ಮಕ್ಕಳ ಕೊರತೆ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಇರಾದೆ ಆತಂಕಕಾರಿ : ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ

ತುಮಕೂರು : ರಾಜ್ಯದಲ್ಲಿ ದಿನೇ ದಿನೇ ಸರ್ಕಾರಿ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಹಾಗೂ ನೂರಾರು ಶಾಲೆಗಳು ಮುಚ್ಚುವ ಭೀತಿ ಎದುರಾಗುತ್ತಿದ್ದು, ಆದರೆ ಶಿಕ್ಷಕರು ಮಕ್ಕಳ ಕೊರತೆ ಕಾರಣ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಇರಾದೆ ಆತಂಕಕಾರಿ ಎಂದು ನಾಡಿನ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕಳವಳ ವ್ಯಕ್ತಪಡಿಸಿದರು.

ಸೋಮವಾರ ತುಮಕೂರಿನ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆಯ ಭಾಷಣ ಮಾಡಿ ಅವರು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಪಾಲಿನ ಆಶಾಕಿರಣವಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು. ಎಂದು ಕಳವಳ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ವ್ಯಾಮೋಹ ಮತ್ತು ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು ಶಾಲೆಗಳನ್ನು ಶೂನ್ಯ ದಾಖಲಾತಿ ಶಾಲೆಗಳನ್ನಾಗಿ ಮಾರ್ಪಡಿಸಿ, ಅಂತಿಮವಾಗಿ ಬೀಗ ಹಾಕುವ ಸಂದರ್ಭ ಉಂಟುಮಾಡುತ್ತಿದೆ ಎಂದರು.

ಸರ್ಕಾರಕ್ಕೆ ರಾಷ್ಟ್ರಕವಿ ಕುವೆಂಪು ಅವರ ಮೇಲೆ ನಿಜವಾದ ಗೌರವವಿದ್ದರೆ, ಮೊದಲು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದ ಅವರು, ಕನ್ನಡ ಕೇವಲ ಭಾμÉಯ ಪ್ರಶ್ನೆಯಲ್ಲ, ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳನ್ನು ಸೆಳೆಯುವಂತಾಗಲು ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು. ಶಾಲೆಗಳು ನೋಡಲು ಆಕರ್ಷಕವಾಗಿರಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳು ತಾವಾಗಿಯೇ ಬರುವಂತಹ ವಾತಾವರಣ ನಿರ್ಮಿಸಬೇಕು. ಕಡ್ಡಾಯ ಶಿಕ್ಷಣ ಕಾಯಿದೆಯಂತೆ ಪ್ರತಿ ಎರಡು ಕಿ.ಮೀ.ಗೆ ಕಿರಿಯ ಪ್ರಾಥಮಿಕ, 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಹಾಗೂ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲೆ ಇರುವಂತೆ ಮಾಡುವುದು ಸರ್ಕಾರದ ಕರ್ತವ್ಯ ಎಂದರು.

ಕನ್ನಡ ಶಾಲೆಗಳು ಇಲ್ಲದಿದ್ದರೆ ಭವಿಷ್ಯದಲ್ಲಿ ಕನ್ನಡ ಪತ್ರಿಕೆಗಳನ್ನು ಓದುವವರು, ಕನ್ನಡ ನಾಟಕ ಹಾಗೂ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಹೊಡೆತ ಎಂದ ಅವರು, ಸರ್ಕಾರಿ ಶಾಲೆಗಳಿಲ್ಲದಿದ್ದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಅಂಬೇಡ್ಕರ್ ಹಾಗೂ ಗಾಂಧಿ ಜಯಂತಿಗಳಂತಹ ಪ್ರಜಾಸತ್ತಾತ್ಮಕ ಉತ್ಸವಗಳು ಕ್ಷೀಣಿಸುವ ಪ್ರಸಂಗಗಳು ಸಮೀಪಿಸುತ್ತಿವೆ ಎಂದರು.

ಇಂಗ್ಲಿμï ಮಾಧ್ಯಮದ ಅಬ್ಬರದ ನಡುವೆಯೂ ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತಾಗಬೇಕು ಎಂಬುದು ಕುವೆಂಪು ಅವರ ಆಶಯವನ್ನು ವ್ಯಕ್ತ ಪಡಿಸಿದ ಅವರು, ಕುವೆಂಪು ಗೌರವ ಶಾಲೆಗಳ ಉಳಿವಲ್ಲೇ ಇದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಆಧುನಿಕತೆಯ ಮುಖಪುಟವಾಗಿರುವ ಕುವೆಂಪು ಅವರು ಎಂದಿಗೂ ಪ್ರಭುತ್ವಕ್ಕೆ ತಲೆಬಾಗಿದವರಲ್ಲ. ಅವರು ಆತ್ಮಭಿಮಾನದ ಸಂಕೇತ. ಜಾತಿ ಪದ್ಧತಿಯನ್ನು ವಿರೋಧಿಸಿ, ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸಿದವರು ಎಂದು ಹೇಳಿದರು.

ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು, 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ: ಅಗ್ರಹಾರ ಕೃಷ್ಣಮೂರ್ತಿ, ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *