ತುಮಕೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಒಂಭತ್ತು ತಿಂಗಳು ಕಳೆದರೂ ಜನರ ಪಾಲಿಗೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಿದೆ.ಮುಖ್ಯಮಂತ್ರಿ ಕುರ್ಚಿ ಮೇಲಾಟದಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಂತಾಗಿದೆ ಕರ್ನಾಟಕದ ಸ್ಥಿತಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ,ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎಲ್ಲಾ ಮಂತ್ರಿಗಳು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿರುವ ಪರಿಣಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದೆ.ರೈತರ ಕಷ್ಟ,ಕಾರ್ಪಣ್ಯಗಳಿಗೆ ಸ್ಪಂದಿಸುವವರೆ ಇಲ್ಲದಂತಾಗಿದ್ದಾರೆ.ಕೇಂದ್ರ ಸರಕಾರ ಭತ್ತ, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರೂ ಸಹ ರಾಜ್ಯ ಸರಕಾರ ಮತ್ತೊಮ್ಮೆ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ.ಇದು ಖಂಡನೀಯ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಅಂತರಿಕ ಕಚ್ಚಾಟದಿಂದ ಸರಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮುಖ್ಯಮಂತ್ರಿಗಳ ಮನೆಗೆ ಉಪಮುಖ್ಯಮಂತ್ರಿಗಳು,ಡಿಸಿಎಂ ಮನೆಗೆ ಸಿಎಂ ಉಪಹಾರ ಪ್ರವಾಸ ಮಾಡುತ್ತಾ ರಾಜ್ಯದ ಹಿತ ಕಡೆಗಣಿಸಿದ್ದಾರೆ.ಹೈಕಮಾಂಡ್ ಲಕ್ಷ್ಮಣ ರೇಖೆಯನ್ನು ಮೀರಿ ಮುಖಂಡರು ವರ್ತಿಸುತ್ತಿದ್ದು,ಎಲ್ಲೋ ಒಂದು ಕಡೆ ಮುಖ್ಯಮಂತ್ರಿ ಗಳ ಪುತ್ರ ಮತ್ತು ಅವರ ಬೆಂಬಲಿಗರಿಗೆ ಅಭದ್ರೆ ಕಾಡುತ್ತದೆ ಎಂಬುದು ಸ್ಪಷ್ಟವಾಗುತ್ತಿದೆ.ಡಿಕೆಶಿ ಬೆಂಬಲಿಗರು, ಯತ್ರೀಂದ್ರ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ಪೈಪೋಟಿ ಎಲ್ಲೆ ಮೀರಿದೆ.ಕೊನಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬಾಯಿಂದಲೇ ಡಿ.ಕೆ.ಶಿವಕುಮಾರ ಮುಂದಿನ ಮುಖ್ಯಮಂತ್ರಿ ಹೇಳಿಸಲು ಹೊರಟಂತಿದೆ.ಇದೊಂದು ರೀತಿ ಬೀದಿ ಜನಗಳಂತೆ ಮಾರ್ಪಾಟಾಗಿದೆ ಎಂದು ಎಂ.ಪಿ.ರೇಣುಕಾ ಚಾರ್ಯ ನುಡಿದರು.
