ಕುರುಹಿಗಿಂತ ಅರಿವು ಮುಖ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ತುಮಕೂರು: ‘ಜೀವನದಲ್ಲಿ ಅರಿವು ಎಂದರೆ ಗುರಿ. ಕುರುಹು ಎಂದರೆ ಅದನ್ನು ತಲುಪುವ ಮಾರ್ಗ. ಜೀವನದಲ್ಲಿ ಒಂದು ಉನ್ನತ ಮಟ್ಟದ ಗುರಿ ಇಟ್ಟುಕೊಳ್ಳುವುದು ಮುಖ್ಯ. ಅದನ್ನು ತಲುಪುವ ಮಾರ್ಗಗಳ ಕುರಿತಾದ ಚಿಂತೆಗಿಂತಲೂ ನಮ್ಮ ಗುರಿ ಹೆಚ್ಚು ಮುಖ್ಯ ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಅಲ್ಲಮಪ್ರಭು ಅಧ್ಯಯನ ಪೀಠ ಹಾಗೂ ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಮ್ಮಿಕೊಂಡಿದ್ದ ಪುಸ್ತಕ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ‘ಅಲ್ಲಮ ಕಥನ’ ಕೃತಿಯ ಕುರಿತು ಮಾತನಾಡಿದರು.

ಅಲ್ಲಮಪ್ರಭುವಿನ ಜೀವನ ಶೈಲಿ, ಬಸವಣ್ಣ ಮತ್ತು ಅಲ್ಲಮರ ಸಂಬಂಧ, ಅಲ್ಲಮನು ಅಲ್ಲಮಪ್ರಭುವಾದ ಪ್ರಕ್ರಿಯೆ, ಅಲ್ಲಮನ ಚಿಂತನಾ ಶಕ್ತಿ, ತತ್ವದೃಷ್ಟಿ, ತಾತ್ವಿಕತೆ ಮತ್ತು ಭಿನ್ನಾಭಿಪ್ರಾಯಗಳು, ಹಾಗೂ ಅಲ್ಲಮನು ತನ್ನ ವಚನಗಳಲ್ಲಿ ತನ್ನದೇ ಆದ ಭಾಷೆಯನ್ನು ರಚಿಸಿಕೊಂಡ ಬಗೆಯ ಬಗ್ಗೆ ಮಲ್ಲೇಪುಂ ಬೆಳಕು ಚೆಲ್ಲಿದರು.

ಅಲ್ಲಮನು ವಚನಕಾರರಲ್ಲಿ ಪ್ರಸಿದ್ಧನಾದವನು. ಅತ್ಯಂತ ನೇರ ಮತ್ತು ನಿಷ್ಠುರವಾದಿ. ಅನೇಕ ಶಿವಶರಣ ಶರಣೆಯರಿಗೆ ಭಕ್ತಿ ವೈರಾಗ್ಯವನ್ನು ಬೋಧಿಸಿದವನು. ತನ್ನ ವಚನಗಳ ಮೂಲಕ ಅಂತರಂಗ ಮತ್ತು ಬಹಿರಂಗಗಳನ್ನು ಶೋಧಿಸಲೆತ್ನಿಸಿದವನು ಎಂದು ವಿಶ್ಲೇಷಿಸಿದರು.

ಬುಕ್‍ಬ್ರಹ್ಮ ಸಂಪಾದಕ ದೇವು ಪತ್ತಾರ ಸಂವಾದ ನಡೆಸಿಕೊಟ್ಟರು. ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಂ. ಕೊಟ್ರೇಶ್, ಶ್ರೀ ಅಲ್ಲಮಪ್ರಭು ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಸ್. ಎನ್. ಗುಂಡೂರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *