ತುಮಕೂರು : ತುರುವೇಕೆರೆ ತಾಲ್ಲೂಕು ಕಳ್ಳನಕೆರೆ ಗ್ರಾಮದ ಸರ್ವೆ ನಂಬರ್ 69ರಲ್ಲಿರುವ 2 ಎಕರೆ 28 ಗುಂಟೆ ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ 26 ಹಾಗೂ ಜಡೆಯ ಗ್ರಾಮದ 18 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ಗ್ರಾಮಗಳಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಹಲವು ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದರೂ ಹಕ್ಕುಪತ್ರವಿಲ್ಲದ ಜನರಿಗೆ ಸೂರು ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ವಿತರಣೆಗೆ ಸಿದ್ಧಪಡಿಸಲಾಗಿರುವ ಹಕ್ಕುಪತ್ರಗಳಿಗೆ ಮನೆ ಅಳತೆ, ದಾಖಲೆ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಶ್ರವಣದೋಷವುಳ್ಳ ನಂಜಮ್ಮ ಅವರಿಗೆ ನೆರವು :
ಪರಿಶೀಲನೆಯ ವೇಳೆ ಕಳ್ಳನಕೆರೆ ಗ್ರಾಮದ ನಿವಾಸಿ ನಂಜಮ್ಮ ಅವರಿಗೆ ಶ್ರವಣದೋಷ ಇರುವುದು ಗಮನಿಸಿದ ಅವರು, ಕೂಡಲೇ ಶ್ರವಣ ದೋಷ ಮಿಷನ್ (Hearing Aid) ಒದಗಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. ಆಡಳಿತಾತ್ಮಕ ಕೆಲಸಗಳ ನಡುವೆಯೂ ಬಡ ನಾಗರಿಕರ ಕಷ್ಟಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ 24 ಗಂಟೆಗಳ ಕಾಲವೂ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ|| ಸ್ವರೂಪ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತುಮಕೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ಡಿಡಿಎಲ್ಆರ್ ಭಾವನ, ತುರುವೇಕೆರೆ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಸೇರಿದಂತೆ ತಾಲ್ಲೂಕು ಮಟ್ಟದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
18ಸಾವಿರ ಹಕ್ಕುಪತ್ರ ವಿತರಣೆಗೆ ಸಿದ್ಧತೆ :
ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮಹತ್ವದ ಯೋಜನೆಯು ವೇಗವಾಗಿ ನಡೆಯುತ್ತಿದ್ದು, ಕಳೆದ ಮೂರು ತಿಂಗಳುಗಳಲ್ಲಿ ಆಂದೋಲನದ ರೂಪದಲ್ಲಿ ಜಿಲ್ಲೆಯಾದ್ಯಂತ ಒಟ್ಟು 540 ಕಂದಾಯ ಗ್ರಾಮಗಳು ಹಾಗೂ ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಸುಮಾರು 18,000 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೇಳಿದರು.
ಗುರುವಾರ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಜಿಲ್ಲೆಯಲ್ಲಿ 500 ಕಂದಾಯ ಗ್ರಾಮಗಳ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಅದರ ಅಡಿಯಲ್ಲಿ 7,000 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಪ್ರಸ್ತುತ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡುವ ಕಾರ್ಯ ವೇಗ ಪಡೆಯುತ್ತಿದ್ದು, ಗುರುತಿಸಲಾದ ಕಂದಾಯ ಹಾಗೂ ಉಪ ಗ್ರಾಮಗಳ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇನ್ನೊಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಗುಬ್ಬಿ ತಾಲ್ಲೂಕಿನ ನಂತರ ಅತಿ ಹೆಚ್ಚು ಕಂದಾಯ ಗ್ರಾಮಗಳನ್ನು ಗುರುತಿಸಿರುವ ತಾಲ್ಲೂಕು ತುರುವೇಕೆರೆಯಾಗಿದ್ದು, ಈ ತಾಲ್ಲೂಕಿನಲ್ಲಿ ಒಟ್ಟು 50 ಕಂದಾಯ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆಯು 20-30 ವರ್ಷಗಳ ಹಿಂದೆ ಮಂಜೂರಾಗಿರುವ ಸರ್ವೆ ನಂಬರ್ಗಳಿಗೆ ಹೊಸ ಸರ್ವೆ ನಂಬರ್ ಮಾಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಇದರ ಭಾಗವಾಗಿ ಈಗಾಗಲೇ 10,000 ಹೊಸ ಆರ್ಟಿಸಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರಲ್ಲದೆ, ಕಂದಾಯ ಇಲಾಖೆಯು ಒಟ್ಟು 20,000 ಹಕ್ಕುಪತ್ರಗಳು ಮತ್ತು 10,000 ಹೊಸ ಆರ್ಟಿಸಿಗಳು ಸೇರಿದಂತೆ ಸುಮಾರು 30,000 ರೈತರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತುರುವೇಕೆರೆ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.