ಭಾರತೀಯ ಜನತಾ ಪಾರ್ಟಿಯಿಂದ ಉಚ್ಚಾಟನೆಗೊಂಡಿರುವ ವ್ಯಕ್ತಿ ಬಿಜೆಪಿಯ ಬಗ್ಗೆ ಮಾತನಾಡುವ ಯಾವ ರೀತಿಯ ನೈತಿಕತೆಯನ್ನು ಹೊಂದಿಲ್ಲ.ಪ್ರತಿ ದಿನ ದೊಡ್ಡವರಾದ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳುವ ಮೂಲಕ ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಯಿತು ಎಂಬಂತೆ ವರ್ತಿಸುತ್ತಿದ್ದಾರೆ. ನಾನು ಮುಂದಿನ ಮುಖ್ಯಮಂತ್ರಿ ಎಂದು ಭ್ರಮೆಯಿಂದ ತೇಲುತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿ ಪ್ರವಾಸ ರಾಜ್ಯದ ಸ್ಥಿತಿಗತಿಗಳ ವಿವರ ನೀಡಲಷ್ಟೇ ಬಿಟ್ಟರೆ,ಡಿಕೆಶಿ ಜೊತೆ ಸೇರಿ ಸಮ್ಮಿಶ್ರ ಸರಕಾರ ರಚಿಸುವ ಕುರಿತು ಅಲ್ಲ ಎಂಬ ಮಾಹಿತಿ ನನಗಿದೆ.ಬಾಯಿ ಚಪಲಕ್ಕೆ ಸುಳ್ಳು ಸುದ್ದಿ ಹರಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಯಾವ ಉದ್ದೇಶ ಇಟ್ಟುಕೊಂಡು ಡಿಕೆಶಿಗೆ ಬಾಹ್ಯ ಬೆಂಬಲ ಎಂದು ಹೇಳಿದ್ದಾರೋ ಗೊತ್ತಿಲ್ಲ.ಆವರು ನಮಗೆಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಹಿರಿಯರು, ರಾಜ್ಯದ ಹಿತ ಬಯಸುವವರು,ಅವರ ಹೇಳಿಕೆ ಬಗ್ಗೆ ನಾನು ಮಾತನಾಡಲಾರೆ ಎಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ನಮ್ಮದು ಹಿಂದುತ್ವ ರಾಜಕಾರಣ, ಡಿಕೆಶಿ ಅವರದ್ದು, ಒಲೈಕೆಯ ರಾಜಕಾರಣ.ನಮ್ಮಿಬ್ಬರಿಗೂ ಸರಿ ಬರುವುದಿಲ್ಲ.ಹಾಗಾಗಿ ಕಾಂಗ್ರೆಸ್, ಬಿಜೆಪಿ ಸೇರಿ ಅಧಿಕಾರ ಹಂಚಿಕೆ ಕನಸಿನ ಮಾತು.ಈ ರಾಜ್ಯದ ಜನರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ಬುರುಡೆ ಗ್ಯಾಂಗ್ ಆರೋಪ ಷಡ್ಯಂತ್ರ ಎಂದು ಆರಂಭದಲ್ಲಿಯೇ ನಾನು ಸೇರಿದಂತೆ ಬಿಜೆಪಿ ಹೇಳಿತ್ತು.ಆದರೂ ಸರಕಾರ ಎಸ್.ಐ.ಟಿ. ರಚಿಸಿತ್ತು.ಈಗ ನಮ್ಮ ಹೇಳಿಕೆ ನಿಜ ಎಂದು ಸಾಭೀತಾಗಿದೆ.ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ಆರೋಪದ ಹಿಂದೆ ರಾಜ್ಯ ಸರಕಾರದ ಹುನ್ನಾರವೂ ಇದೆ.ತಲೆ ಬರುಡೆ ಹಿಡಿದುಕೊಂಡು ಬಂದಾಗಲೇ ಪ್ರಶ್ನಿಸಬೇಕಾಗಿತ್ತು.ಎಸ್.ಐಟಿ ತನಿಖೆಯಿಂದ ಪವಿತ್ರ ಕ್ಷೇತ್ರದ ಪಾವಿತ್ರ ಮತ್ತಷ್ಟು ಗಟ್ಟಿಕೊಂಡಿದೆ.ಎಡಪಂಕ್ತಿಯರ ಹೇಳಿಕೆಗೆ ಮಣಿದು ಎಸ್.ಐ.ಟಿ. ರಚಿಸಿ ಕೈಸುಟ್ಟುಕೊಂಡಿದೆ.ಇದು ಸರಕಾರಕ್ಕೆ ಆಗಿರುವ ಕಪಾಳಮೋಕ್ಷ, ಷಡ್ಯಂತ್ರ ಮಾಡಿದ ಬುರುಡೆ ಗ್ಯಾಂಗ್ನ್ನು ಒದ್ದು ಒಳಗೆ ಹಾಕಬೇಕು.ಇಲ್ಲವೇ ಗುಂಡಿಡಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ಮಧುಗಿರಿ ಮಾಧ್ಯಮ ಪ್ರಮುಖ್ ಅರುಣ್,ಯುವ ಮುಖಂಡ ಗಜೇಂದ್ರ ಹಾಗೂ ಕುಮಾರ್ ಮತ್ತಿತರರು ಜೊತೆಗಿದ್ದರು.