಿದರು.
ಜಿಲ್ಲೆಯ 330 ಗ್ರಾಮ ಪಂಚಾಯತ್‍ಗಳಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಬಾಲ ಕಾರ್ಮಿಕರ ನಿಷೇಧ ಕಾಯ್ದೆಯ ಕುರಿತು ಧ್ವನಿ ಮುದ್ರಿಕೆಗಳನ್ನು ಅಳವಡಿಸಬೇಕೆಂದು ಸೂಚಿಸಲಾಯಿತು. ಇದರಿಂದ ಗ್ರಾಮ ಮಟ್ಟದಲ್ಲೂ ಬಾಲ ಕಾರ್ಮಿಕರ ನಿಷೇಧ ಕಾಯ್ದೆಯ ಕುರಿತು ಅರಿವು ಮೂಡಿಸಬಹುದು ಎಂದರು.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ, ಬಾಲಕಾರ್ಮಿಕ ಕಾಯ್ದೆ, ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ ಹಾಗೂ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಬೇಕೆಂದು ಸೂಚನೆ ನೀಡಿದರು.
ಏಪ್ರಿಲ್ ಮಾಹೆಯಿಂದ ಅಕ್ಟೋಬರ್‍ವರೆಗೆ ಜಿಲ್ಲೆಯಾದ್ಯಂತ 729 ಬಾಲ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ ನಡೆಸಲಾಗಿದ್ದು, 8 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತುಮಕೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಹಾಗೂ ತಾಲೂಕುವಾರು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯನ್ನು ನಿಯಮಿತವಾಗಿ ನಡೆಸಬೇಕು. ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸುವ ಇ-ಶ್ರಮ್ ಯೋಜನೆಗೆ ಹೆಚ್ಚಿನ ಫಲಾನುಭವಿಗಳನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ, ಮಧುಗಿರಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಫೈರೋಜ್ ಪಾಷ ಸೇರಿದಂತೆ ವಿವಿಧ ತಾಲೂಕು ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು.