ತುಮಕೂರು : ಈಗ್ಗೆ ಹತ್ತು ವರ್ಷಗಳ ಈಚೆಗೆ ಮೇಲ್ಜಾತಿಯವರೆಲ್ಲಾ ಕೆಳ ಜಾತಿಯ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಸರ್ಕಾರದ ನೌಕರಿ, ಸೌಲಭ್ಯ ಪಡೆದುಕೊಂಡು ಪರಿಶಿಷ್ಟ ಜಾತಿಯವರನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿ ಮೂಲೆಗುಂಪು ಮಾಡುತ್ತಿರುವುದು ನಡೆಯುತ್ತಲೇ ಇದೆ.
ಲಿಂಗಾಯಿತರಲ್ಲಿ ಬರುವ ಬುಡಗ ಜಂಗಮದವರು ಪರಿಶಿಷ್ಠ ಜಾತಿಯ ಬುಡಗಜಂಗಮ ಎಂದು ಜಾತಿ ಪ್ರಮಾಣ ಪತ್ರ ತೆಗೆದುಕೊಂಡರೆ, ಹಿಂದುಳಿದ ಮತ್ತು ಕೆಲ ಅಲೆಮಾರಿ ಜಾತಿಗಳು ಹೊಲೆಯ, ಮಾದಿಗ ಮತ್ತು ಹಂದಿಜೋಗೀಸ್ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಸೌಲಭ್ಯಗಳನ್ನು ಪಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ.
ಈ ರೀತಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆದವರನ್ನು ಕೇಳಿದರೆ ನಾವು ಅದೇ ಜಾತಿ ಎನ್ನುತ್ತಾರೆ, ಆದರೆ ಆ ಜಾತಿಯ ಜನಾಂಗದ ಆಚರಣೆ, ಬೆಡಗು, ಹೆಣ್ಣು ತರುವುದು, ಅವರ ನಡಾವಳಿಗಳನ್ನು ಕೇಳಿದರೆ ಎಲ್ಲಾ ಹಿಂದುಳಿದ ಮತ್ತು ಅಲೆಮಾರಿ ಸಮುದಾಯದ ಜಾತಿಗಳದ್ದಾಗಿರುತ್ತದೆ.
ಇದೇ ರೀತಿ ತುಮಕೂರು ಜಿಲ್ಲೆಯಲ್ಲಿ ಹೆಳವರು, ಕೆಲ ಬುಡಬುಡಿಕೆಯವರು, ಶಿಳ್ಳೆ ಕ್ಯಾತರುಗಳು ‘2ಎ’ ಗ್ರೂಪ್ಗೆ ಬರುತ್ತಾರೆ. ಇವರು ಪರಿಶಿಷ್ಟ ಜಾತಿಗೆ ಬಾರದೆ ಇರುವುದರಿಂದ ಪರಿಶಿಷ್ಟ ಜಾತಿಯವರಿಗೆ ಸಿಗುವ ಸೌಲಭ್ಯಗಳು ಇವರಿಗೆ ದೊರೆಯುವುದಿಲ್ಲ.
ಹೀಗ್ಗೆ 25 ರಿಂದ 30 ವರ್ಷಗಳ ಹಿಂದೆ ತುಮಕೂರಿನ ಈಗಿನ ರಾಮಜೋಯಿಸ್ ನಗರದಲ್ಲಿ ಪಾಳು ಬಿದ್ದ ಜಾಗದಲ್ಲಿ ಕೆಲವರು ಗುಡಿಸಲುಗಳನ್ನು ಹಾಕಿಕೊಂಡು ಹಂದಿ ಸಾಕಾಣಿಕೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ನಗರ ಬೆಳೆಯುತ್ತಿದಂತೆ ಬೀಳು ಬಿಟ್ಟಿದ ಜಾಗದ ಮಾಲೀಕರುಗಳು ಇವರಿಗೆ ಜಾಗ ಖಾಲಿ ಮಾಡುವಂತೆ ಎಷ್ಟು ಮನವಿ ಮಾಡಿದರು ಖಾಲಿ ಮಾಡದ ಹಿನ್ನಲೆಯಲ್ಲಿ ಒಂದು ದಿನ ಆ ಗುಡಸಲುಗಳಿಗೆ ಬೆಂಕಿ ಬೀಳಿಸಿದರೆನ್ನಲಾಗುತ್ತಿದೆ.
ಅಲ್ಲಿ ವಾಸಿಸುತ್ತಿದ್ದ ಬಹುತೇಕ ಹೆಳವರ ಕುಟುಂಬಸ್ಥರು ಹಂದಿಗಳನ್ನು ಸಾಕಾಣೆ ಮಾಡುತ್ತಿದ್ದರು, ಬೆಂಕಿಬಿದ್ದ ಸ್ಥಳಕ್ಕೆ ಅಧಿಕಾರಿಗಳು ದೌಡಾಯಸಿ ಪರಿಶೀಲನೆ ಮಾಡುವಾಗ ಹೆಳವರ ರಾಮಕ್ಕ ಅದು ಯಾವಾಗ ಹಂದಿಜೋಗಿ ಅಂತ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡಿದ್ದಳೋ ಅಧಿಕಾರಿಗಳು ಬಂದಕೂಡಲೇ ಲಬೋ ಲಬೋ ಬಾಯಿ ಬಡಿದುಕೊಂಡು ಹಂದಿಜೋಗರ ಗುಡಿಸಲುಗಳೆಲ್ಲಾ ಸುಟ್ಟು ಹೋದವು ಪರಿಹಾರ ಕೊಡಿ ಸ್ವಾಮಿ, ಮಕ್ಕಳಿಗೆ ನೀರು ನೆರಳು ಮಾಡಿಕೊಡಿ ಎಂದು ತಮ್ಮ ಸಮೂಹದೊಂದಿಗೆ ಕಣ್ಣೀರು ಹಾಕಿದರು.
ಅಧಿಕಾರಿಗಳು ಹಂದಿಜೋಗಿಗಳು ಎಂದು ಬರೆದುಕೊಂಡು, ಅಲ್ಲಿಗೆ ಪತ್ರಿಕೆಯವರೂ ಭೇಟಿ ನೀಡಿದಾಗ ಅವರೂ ಸರಿಯಾದ ಮಾಹಿತಿ ಸಂಗ್ರಹಿಸದೆ ಎಲ್ಲಾ ಪತ್ರಿಕೆಗಳಲ್ಲಿ ಹಂದಿಜೋಗೀಸ್ ಗುಡಿಸಲುಗಳಿಗೆ ಬೆಂಕಿ, ಬೀದಿಗೆ ಬಿದ್ದ ಬಡಕುಟುಂಬಗಳು ಎಂದು ಬಿಂಬಿಸಿದವು.
ಇಲ್ಲಿಂದ ರಾಮಕ್ಕನ ಗತ್ತು-ಗೈರತ್ತು ಬದಲಾಯಿತು, ಜಿಲ್ಲೆಯ ಎಲ್ಲಾ ಕಛೇರಿ, ಅಧಿಕಾರಿಗಳಿಗೆ ಹೋಗಿ ಹಂದಿಜೋಗಿಗಳ ಮುಖಂಡೆ ನಾನೇ ಎಂದು ಬಿಂಬಿಸಿದಳು, ತುಮಕೂರಿನಲ್ಲಿದ್ದ ನಿಜವಾದ ಹಂದಿಜೋಗಿಗಳಿಗೆ ಇದು ಗೊತ್ತಾದರೂ ಹೆಳವರ ರಾಮಕ್ಕ ಇವರಿಗೆ ಹಂದಿ ಮಾಂಸವನ್ನು ಕಡಿಮೆ ಬೆಲೆಗೆ ನೀಡುತ್ತಿದ್ದರಿಂದ ಅಯ್ಯೋ ರಾಮಕ್ಕ ಒಬ್ಬಳು ಹಂದಿಜೋಗಿಯಾದರೆ ಏನಾಗುತ್ತೇ ಬಿಡು ಅಂತ ಸುಮ್ಮನಾದರು.
ಇದೆಲ್ಲಾ ತಿಳಿದುಕೊಂಡಿದ್ದ ಕೆಲವರು ಆಗಿನ ರಾಜ್ಯ ಹಂದಿಜೋಗೀಸ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ವಿ.ವೆಂಕಟರಮಣಯ್ಯ ಅವರನ್ನು ಕರೆಸಿ, ಹೆಳವರ ರಾಮಕ್ಕನನ್ನೂ ತುಮಕೂರಿನ ನಗರಸಭೆ ಪಾರ್ಕಿನಲ್ಲಿ ಕೂರಿಸಿ ನೀವು ಹೆಳವರಾಗಿದ್ದು, ಹಂದಿಜೋಗಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ತಪ್ಪು, ಅದನ್ನು ಹಿಂದಕ್ಕೆ ಪಡೆಯಿರಿ ಎಂದು ವಿನಮ್ರವಾಗಿ ಮನವಿ ಮಾಡಲಾಯಿತು, ರಾಮಕ್ಕ ಆಯಿತು ಸ್ವಾಮಿ ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಕೈ ಮುಗಿದು ಹೋದ ರಾಮಕ್ಕ ಸುಮ್ಮನಿರದೆ ಆಗಿನ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕನಾಥ ಅವರ ಸಂಪರ್ಕ ಸಾಧಿಸಿಕೊಂಡು ಅಧಿಕಾರಿಗಳು ಹಾಗೂ ನೌಕರರನ್ನೇ ಬೆದರಿಸುವ ಹಂತಕ್ಕೆ ಬೆಳೆದರು.
ಅಲ್ಲದೆ ತಮ್ಮ ಹೆಳವ ಜನಾಂಗದವರಿಗೆ ಹಂದಿಜೋಗೀಸ್ ಜಾತಿ ಪ್ರಮಾಣಪತ್ರವನ್ನು ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದಳು. ಇದರಿಂದ ತುಮಕೂರು, ಶಿರಾ ತಾಲ್ಲೂಕಿನ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಳವರು ಹಂದಿಜೋಗೀಸ್ ಎಂದು ಜಾತಿ ಪ್ರಮಾಣ ಪತ್ರ ತೆಗೆದುಕೊಂಡರು.
ಈ ರೀತಿ ಜಾತಿ ಪ್ರಮಾಣ ಪತ್ರ ಕೊಡಲು ಪಂಚಾಯತಿ ಕಾರ್ಯದರ್ಶಿಗಳಿಗೆ ಹಂದಿಬಾಡು ಆಸೆ ತೋರಿಸಿದ್ದರೆನ್ನಲಾಗಿದೆ.
ಇಷ್ಟೇ ಅಲ್ಲದೆ ತುಮಕೂರು ವಿಶ್ವವಿದ್ಯಾನಿಲಯದ ಕೆಲ ಪ್ರಗತಿಪರ ಪ್ರೊಪೆಸರ್ಗಳು ರಾಮಕ್ಕ ಟೆಂಟ್ ಶಾಲೆ ಪ್ರಾರಂಭಿಸಿದ್ದಾರೆ, ಅಲೆಮಾರಿಗಳನ್ನು ಜಿಲ್ಲೆಯಲ್ಲಿ ಸಂಘಟಿಸಿದ್ದಾರೆಂದು ಅಲೆಮಾರಿ ಬುಡಕಟ್ಟುಮಹಾಸಭಾದ ಜಿಲ್ಲಾ ಅಧ್ಯಕ್ಷರೆಂದು ನಕಲಿ ಜಾತಿ ಪ್ರಮಾಣ ಪಡೆದಿರುವ ರಾಮಕ್ಕ ಕೊಡುತ್ತಿದ್ದ ಹಂದಿಬಾಡು ತಿಂದು ಬರಗೂರು ರಾಮಚಂದ್ರಪ್ಪನವರ ಪತ್ನಿ ರಾಜೇಶ್ವರಿರವರ ಹೆಸರಿನಲ್ಲಿ ನೀಡುವ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿಯನ್ನೂ ಕೊಡಿಸಿದ್ದಾರೆ.
