ತುಮಕೂರು : ತುಮಕೂರು ಜಿಲ್ಲಾ ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾಧಿಕಾರಿಗಳ ಸಭೆಯು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿಗಳು ಜಿಲ್ಲಾ ಸಮ್ಮೇಳನಕ್ಕೆ ರಚನೆಯಾಗಿರುವ ಎಲ್ಲಾ ಸಮಿತಿಗಳ ಪ್ರಗತಿಯನ್ನು ಪರಿಶೀಲಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಅಧಿಕಾರಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸಿ ಶ್ರಮಿಸಬೇಕು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷರು ಏನಾದರೂ ಕುಂದು ಕೊರತೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕರಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬಿಡುಗಡೆ ಮಾಡಿದರು. ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀತಿ ಶುಭಕಲ್ಯಾಣ್ರವರು ಕನ್ನಡ ನಮ್ಮ ಮಾತೃಭಾಷೆ, ಆ ತಾಯಿಯ ಸೇವೆ ಮಾಡುವುದು ನಮ್ಮ ಭಾಗ್ಯ. ಜೀವನದಲ್ಲಿ ಈ ರೀತಿ ಸೇವೆ ಮಾಡುವ ಅವಕಾಶವನ್ನು ಬಿಡಬಾರದು. ಕನ್ನಡಿಗರೆಲ್ಲರೂ ಈ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಸಾಹಿತ್ಯದ ಅಧ್ಯಯನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ಭಾಷೆಯ ಪದ ಸಂಪತ್ತು ಹೆಚ್ಚಾಗುತ್ತದೆ ಎಂದ ಅವರು ಇಂತಹ ಸಮ್ಮೇಳನಗಳಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು. ಜಿಲ್ಲಾ ಪಂಚಾಯತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಘೋಷ್ಠಿಗಳ ವಿವರಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು ಪಾಲ್ಗೊಂಡಿದ್ದರು.