ತುಮಕೂರು : ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಗಳಲ್ಲಿ ಗೆಲುವು-ಸೋಲಿನ ನಿರಾಶೆಗಿಂತಲೂ ಮಾನವೀಯತೆಯ ಮೌಲ್ಯ ತುಂಬುವುದು ಮುಖ್ಯ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಸೋಮವಾರ ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮಕ್ಕಳಿಗೆ ನಾವು ಚರಿತ್ರೆಯನ್ನು ತಿರುಚಿದ ರೀತಿಯಲ್ಲಿ ತಿಳಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಾಮಾಜಿಕ ಜಾಲತಾಣ ಎಲ್ಲವೂ ಕೂಡ ಮಕ್ಕಳಿಗೆ ಸುಳ್ಳಿನ ಚರಿತ್ರೆಯನ್ನು ನೀಡುತ್ತಿದೆ. ಮಕ್ಕಳು ಈ ಸುಳ್ಳಿನ ಚರಿತ್ರೆಯೇ ನಿಜ ಎಂಬಂತೆ ವಿಕಲ್ಪಕ್ಕೆ ಒಳಗಾಗಿ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಖ್ಯವಾಗಿ ಪಾತ್ರ ವಹಿಸಬೇಕಾಗಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳು ವಿಫಲವಾಗಿವೆಯೇನೋ ಎನ್ನುವಂತಹ ನಿರಾಶೆ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದೆ. ಇಂತಹ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರವು ಮಾತೃ ಹೃದಯವನ್ನು ಕಳೆದುಕೊಳ್ಳುತ್ತಿದೆ. ಪರೀಕ್ಷೆ ಎನ್ನುವ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವಿಕೆಗೆ ಅವರನ್ನು ದೂಡುತ್ತಾ, ಅವರಲ್ಲಿ ಮನುಷ್ಯರಾಗಿ ಬದುಕಲು ಬೇಕಾಗಿರುವ ಮೌಲ್ಯಗಳನ್ನು ಬಿತ್ತುವ ವಿಚಾರದಲ್ಲಿ ನಾವು ಸೋಲುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಲಲಿತಕಲೆಗಳ ಒಳಗೊಂಡಂತೆ ಕ್ರೀಡೆಯೂ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಪೂರಕವಾಗಿ ಭಾವನಾತ್ಮಕವಾಗಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಂಟಿ ನಿರ್ದೇಶಕರಾದ ಮಹಾಲಿಂಗಯ್ಯ ಅವರು ಮಾತನಾಡಿ, ಎರಡನೇ ಬಾರಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ತುಮಕೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಇದೊಂದು ಸಂಭ್ರಮದ ಕಾರ್ಯಕ್ರಮ. ಇದು ರಾಜ್ಯ ಮಟ್ಟದ ಹಬ್ಬ ಎಂದು ಹೇಳಿದರು.
ರಾಜ್ಯದಲ್ಲಿ 13ಲಕ್ಷ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಪರೀಕ್ಷೆ ನಡೆಸುವ ಸಂದರ್ಭದಲ್ಲಿ 7ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಅದರಲ್ಲಿ 300 ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೀರಿ. ನೀವೆಲ್ಲರೂ ಅದೃಷ್ಟವಂತರು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ನಿಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವುದಕ್ಕೆ ಇದೊಂದು ದೊಡ್ಡ ಅವಕಾಶ. ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲ ರಂಗದಲ್ಲೂ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಶ್ರೀದೇವಿ ವೈದ್ಯಕೀಯ ಕಾಲೇಜು ಸಂಸ್ಥಾಪಕರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಹಳ್ಳಿಯ ಪ್ರತಿಭೆಗಳು ಕೂಡ ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಕಲೆಗಳಿಗೂ ಹೆಚ್ಚು ಒತ್ತು ನೀಡಿದಾಗ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ನಾಟಕಗಳನ್ನು ಜೀವನದಲ್ಲಿ ರೂಪಿಸಿಕೊಳ್ಳಬೇಕು. ಇದರಿಂದ ನಾಯಕತ್ವ ಗುಣ ಸೇರಿದಂತೆ ಇನ್ನಿತರ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ: ಲಕ್ಷ್ಮಣ್ ದಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಶಾಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ: ಬಾಲಗುರುಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಕ್ಕಳು ಮತ್ತು ಮತ್ತಿತರರು ಉಪಸ್ಥಿತರಿದ್ದರು.