ಇತ್ತೀಚೆಗೆ ಹಂದಿಜೋಗಿಗಳು ಹಂದಿಗಳನ್ನು ನಗರ ಪ್ರದೇಶಗಳಲ್ಲಿ ಸಾಕಬಾರದು ಅವರಿಗೆ ಪ್ರತ್ಯೇಕ ವಸತಿ ಮತ್ತು ಹಂದಿ ಸಾಕಾಣಿಕೆಗೆ ಜಾಗಗಳನ್ನು ಜಿಲ್ಲಾಡಳಿತ ಕಾಯ್ದಿರಿಸಿದ್ದನ್ನೇ ಒಂದು ಲಾಭ ಮಾಡಿಕೊಂಡ ಹೆಳವ ಜನಾಂಗ ಮತ್ತಷ್ಟು ಹಂದಿಜೋಗೀಸ್ ಜಾತಿಯ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಮುಂದಾದಾಗ ತುಮಕೂರಿನ ಹಂದಿಜೋಗೀಸ್ ಸಂಘದ ಈ ಹಿಂದಿ ಅಧ್ಯಕ್ಷರಾದ ಗೋಪಿಯವರು ಹಂದಿಜೋಗೀಸ್ ಜನಾಂಗದ ಹೆಸರಿನಲ್ಲಿ ಇತರರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯುವಂತೆ ಜಾತಿ ಪ್ರಮಾಣ ಪತ್ರ ನೀಡುವ ಗ್ರೇಡ್-2 ತಹಶೀಲ್ದಾರ್ ಅವರಿಗೆ ಮನವಿ ಮಾಡಿದ ಹಿನ್ನಲೆಯಲ್ಲಿ ತಡೆ ಹಿಡಿಯಲಾಗಿದೆ.
ಇಷ್ಟೆಲ್ಲಾ ಆದರೂ ಕೆಲವರು ಸುಳ್ಳು ಹಂದಿಜೋಗೀಸ್ ಜಾತಿ ಪ್ರಮಾಣ ಪತ್ರ ಪಡೆದವರು ಕೆಲವರನ್ನು ಕರೆಸಿ ನಮಗೆ ನಿವೇಶನ, ಸರ್ಕಾರದ ಸೌಲಭ್ಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನೀಡುತ್ತಿಲ್ಲ ಎಂದು ಪ್ರತಿಭಟನೆ ಮಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಎಸ್ಎಸ್ಸಿ-ಎಸ್.ಟಿ. ತನಿಖಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದ್ದು. ಈಗಲಾದರೂ ಜಿಲ್ಲಾಡಳಿತ ಹಂದಿಜೋಗೀಸ್ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರನ್ನು ಪತ್ತೆ ಹಚ್ಚಿ ಅವರ ಜಾತಿ ಪ್ರಮಾಣ ಪತ್ರಗಳನ್ನು ಹಿಂಪಡೆದು ಶಿಕ್ಷೆಗೆ ಒಳಪಡಿಸಲಿ ಎಂದು ಜಿಲ್ಲಾ ಹಂದಿಜೋಗೀಸ್ ಸಂಘದ ಅಧ್ಯಕ್ಷರಾದ ಮುಕುಂದ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷರದ ಶ್ರೀನಿವಾಸ್, ರಂಗಸ್ವಾಮಿ ತಿಪಟೂರು ಅವರುಗಳು ಒತ್ತಾಯಿಸಿದ್ದಾರೆ.