ತುಮಕೂರು : ರಾಜ್ಯಾದ್ಯಂತ ಸುಮಾರು 20ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಸಲಾಗುತ್ತಿದ್ದು, ಅದರಲ್ಲಿ ತುಮಕೂರು ಜಿಲ್ಲೆಯಲ್ಲಿ 1.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಸೇರಿದಂತೆ ಎಲ್ಲ ತರಹದ ಸಿರಿಧಾನ್ಯಗಳ ಬೆಳೆ ಬೆಳೆಯುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಸುವ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಹೇಳಿದ್ದಾರೆ.
ಬುಧವಾರ ನಗರದ ಗಾಜಿನ ಮನೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ವಾಣಿಜ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳಿಗೆ 10ಸಾವಿರ ವರ್ಷಗಳ ಇತಿಹಾಸವಿದ್ದು, ಮಾನವನು ಬೆಳೆದ ಮೊದಲ ಕೃಷಿ ಬೆಳೆಗಳಲ್ಲಿ ಸಿರಿಧಾನ್ಯಗಳು ಒಂದು, ಭಾರತದಲ್ಲಿ ಸಿರಿಧಾನ್ಯ ಬೆಳೆಯುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಿರಿಧಾನ್ಯಗಳ ಉತ್ಪಾದನೆ ಕ್ರಮೇಣ ಹೆಚ್ಚುತ್ತಿದೆ ಎಂದು ಹೇಳಿದರು.
ದೇಶದಲ್ಲಿ 60ರ ದಶಕದವರೆಗೂ ಆಹಾರ ಉತ್ಪಾದನೆ ಕಡಿಮೆ ಇದ್ದರೂ, 80ರ ನಂತರ ಕೃಷಿ ತಂತ್ರಜ್ಞಾನದಲ್ಲಿ ನಡೆದ ಅಭಿವೃದ್ಧಿಯಿಂದ ಅಕ್ಕಿ, ಗೋಧಿ, ಸಕ್ಕರೆ, ಹಾಲು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಲ್ಲಿ ಭಾರತ ಆತ್ಮನಿರ್ಭರ ದೇಶವಾಗಿದೆ. ಇಂದು ನಮ್ಮ ದೇಶವು ಸಾಕಷ್ಟು ಆಹಾರ ಉತ್ಪಾದನೆ ಮಾಡಿ ಇತರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಾಗುವುದರಿಂದ ರೈತರ ಆರ್ಥಿಕ ಸ್ಥಿತಿ ಬಲವಾಗುವುದಲ್ಲದೆ, ಜನರ ಆರೋಗ್ಯ ಕಾಪಾಡುವಲ್ಲಿ ಸಹ ಮಹತ್ತರ ಪಾತ್ರ ವಹಿಸುತ್ತವೆ. ಸಿರಿಧಾನ್ಯಗಳಿಂದ ಇಂದಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ತುಮಕೂರಿನ ಜೀನಿ ಸಂಸ್ಥೆ ಸಿರಿ ಧಾನ್ಯಗಳ ಆಹಾರ ಪದಾರ್ಥಗಳನ್ನು ತಯಾರಿಸಿ ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಕಾರ್ಯಾರಂಭ ಮಾಡಿದರೂ, ಇಂದು ವರ್ಷಕ್ಕೆ ಸುಮಾರು 7 ಕೋಟಿ ರೂಪಾಯಿಗಳ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಎಸ್. ಕಳ್ಳೆನ್ನವರ ಮಾತನಾಡಿ, ಸಿರಿಧಾನ್ಯಗಳು ಕಡಿಮೆ ಮಳೆ ಪ್ರಮಾಣದಲ್ಲಿಯೇ ಬೆಳೆದು ಬೆಳೆಗಾರರಿಗೆ ಹೆಚ್ಚಿನ ಅನುಕೂಲತೆ ನೀಡುವ ಬೆಳೆಗಳಾಗಿವೆ. ಇವುಗಳಿಗೆ ಹೆಚ್ಚು ರಸಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳ ಅವಶ್ಯಕತೆಯಿಲ್ಲದೆ, ಕೀಟ-ರೋಗ ಬಾಧೆ ಕಡಿಮೆಯಾಗಿರುವುದರಿಂದ ಬೆಳೆ ವೆಚ್ಚವೂ ತಗ್ಗುತ್ತದೆ. ಸಿರಿಧಾನ್ಯಗಳು ಮಣ್ಣಿನ ಸಾರಾಂಶವನ್ನು ಕಾಪಾಡುವ ಜೊತೆಗೆ ಪರಿಸರ ಸ್ನೇಹಿ ಬೆಳೆಯಾಗಿಯೂ ಪರಿಗಣಿಸಲ್ಪಟ್ಟಿವೆ. ಪೆÇೀಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಉತ್ತಮ ಪಶುವಿನ ಮೇವು ಆಗಿಯೂ ಬಳಸಬಹುದು. ರೈತರು ಸಿರಿಧಾನ್ಯಗಳನ್ನು ಬೆಳೆದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಕಾರಣ ಆರ್ಥಿಕ ಭದ್ರತೆಗೂ ಸಹಾಯವಾಗುತ್ತದೆ. ಜೊತೆಗೆ, ಸಿರಿಧಾನ್ಯಗಳಿಂದ ತಯಾರಾಗುವ ಆಹಾರ ಪದಾರ್ಥಗಳು ಮಾನವ ಆರೋಗ್ಯವನ್ನು ಕಾಪಾಡಲು ಮಹತ್ತರ ಪಾತ್ರ ವಹಿಸುತ್ತಿದ್ದು, ಗ್ರಾಹಕರಿಗೆ ಆರೋಗ್ಯಕರ ಜೀವನಶೈಲಿಯನ್ನು ನೀಡುವಲ್ಲಿ ಸಹಕಾರಿ ಆಗುತ್ತವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅಶೋಕ್ ಕೆ.ವಿ, ಬಿ.ಎಂ.ಟಿ.ಸಿ. ಉಪಾಧ್ಯಕ್ಷ ನಿಕೇತ್ ಮೌರ್ಯ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ಎನ್., ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಗಮದ ಅಧ್ಯಕ್ಷ ಗೋವಿಂದರಾಜು, ಉಪ ಕೃಷಿ ನಿರ್ದೇಶಕ ಹುಲಿರಾಜ್ ಹೆಚ್. ಉಪಸ್ಥಿತರಿದ್ದರು.