ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರು ನೇಮಕ ಮಾಡಲು ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹ

ಬೆಂಗಳೂರು : ಅವಧಿ ಮುಗಿಯುತ್ತಿರುವ ಗ್ರಾಮಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿಯ ಸದಸ್ಯರ ಮಹಾ ಒಕ್ಕೂಟ ತೀವ್ರವಾಗಿ ಖಂಡಿಸಿ, ಈಗಿರುವ ಆಡಳಿತ ಸಮಿತಿಯನ್ನು ಮರು ನೇಮಕ ಮಾಡುವಂತೆ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹಿಸಿದ್ದಾರೆ.

2026ರ ಜನವರಿ 16 ರಂದು ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1)ಬಿ(ii) ರನ್ವಯ ಆಡಳಿತಾವಧಿ ಮುಗಿಯುತ್ತಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುತ್ತದೆ.

ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1)ಬಿ(i) ರನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನೊಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಲು ಅವಕಾಶವಿರುತ್ತದೆ. ರಾಜ್ಯ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳಿಗೆ ಅವಕಾಶ ನೀಡದೆ, ಅಧಿಕಾರಿಗಳಿಗೆ ಆಡಳಿತ ನಡೆಸುವ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವ ವಿರೋದಿ ನಡೆಯನ್ನು ನಡೆಯುತ್ತಿದೆ. ಈ ನಡೆಯನ್ನು ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ 2020 ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾಣೆ ನಡೆಸಲು ಸಾಧ್ಯವಾಗದೆ, ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾದ ಸಂದರ್ಭದಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದಂತಹ, ಇಂದಿನ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷರು, ಇಂದಿನ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಿ. ಕೆ. ಶಿವಕುಮಾರ್ ರವರು ಮೇ 12, 2020 ರಂದು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ತಳಪಾಯ, ಅವುಗಳಿಗೆ ಅಢಳಿತಾಧಿಕಾರಿಗಳನ್ನು ನೇಮಿಸದೇ ಇರುವ ಆಡಳಿತ ಸಮಿತಿಯ ಅವಧಿಯನ್ನೇ 6 ತಿಂಗಳು ವಿಸ್ತರಿಸಬೇಕೆಂದು ಅಂದಿನ ಸಕಾರವನ್ನು ಒತ್ತಾಯಿಸಿದ್ದನ್ನು ಸರ್ಕಾರಕ್ಕೆ ನೆನಪಿಸ ಬಯಸುತ್ತದೆ. ಹಾಗೂ 90 ರ ದಶಕದಲ್ಲಿ ಗ್ರಾಮ ಪಂಚಾಯಿತಿಗಳ ಅವಧಿಯನ್ನು ವಿಸ್ತರಿಸಿದ್ದ ಉದಾಹರಣೆಯನ್ನು ಸರ್ಕಾರದ ಗಮನಕ್ಕೆ ತರಬಯಸುತ್ತದೆ ಎಂದಿದ್ದಾರೆ.

ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಜಾಪ್ರಭುತ್ವ ವಿರೋಧಿ ಆದೇಶವನ್ನು ಹಿಂಪಡೆದು ಕಾಯ್ದೆಯ ಅನ್ವಯ ಆಡಳಿತಾವಧಿ ಕೊನೆಗೊಳ್ಳುತ್ತಿರುವ ಆಡಳಿತ ಸಮಿತಿಯನ್ನು ಪುನರ್ ನೇಮಕ ಮಾಡಬೇಕೆಂದು ಸರ್ಕಾರವನ್ನು ಅಗ್ರಹಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *