ತುಮಕೂರು : ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಯಂತ್ರಗಳಾಗಬಾರದು, ಅವರು ಜೀವಂತಿಕೆ ತುಂಬಿರುವ ಸಾಂಸ್ಕೃತಿಕ ಚೈತನ್ಯಗಳಾಗಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೇಳಿದ್ದಾರೆ.
ನಗರದ ಅಮಾನಿಕೆರೆ ಆವರಣದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಹಿರಿಯರು ನಾಡಿಗೆ ನೀಡಿದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪರಿಚಯವನ್ನು ಮಕ್ಕಳು ಮಾಡಿಕೊಳ್ಳಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಮಹತ್ವವನ್ನು ಸಾರುವುದೇ ಈ ಗೋಷ್ಠಿಯ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯ 10 ತಾಲ್ಲೂಕುಗಳಿಂದ ಆಯ್ಕೆಯಾದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಿ ಕನ್ನಡ ನಾಡಿನ ಹಿರಿಮೆಯನ್ನು ಗೋಷ್ಠಿಯಲ್ಲಿ ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಶಿಕ್ಷಣವಲ್ಲದೆ, ಸಾಮಾಜಿಕ ಜ್ಞಾನ ಮತ್ತು ಜೀವನದ ಮೌಲ್ಯಗಳನ್ನು ಕಲಿಸುವ ಸಾಹಿತ್ಯದ ಅವಶ್ಯಕತೆ ಇದೆ ಎಂದರು.
ಕನ್ನಡವನ್ನು 9ನೇ ಶತಮಾನದ ಆದಿಕವಿ ಪಂಪನಿಂದ ಹಿಡಿದು ರಾಷ್ಟ್ರಕವಿ ಕುವೆಂಪುವರೆಗೆ ನೂರಾರು ಸಾಹಿತಿಗಳು ಕನ್ನಡವನ್ನು ಬೆಳೆಸಿದ್ದಾರೆ. 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆದ ಸಾಹಿತ್ಯ ಕ್ರಾಂತಿಯಲ್ಲಿ ತುಮಕೂರು ಜಿಲ್ಲೆಯವರ ಪಾತ್ರ ದೊಡ್ಡದಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
ಡಾ. ರಾಜ್‍ಕುಮಾರ್ ಹಾಗೂ ನರಸಿಂಹರಾಜು ಅವರಂತಹ ಶ್ರೇಷ್ಠ ನಟರನ್ನು ಜಗತ್ತಿಗೆ ಪರಿಚಯಿಸಿದ ಡಾ. ಗುಬ್ಬಿ ವೀರಣ್ಣ ಅವರು ನಮ್ಮ ಜಿಲ್ಲೆಯವರು. ನಟಿ ಮಂಜುಳಾ ಮತ್ತು ಉಮಾಶ್ರೀ ಅವರೂ ಜಿಲ್ಲೆಯವರೇ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಹಲವಾರು ದಶಕಗಳಿಂದ ಕನ್ನಡ ಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸಗಳು ಮತ್ತು ಕೃತಿ ಪ್ರಕಟಣೆಗಳ ಮೂಲಕ ಜಿಲ್ಲೆಯ ಸಾಹಿತ್ಯಿಕ ವಾತಾವರಣವನ್ನು ಜೀವಂತವಾಗಿರಿಸಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಸಮಾಜವು ತನ್ನ ಉಜ್ವಲ ಭವಿಷ್ಯದ ಕನಸುಗಳನ್ನು ಕಾಣುತ್ತಾ ಪ್ರಗತಿಯತ್ತ ಸಾಗುತ್ತದೆ. ಸಮಾಜದ ಭವಿಷ್ಯದ ಆಧಾರ ಸ್ತಂಭಗಳೇ ಇಂದಿನ ಮಕ್ಕಳು. ಅವರಿಗೆ ಕನ್ನಡದ ಸೊಗಡನ್ನು ಪರಿಚಯಿಸಲು ಈ ಸಾಹಿತ್ಯ ಸಮ್ಮೇಳನವು ಒಂದು ಕನ್ನಡದ ಹಬ್ಬವಾಗಬೇಕೆಂಬ ಉದ್ದೇಶದಿಂದ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇಲ್ಲಿಯವರೆಗೆ ನಡೆದಿರುವ ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲ ಆಶಯ ಭಾಷೆಯನ್ನು ಶ್ರೀಮಂತಗೊಳಿಸುವುದಾಗಿದ್ದು, ಕೇವಲ ಭಾಷೆಯಷ್ಟೇ ಅಲ್ಲದೆ, ನಮ್ಮ ನಾಡಿನ ಭವ್ಯ ಪರಂಪರೆ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಈ ಸಮ್ಮೇಳನಗಳ ಮುಖ್ಯ ಗುರಿಯಾಗಿದೆ ಎಂದರು.
