ಗ್ರೇಟರ್ ತುಮಕೂರು ಘೋಷಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ: ಗೃಹ ಸಚಿವ

ತುಮಕೂರು : ಗ್ರೇಟರ್ ತುಮಕೂರು ಘೋಷಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಇ-ಖಾತಾ(ನಮೂನೆ 2) ವಿತರಣಾ ಕಾರ್ಯಕ್ರಮ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರೇಟರ್ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತುಮಕೂರು, ಮೈಸೂರು, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ನಿರ್ಮಾಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಗ್ರಾಮಗಳಲ್ಲಿ ಜೀವನ ಸಾಗಿಸಲು ಎದುರಾಗುವ ಸಮಸ್ಯೆಗಳ ಕಾರಣದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಗರಗಳಲ್ಲಿ ಬದುಕು ಸಹ ಸುಲಭವಲ್ಲ. ಕೆಲ ವಾರ್ಡ್‍ಗಳಲ್ಲಿ ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಶೇ.40ರಷ್ಟು ಜನರು ಪಟ್ಟಣಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ವಲಸೆ ಬಂದು ಜೀವನ ಸಾಗಿಸುವವರಿಗೆ ಸರ್ಕಾರದಿಂದ ವಸತಿ ಸೌಲಭ್ಯ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಾದಾಗ ಜನಸಾಮಾನ್ಯರ ಜೀವನ ಮಟ್ಟ ಬದಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ 5ಕೋಟಿ ರೂ. ವೆಚ್ಚದಲ್ಲಿ 18 ಪಾರ್ಕ್‍ಗಳನ್ನು ನವೀಕರಿಸಲಾಗುತ್ತಿದೆ. ಪೌರಕಾರ್ಮಿಕರ ಬದುಕು ಸುಧಾರಣೆಗೆ ಅವರಿಗೆ ಖಾಯಂ ಉದ್ಯೋಗ ಹಾಗೂ ವಸತಿ ಸೌಲಭ್ಯ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಿಬ್ಬೂರು ವ್ಯಾಪ್ತಿಯಲ್ಲಿ 64 ಕೊಠಡಿಗಳ ಅಪಾರ್ಟ್‍ಮೆಂಟ್ ನಿರ್ಮಿಸಿ ಕೊಡುವ ಕಾರ್ಯಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿದೆ ಎಂದರಲ್ಲದೆ, ತುಮಕೂರು ಅಭಿವೃದ್ಧಿಯಾದರೆ ನಾಗರಿಕರ ಸಮಗ್ರ ಅಭಿವೃದ್ಧಿ ಸಾಧ್ಯವೆಂಬ ದೃಷ್ಟಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಜಿಲ್ಲೆಗೆ 120 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಪೌರಕಾರ್ಮಿಕರು ಹಾಗೂ ಕೊಳಗೇರಿ ಪ್ರದೇಶದ ನಿವಾಸಿಗಳ ಜೀವನಮಟ್ಟವನ್ನು ಸುಧಾರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಕೊಳಗೇರಿ ಪ್ರದೇಶಗಳಲ್ಲಿ ಯುಜಿಡಿ ಹಾಗೂ ಕಸ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾದ ಅಗತ್ಯವಿದೆ. ಜೊತೆಗೆ, ಕೊಳಗೇರಿ ಪ್ರದೇಶಗಳ ಹೆಸರನ್ನು ಬದಲಿಸುವ ಮೂಲಕ ಸಾಮಾಜಿಕ ಗೌರವ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕೊಳಗೇರಿ ನಿವಾಸಿಗಳಿಗೆ ಹೊಸದಾಗಿ ನಿರ್ಮಿಸಲಾಗುವ ವಸತಿಗಳು ಗುಣಮಟ್ಟದ ಹಾಗೂ ಸುರಕ್ಷಿತವಾಗಿರಬೇಕು ಎಂದು ಹೇಳಿದರಲ್ಲದೆ, ನಗರದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಪೌರಕಾರ್ಮಿಕರನ್ನು ಗುರುತಿಸಿ, ಅವರಿಗೆ ಹೊಸ ವಸತಿ ಗೃಹಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಯೋಗಾನಂದ ಮಾತನಾಡಿ, ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಇ-ಆಸ್ತಿ (e-AASTHI) ತಂತ್ರಾಂಶದ ಮೂಲಕ ಮಹಾನಗರಪಾಲಿಕೆ ವ್ಯಾಪ್ತಿಯ 1.30ಲಕ್ಷ ಆಸ್ತಿಗಳ ಪೈಕಿ 50ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿ 48ಸಾವಿರ ಆಸ್ತಿಗಳಿಗೆ ಇ-ಖಾತಾ(ನಮೂನೆ–2) ವಿತರಿಸಲಾಗುತ್ತಿದೆ. ಗೃಹ ಭಾಗ್ಯ ಯೋಜನೆಯಡಿ 52 ಪೌರಕಾರ್ಮಿಕ ಫಲಾನುಭವಿಗಳಿಗೆ ಇ-ಖಾತೆ ವಿತರಣೆ ಮಾಡಲಾಗುತ್ತದೆ. ಜೊತೆಗೆ, ಕೊಳಗೇರಿಮುಕ್ತ ನಗರ ನಿರ್ಮಾಣದ ಉದ್ದೇಶದಿಂದ 4 ಕೊಳಗೇರಿ ಪ್ರದೇಶಗಳ 120 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಶೋಕ್ ಕೆ.ವಿ, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತ್ ಮೌರ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *