ತುಮಕೂರು : 2026 ಜನವರಿ 16ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಯಶಸ್ವಿಯಾಗಿ ಎಲ್ಲರೂ ಪ್ರಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ಒಲಂಪಿಕ್ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಅವರು, ಈಗಾಗಲೇ ತುಮಕೂರು ದಸರಾ ಯಶಸ್ವಿ ಆಚರಣೆ ಆಗಿರುವುದು ರಾಜ್ಯದ ಜನರ ಗಮನ ಸೆಳೆದಿದೆ. ಅದೇ ರೀತಿಯಲ್ಲಿ ತುಮಕೂರಿನಲ್ಲಿ ನಡೆಯುವ ಒಲಂಪಿಕ್ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ಮಂಗಳೂರಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ವರ್ಷ ತುಮಕೂರು ಆತಿಥ್ಯ ವಹಿಸುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ನಿಗದಿಗೊಳಿಸಿರುವ ಉಪ ಸಮಿತಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ಇದು ವಾರಪೂರ್ತಿ ಕಾರ್ಯಕ್ರಮವಾಗಿರುವುದರಿಂದ ಸಾರ್ವಜನಿಕರಿಗೆ ಕ್ರೀಡೆಗಳನ್ನು ನೋಡಲು ಹಾಗೂ ಪ್ರೋತ್ಸಾಹಿಸಲು ಅನುಕೂಲವಾಗುವಂತೆ ಪ್ರಚಾರ ಕಾರ್ಯ, ಕ್ರೀಡಾಪಟುಗಳಿಗೆ ಸರಿಯಾದ ಊಟ- ವಸತಿ, ಪ್ರಯಾಣ ಸೌಲಭ್ಯ ಇತ್ಯಾದಿಗಳನ್ನು ಸಮಪರ್ಕವಾಗಿ ನಿರ್ವಹಿಸಬೇಕು ಎಂದರು.
ಅಲ್ಲದೆ ಸುಮಾರು 9ಸಾವಿರಕ್ಕೂ ಹೆಚ್ಚು ಕ್ರೀಡಾಪಟು ಬರುತ್ತಿರುವುದರಿಂದ ಅವರ ಸುರಕ್ಷತೆ ಕೂಡ ಮುಖ್ಯವಿದ್ದು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ, ಯುವ ಸಬಲೀಕರಣ ಇಲಾಖೆ ಆಯುಕ್ತ ಚೇತನ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭು ಜಿ. ಜಿಲ್ಲಾ ಪೊಲೀಸ್ ಅಧೀಕ್ಷಕ ಆಶೋಕ್ ಕೆ.ವಿ. ಉಪಸ್ಥಿತರಿದ್ದರು.