ನಮ್ಮ ದೈನಂದಿನ ಆಚಾರ-ವಿಚಾರಗಳು, ನಾವು ಆಚರಿಸುವ ಹಬ್ಬ-ಹರಿದಿನಗಳು ಹಾಗೂ ನಮ್ಮ ಸಾಮಾಜಿಕ ಸಂಬಂಧಗಳಲ್ಲಿ ಕನ್ನಡ ಭಾಷೆಯು ಹಾಸುಹೊಕ್ಕಾಗಿದೆ. ನಾವು ತೊಡುವ ಉಡುಗೆ-ತೊಡುಗೆ, ಗ್ರಾಮೀಣ ಕ್ರೀಡೆಗಳು ಹಾಗೂ ವೈವಿಧ್ಯಮಯ ಜನಪದ ಕಲೆಗಳಲ್ಲಿ ನಮ್ಮ ಭಾಷೆಯ ಅಸ್ತಿತ್ವ ಅಡಗಿದೆ. ಭಾಷೆ ಎನ್ನುವುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದ ಅವರು, ಮಕ್ಕಳ ಮನಸ್ಸಿನಲ್ಲಿ ಕನ್ನಡ ಭಾಷೆಯ ಸಂಸ್ಕಾರ, ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸಿ, ಅವುಗಳ ಬೇರುಗಳು ಗಟ್ಟಿಯಾಗಿ ಇಳಿಯುವಂತೆ ಮಾಡಿದರೆ ಮಾತ್ರ ಭಾಷೆ ಸುಸ್ಥಿರವಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.
ಮಕ್ಕಳಿಗೆ ಗ್ರಾಮೀಣ ಬದುಕಿನ ಸೊಗಡು ಹಾಗೂ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ಜಾಗೃತಿ ಮೂಡಿಸಿದಾಗ ಭಾಷೆಯ ಸಂರಕ್ಷಣೆ ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಬಾರದು. ಇವು ಗ್ರಾಮೀಣ ಮಟ್ಟಕ್ಕೂ ತಲುಪಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳಲ್ಲಿಯೂ ಇಂತಹ ಸಾಹಿತ್ಯ ಹಬ್ಬಗಳು ಆಚರಿಸಲ್ಪಡಬೇಕು. ಈ ಮೂಲಕ ಹಳ್ಳಿಯ ಜನಪದ ಕಲೆ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಹೇಮಾ, ಕರ್ನಾಟಕ ಪಬ್ಲಿಕ್ ಸ್ಕೂಲ್, ನೊಣವಿನಕೆರೆ
ಮೊಬೈಲನ್ನು ಬಳಕೆ ಮಾಡಿ ಆಟದ ಮೈದಾನಗಳನ್ನು ಮರೆತಿದ್ದಾರೆ. ಪುಸ್ತಕಗಳ ಸುವಾಸನೆಯನ್ನು ಮರೆತಿದ್ದಾರೆ. ತಂದೆ-ತಾಯಿಯ ಮಾತು ಕೇಳದೆ ಗಂಟೆ ಗಟ್ಟಲೆ ಮೊಬೈಲಿನಲ್ಲಿ ಮುಳುಗಿ ಹೋಗಿದ್ದಾರೆ.
ಅತಿಯಾದ ಮೊಬೈಲ್ ಬಳಕೆ ಕಣ್ಣಿನ ಸಮಸ್ಯೆ, ನಿದ್ರಾಹೀನತೆ, ಮಾನಸಿಕ ಒತ್ತಡ, ಕೋಪ, ಆಟ, ಏಕಾಂತತೆ, ಅಶ್ಲೀಲ ಹಾಗೂ ಹಿಂಸಾತ್ಮಕ ವಿಷಯಗಳ ಪ್ರಭಾವ ಹೆಚ್ಚಾಗುತ್ತದೆ. ಅದರಿಂದ ಇವೆಲ್ಲವೂ ಮಕ್ಕಳ ಭವಿಷ್ಯಕ್ಕೆ ಬಾರಿ ಹೊಡೆತ ಬೀರುತ್ತವೆ.
ಮೊಬೈಲ್ ಬಳಸುವುದು ತಪ್ಪಲ್ಲ. ಹೆಚ್ಚು ಬಳಸುವುದು ತಪ್ಪು. ಮೊಬೈಲ್ ಬಳಕೆ ಮಿತಿಯಲ್ಲಿದ್ದರೆ ಉಪಯುಕ್ತ, ಮೀರಿದರೆ ಅಪಾಯಕಾರಿಯಾಗುತ್ತದೆ.
ಇಂದಿನ ಮಕ್ಕಳ ಮೊಬೈಲ್ ಸಂಸ್ಕೃತಿಗೆ ಪೋಷಕರೇ ಕಾರಣ. ಏಕೆಂದರೆ ಮಕ್ಕಳು ನಿಯಂತ್ರಣದಲ್ಲಿರಲು ಮೊಬೈಲ್ ಕೊಟ್ಟರೆ ಮಕ್ಕಳ ಭವಿಷ್ಯ ಹಾಳುಮಾಡುತ್ತದೆ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು, ಕಥೆ ಹೇಳಬೇಕು, ಈ ರೀತಿ ಮಾಡುವುದರಿಂದ ಮೊಬೈಲ್ ಬಳಸುವುದು ಕಡಿಮೆ ಮಾಡಬಹುದು ಎಂದು ಹೇಳಿದರು.
ಕನ್ನಡ ಉಳಿಸುವುದರಲ್ಲಿ ಕನ್ನಡಿಗರ ಪಾತ್ರ ವಿಷಯ ಮಂಡನೆ
ಕಾವ್ಯ, ಕಲ್ಪತರು ಸೆಂಟ್ರಲ್ ಕಾಲೇಜು ತಿಪಟೂರು

ಕನ್ನಡ ನಾಡಿನಲ್ಲಿ ಬೇರೆ ಭಾಷೆಯ ಪ್ರಭಾವ ಅತಿಥಿಯಾಗಿರಬೇಕೇ ಹೊರತು, ಯಜಮಾನಿಯಾಗಲ್ಲ. ಕನ್ನಡ ನಮ್ಮ ತಾಯಿ. ಕನ್ನಡಿಗರು ತಾಯಿಯ ಕಾವಲುಗಾರರಬೇಕು, ಕನ್ನಡ ಬಳಸಿ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಕನ್ನಡ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು 2 ಸಾವಿರ ವರ್ಷಗಳ ಪ್ರಾಚೀನವಾದದ್ದು. ಕನ್ನಡ ಭಾಷೆಯಲ್ಲಿ ಕಾವ್ಯ ರಚನೆಯಾಗುವ ಸಂದರ್ಭದಲ್ಲಿ ಎಷ್ಟೋ ಭಾಷೆಗಳು ಹುಟ್ಟೇ ಇರಲಿಲ್ಲ. ಕನ್ನಡ ತರ್ಕಬದ್ಧವಾದ ಲಿಪಿಯನ್ನು ಹೊಂದಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆ ರಾಜನಾಗಿ ಅನೇಕ ಸಾಮ್ರಾಜ್ಯಗಳ ರಾಜ್ಯ ಭಾಷೆಯಾಗಿ ಮೆರೆದು ಇಂದು ಅಳಿವಿನ ಹಂಚಿನಲ್ಲಿದೆ.
ಭಾರತ ದೇಶದಲ್ಲಿ ಅಳಿವಿನ ಹಂಚಿನಲ್ಲಿರುವ ಭಾಷೆಗಳಲ್ಲಿ ಅಸ್ಸಾಂ, ಸಂಸ್ಕೃತ, 3ನೇ ಹಂತದಲ್ಲಿ ಕನ್ನಡ ಭಾಷೆಯಿದೆ. ಇದಕ್ಕೆ ಕಾರಣ ಕನ್ನಡಿಗರಲ್ಲಿ ಕನ್ನಡಾಭಿಮಾನದ ಕೊರತೆ. ಕನ್ನಡ ಉಳಿವು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಸಾಧ್ಯವಾಗುವುದಿಲ್ಲ. ಈ ಮಣ್ಣಿನಲ್ಲಿ ಹುಟ್ಟಿ ಬೆಳೆದು ನೆಲೆ ಕಟ್ಟಿಕೊಂಡಿರುವವರೆಲ್ಲ ಕನ್ನಡ ಉಳುವಿಕೆಗೆ ಶ್ರಮಿಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವ, ಸಹನಾ ಸಿ. ಪಿ.ಜಿ ಜಿ ಹೆಚ್ ಎಸ್ ಚೇಳೂರು
ಕನ್ನಡ ಸಾಹಿತ್ಯ ಸಮ್ಮೇಳನವು 1915 ರಿಂದ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಹತ್ವದ ಸಾಂಸ್ಕೃತಿಕ ಚಳುವಳಿಯಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡಿಗರ ಏಕೀಕರಣ ಹಾಗೂ ಕನ್ನಡ ಸಂಸ್ಕೃತಿಯ ಸಂರಕ್ಷಣೆಗೆ ದೀರ್ಘಕಾಲದಿಂದ ಬೃಹತ್ ವೇದಿಕೆಯಾಗಿರುವ ಈ ಸಮ್ಮೇಳನದಲ್ಲಿ ಮಕ್ಕಳ ಗೋಷ್ಠಿ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ ಸೇರಿದಂತೆ ಅನೇಕ ಸಾಹಿತ್ಯ–ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಜರುಗುತ್ತವೆ. ಇದರ ಹಿನ್ನೆಲೆಯನ್ನು ನೋಡಿದರೆ ಮೈಸೂರು ಆರ್ಥಿಕ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಭಾಷೆಯ ಉತ್ತೇಜನಕ್ಕಾಗಿ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್, ಪಿ.ಎಸ್. ಆಚಿತ್ತರಾವ್ ಸೇರಿದಂತೆ ಹಲವರನ್ನು ಒಳಗೊಂಡ ಉಪಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ಕನ್ನಡನಾಡಿನ ವಿದ್ವಾಂಸರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ನಂತರದಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಿಯಮಿತವಾಗಿ ಆಯೋಜಿಸುವ ಪರಿಪಾಠ ಆರಂಭವಾಯಿತು. ಕನ್ನಡಕ್ಕಾಗಿ ಅವಿರತ ಸೇವೆ ಸಲ್ಲಿಸಿರುವ ಕವಿಗಳು ಹಾಗೂ ಸಾಹಿತಿಗಳನ್ನು ಗುರುತಿಸಿ ಅವರಿಗೆ ಸಮ್ಮೇಳನಾಧ್ಯಕ್ಷರ ಗೌರವ ನೀಡಲಾಗುವುದು ಎಂಬುದು ಈ ಸಮ್ಮೇಳನದ ವಿಶಿಷ್ಟ ಪರಂಪರೆಯಾಗಿದೆ.
ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ: ಕರೀಗೌಡ ಬೀಚನಹಳ್ಳಿ, ವೃತ್ತಿ ತರಬೇತಿ ನಿಗಮ ಮಂಡಳಿಯ ಅಧ್ಯಕ್ಷ ಮುರುಳಿಧರ ಹಾಲಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಘುಚಂದ್ರ, ಮಧುಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾಧವ ರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.