ತುಮಕೂರು: “ಒಂದು ದೇಶ ಒಂದು ಚುನಾವಣೆ” ಎಂಬುದು ಕೇಂದ್ರದ ಪ್ರಮುಖ ಸುಧಾರಣಾ ನೀತಿ, ಪ್ರಗತಿಗೆ ಪೂರಕ ಎಂದು ಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ದಕ್ಷಿಣ ಭಾರತದ ಸಂಚಾಲಕರಾದ ಅನಿಲ್ ಕೆ. ಅಂಟೋನಿರವರು ಹೇಳಿದರು.
ನಗರದ ಶಿರಾ ರಸ್ತೆಯ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ “ಒಂದು ದೇಶ, ಒಂದು ಚುನಾವಣೆ ಕುರಿತು” ಡಿ.22 ರಂದು ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಅನಿಲ್ ಅಂಟೋನಿರವರು ಮಾತನಾಡುತ್ತಾ ಭಾರತ ಸ್ಟಾರ್ಟ್ ಅಪ್, ಡಿಜಿಟಲ್ ಎಕಾನಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಇದಕ್ಕೆ, ಆಯಾ ಕಾಲಕ್ಕೆ ಸರ್ಕಾರಗಳು ರೂಪಿಸುತ್ತಿರುವ ನೀತಿಗಳು ಕಾರಣವಾಗಿವೆ. ಅದೇ ರೀತಿಯಾಗಿ ಇದೀಗ ನಾಗರಿಕ ಉದ್ದೇಶಗಳಿಗೆ ಪರಮಾಣು ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ‘ಶಾಂತಿ’ ಮಸೂದೆಗೆ ಸಂಸತ್ ಅನುಮೋದನೆ ನೀಡಿರುವುದು ಮತ್ತೊಂದು ಉದಾಹರಣೆಯಾಗಿದೆ ಎಂದು ವಿವರಿಸಿದರು. 1952 ರಿಂದ 1967 ರವರೆಗೆ ನಮ್ಮಲ್ಲಿ ಲೋಕಸಭೆ ಮತ್ತು ವಿಧಾನಸಭಾಗಳಿಗೆ ಒಮ್ಮೆಗೇ ಚುನಾವಣೆಗಳನ್ನು ನಡೆಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಪದ್ಧತಿ ಬದಲಾಗಿದೆ. ಅದರಲ್ಲೂ, 1990ರ ನಂತರ ಹೆಚ್ಚು ಕಡಿಮೆ ಪ್ರತಿ ವರ್ಷವೂ ದೇಶದ ಒಂದಲ್ಲಾ ಒಂದು ರಾಜ್ಯದಲ್ಲಿ ಚುನಾವಣೆ ನಡೆದಿದೆ. ಹೀಗಾಗಿ, ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸುವುದರಿಂದ ತುರ್ತು ಗಮನ ನೀಡಬೇಕಾದ ಕಾರ್ಯನೀತಿ ರೂಪಿಸುವುದು ವಿಳಂಬವಾಗುತ್ತಿದೆ. ಪ್ರತಿ ವರ್ಷವೂ ಈ ಕಾರಣಕ್ಕಾಗಿ ನಾಲ್ಕರಿಂದ ಐದು ತಿಂಗಳ ಅವಧಿಯಲ್ಲಿ ಯಾವುದೇ ಹೊಸ ನೀತಿ ರೂಪಿಸಲಾಗದ ಪರಿಸ್ಥಿತಿಯಿದೆ. “ಒಂದು ದೇಶ ಒಂದು ಚುನಾವಣೆ” ಎಂಬುದು ಉದ್ದೇಶ ಹೊಂದಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್‍ರವರು ಮಾತನಾಡುತ್ತಾ ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ ಸೂಕ್ತ, ಹೆಚ್ಚು ಸಮಂಜಸ, ಈ ಹಿನ್ನಲೆಯಲ್ಲಿ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಶಿಕ್ಷಣ ಆರೋಗ್ಯ ಸೇರಿದಂತೆ ಅನೇಕ ವಲಯಗಳಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಿ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಅಡೆತಡೆಯಿಲ್ಲದೆ, ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಬಹುದು, ಅಧಿಕಾರಿ, ಸಿಬ್ಬಂದಿ ಸೇವೆಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಂಡು, ಅನಗತ್ಯ ವೆಚ್ಚ, ಸಮಯ ಉಳಿತಾಯ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಶಾಸಕಾಂಗ ಮಂಡಳಿಯ ಸದಸ್ಯರಾದ ಕೆ.ಎಸ್.ನವೀನ್‍ರವರು ಮಾತನಾಡುತ್ತಾ ಮತದಾನ ನಮಗೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕು ಅದನ್ನು ಪ್ರತಿಯೊಬ್ಬರು ತಪ್ಪದೆ ಚಲಾಯಿಸಬೇಕು. ಶಾಲಾ ಕಾಲೇಜಿನಲ್ಲಿ ಇಂತಹ ಸಂವಾದ ಕಾರ್ಯಕ್ರಮ ಏರ್ಪಡಿಸುವುದರಿಂದ ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಒಂದೇ ಬಾರಿಗೆ ಚುನಾವಣೆ ನಡೆಸುವುದರಿಂದಸರ್ಕಾರದ ಖಜಾನೆ ಮೇಲೆ ಆಗುತ್ತಿರುವ ಆರ್ಥಿಕ ಹೊರೆ ನಿಯಂತ್ರಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ದಕ್ಷಿಣ ಭಾರತದ ಸಂಚಾಲಕರಾದ ಅನಿಲ್ ಕೆ. ಅಂಟೋನಿ, ಕರ್ನಾಟಕ ಸರ್ಕಾರದ ಶಾಸಕಾಂಗ ಮಂಡಳಿಯ ಸದಸ್ಯರಾದ ಕೆ.ಎಸ್.ನವೀನ್, ತುಮಕೂರಿನ ಶಾಸಕರಾದ ಜೆ.ಬಿ. ಜ್ಯೋತಿಗಣೇಶ್‍ರವರಿಗೆ ಸನ್ಮಾನಿಸಿ ಗೌರವಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತುಮಕೂರಿನ ಶಾಸಕರಾದ ಜ್ಯೋತಿಗಣೇಶ್, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್, ಉಪಪ್ರಾಂಶುಪಾಲರಾದ ಡಾ.ಎನ್.ಚಂದ್ರಶೇಖರ್, ಪ್ರತೀಮಾ ಸುರೇಶ್, ನಂದಗಿರೀಶ್, ಮುಂತಾದವರು ಉಪಸ್ಥಿತರಿದ್ದರು.