ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲೂ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು, ಪ್ಲಾಸ್ಟಿಕ್ ಬಳಕೆ ವಿರುದ್ಧ ಗ್ರಾಮಸ್ಥರಲ್ಲಿ, ಅಂಗಡಿ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ ಮಾಡಕೂಡದು ಎಂದು ಶಾಸಕ ಬಿ.ಸುರೇಶ್‍ಗೌಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತುಮಕೂರು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತ್ಯಾಜ್ಯ ವಿಲೇವಾರಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಕಸ ವಿಲೇವಾರಿಗೆ ಅಗತ್ಯ ವಾಹನ, ಪರಿಕರಗಳನ್ನು ಕೂಡಲೇ ಖರೀದಿ ಮಾಡುವುದು, ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ಅವರಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದು ಮುಂತಾದ ಕಾರ್ಯವನ್ನು ತಕ್ಷಣದಿಂದ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಿಯಾದ ಕಸ ನಿರ್ವಹಣೆ ಇಲ್ಲದೆ ಕ್ಷೇತ್ರದ ಅನೇಕ ಹಳ್ಳಿಗಳು ಗಬ್ಬು ನಾರುತ್ತಿವೆ. ಅಂತಹ ದುಸ್ಥಿಯಲ್ಲಿ ಹಳ್ಳಿಗಳನ್ನು ಇಟ್ಟು ಹೇಗೆ ಕೆಲಸ ಮಾಡುತ್ತೀರಿ? ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ. ಸ್ವಚ್ಛತೆ ಬಗ್ಗೆ ಗ್ರಾಮಸ್ಥರಲ್ಲಿ ತಿಳುವಳಿಕೆ ಮೂಡಿಸಿ, ತಾವೂ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಗಮನ ಹರಿಸಬೇಕು. ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಕ್ರಮವಹಿಸಿ. ಅಂಗಡಿಗಳ ಮಾಲೀಕರ ಸಭೆ ನಡೆಸಿ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡುವಂತೆ ಹೇಳಿದರು.
ಗ್ರಾಮ ಪಂಚಾಯಿತಿಗಳ 15ನೇ ಹಣಕಾಸು ಯೋಜನೆಯ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯ್ತಿಗಲ್ಲಿ ಕಡ್ಡಾಯವಾಗಿ ದೂರು ಪೆಟ್ಟಿಗೆಗಳನ್ನು ಇಡಬೇಕು. ಪ್ರತಿ ದೂರನ್ನೂ ಗಣಕೀಕರಣಗೊಳಿಸಬೇಕು ಹಾಗೂ ಸಾರ್ವಜನಿಕರ ದೂರುಗಳಿಗೆ ಪರಿಹಾರ ದೊರಕಿಸಬೇಕು ಎಂದು ಸುರೇಶ್‍ಗೌಡರು ಸೂಚಿಸಿದರು.
ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಉಪಯೋಗಿ, ನಿರುಪಯೋಗಿಯಾಗಿರುವ ಕೊಳವೆಬಾವಿಗಳ ಬಗ್ಗೆ ವಾರದಲ್ಲಿ ಮಾಹಿತಿ ಕೊಡಬೇಕು ಎಂದು ಪಿಡಿಓಗಳಿಗೆ ಹೇಳಿದ ಶಾಸಕರು, ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆವಹಿಸಬೇಕು ಎಂದರು. ಜೆಜೆಎಂ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ್, ತಾಲ್ಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಟಿಪಿಓ ಲೋಕೇಶ್, ಲೆಕ್ಕಾಧಿಕಾರಿ ಹೆಚ್.ಕೆ.ಪರಮೇಶ್ವರ್, ಯೋಜನಾಧಿಕಾರಿ ಕೆ.ಆರ್.ರಮೇಶ್ ಸೇರಿದಂತೆ ವಿವಿಧ ಗ್ರಾಮ ಪಂಚಾಯ್ತಿಗಳ ಪಿಡಿಓಗಳು ಸಭೆಯಲ್ಲಿ ಹಾಜರಿದ್ದರು.