ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ ಸಧ್ಯದಲ್ಲೇ ಕೆಲ ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಬಯಸಿರುವಂತೆ ಕಲಾ ಗ್ರಾಮ ನಿರ್ಮಾಣಕ್ಕೆ ಜಾಗವನ್ನು ನೀಡಲಾಗುವುದು ಎಂದು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅವರು ಹೇಳಿದರು.
ಸೋಮವಾರ ನಗರದ ಗಾಜಿನಮನೆ ಆವರಣದಲ್ಲಿ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಸಮಾಜಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳು ಚರ್ಚೆಗಳಾಗುತ್ತಿದ್ದು, ಅಂದಿನ ಸರ್ಕಾರಗಳಿಗೆ ಪರಿಣಾಮಕಾರಿ ಸಲಹೆ–ಸೂಚನೆಗಳನ್ನು ನೀಡಿದ ಇತಿಹಾಸವಿದೆ. ಅಂತೆಯೇ ಈ ಸಮ್ಮೇಳನ ಕೂಡ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಗಳು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು. ಜಿಲ್ಲೆಯ ಅಭಿವೃದ್ಧಿ, ಸಂಸ್ಕøತಿ ಮತ್ತು ಭಾಷೆಗೆ ತಕ್ಕಂತೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಸಮ್ಮೇಳನವು ಮಾರ್ಗದರ್ಶಕವಾಗಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಮ್ಮೇಳನಗಳ ನಿರ್ಣಯಗಳನ್ನು ಸರ್ಕಾರಗಳು ಕಡಿಮೆ ಮಟ್ಟದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದ್ದರೂ ಕನ್ನಡ ನಾಡಿನ ಬೆಳವಣಿಗೆ ಕನ್ನಡಿಗರಿಂದಲೇ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಮ್ಮೇಳನದಲ್ಲಿ ಚರ್ಚೆಗೆ ಬರಲಿರುವ ಅನೇಕ ವಿಚಾರಗಳು ಜಿಲ್ಲೆಯ ಹಾಗೂ ರಾಜ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ತಿಳಿಸಿದರು.

1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ ಶತಮಾನದ ಕಾಲದಿಂದ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 1966ರಲ್ಲಿ ಆರಂಭಗೊಂಡು 60 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಅವರು, 7ನೇ ತರಗತಿಯಲ್ಲಿ ಓದುತ್ತಿದ್ದಾಗ ಸಿದ್ಧಗಂಗಾ ಮಠದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೇವಾದಳದ ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ. ಆ ಅನುಭವಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಜೀವಂತವಾಗಿವೆ ಎಂದು ಹೇಳಿದರು.
ಕನ್ನಡ ಭಾಷೆಗೆ ಈಗಾಗಲೇ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು, ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಿರುವುದು ಕನ್ನಡ ನಾಡಿಗೂ ಕನ್ನಡಾಂಬೆಗೆ ಗೌರವ ತಂದುಕೊಟ್ಟ ಸಾಧನೆಗಳಾಗಿವೆ ಎಂದ ಅವರು, ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಭಾಷೆಯ ರಕ್ಷಣೆಗೆ ಮಾತ್ರವಲ್ಲ, ಸಾಹಿತ್ಯದ ಬೆಳವಣಿಗೆಗೂ ಮಹತ್ತರ ಪಾತ್ರವಹಿಸಿವೆ. ಸಮ್ಮೇಳನಗಳು ಅನೇಕ ವಿವಾದಗಳ ನಡುವೆಯೂ ಕನ್ನಡ ಭಾಷೆಯನ್ನು ಸಾಹಿತ್ಯದ ಮೂಲಕ ಉಳಿಸಿ ಬೆಳೆಸಿವೆ ಎಂದು ಹೇಳಿದರು.
ಇಡೀ ಜಗತ್ತಿನಾದ್ಯಂತ ಕನ್ನಡಿಗರು ಕನ್ನಡ ಭಾಷೆಯಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೂ ಜಗದಗಲ ಪ್ರಚಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇತ್ತೀಚೆಗೆ ನಾನು ಬೆಹ್ರಾನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಕನ್ನಡ ಸಂಘಟನೆಗಳ ಮೂಲಕ ದೊಡ್ಡ ಕಟ್ಟಡ ನಿರ್ಮಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದನ್ನು ಕಂಡೆ. ಅಲ್ಲಿನ ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿಯ ಮೇಲಿನ ಆಸಕ್ತಿಯನ್ನು ನೋಡಿ ನಾನು ವೈಯಕ್ತಿಕವಾಗಿ ಒಂದು ಕೋಟಿ ರೂ.ಗಳನ್ನು ಸಂಘಕ್ಕೆ ನೀಡಿದ್ದೇನೆ. ಇಂತಹ ಕನ್ನಡ ಸೇವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿನ ಮೂಲದ ನಾಸಾ ವಿಜ್ಞಾನಿ ಡಾ. ಸೀತಾರಾಮಯ್ಯ ಅವರು ಅಮೆರಿಕದಲ್ಲಿದ್ದರೂ ಕನ್ನಡದಲ್ಲೇ ಮಾತನಾಡುತ್ತಾರೆ. ಇದು ಕನ್ನಡದ ಶಕ್ತಿ ಮತ್ತು ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ತುಮಕೂರಿಗೆ ಮೆಟ್ರೋ ರೈಲು ತರಲು ಈಗಾಗಲೇ ಸಮಗ್ರ ಯೋಜನಾ ವರದಿಗೆ ಅನುಮೋದನೆ ದೊರೆತಿದೆ. ಸುಮಾರು 20ಸಾವಿರ ಎಕರೆ ಪ್ರದೇಶದಲ್ಲಿ ದೇಶದ ಅತಿದೊಡ್ಡ ಕೈಗಾರಿಕಾ ವಲಯ ಸ್ಥಾಪನೆಯಾಗುತ್ತಿದೆ. ಜಿಲ್ಲೆಯಲ್ಲಿ 9 ಇಂಜಿನಿಯರಿಂಗ್ ಕಾಲೇಜುಗಳು, 3 ಮೆಡಿಕಲ್ ಕಾಲೇಜುಗಳಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ ತುಮಕೂರು ಮಹತ್ವದ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.