ಕಾನೂನು ಮಾಪನಶಾಸ್ತ್ರದ ತೂಕ – ಅಳತೆ ಕಾನೂನಿಗೆ ತಿದ್ದುಪಡಿ – ಗ್ರಾಹಕ ಪರಿಷತ್ ವಿರೋಧ

ತುಮಕೂರು: ಭಾರತ ಸರ್ಕಾರವು ತನ್ನ ಇತ್ತೀಚಿನ ಅಧಿಸೂಚನೆಯ ಮೂಲಕ ಗ್ರಾಹಕ ವ್ಯವಹಾರಗಳ ಅಡಿಯಲ್ಲಿ ಬರುವ ಕಾನೂನು ಮಾಪನಶಾಸ್ತ್ರ ಇಲಖೆಗೆ ನಿಯಮಗಳ ತಿದ್ದುಪಡಿ ಮಾಡಲು ಹೊರಟಿದೆ. ಲೈಸೆನ್ಸ್ ನವೀಕರಿಸುವ ಸಮಯ ಮಿತಿಯನ್ನು ವಿಸ್ತಾರಗೊಳಿಸುತ್ತಿದ್ದು, ಇದು ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಗ್ರಾಹಕರ ಹಕ್ಕುಗಳನ್ನು ಮೊಟಕು ಮಾಡಲಿದೆ ಎಂದು ಗ್ರಾಹಕ ಜಾಗೃತಿ ಹಕ್ಕು ಮತ್ತು ಶಿಕ್ಷಣ ಪರಿಷತ್ ಅಸಮಾದಾನ ವ್ಯಕ್ತಪಡಿಸಿದೆ.

ಈ ಸಂಬಂಧ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಪರಿಷತ್ ಕಾರ್ಯದರ್ಶಿ ಹಾಗೂ ವಕೀಲರಾದ ಟಿ.ಎಸ್.ನಿರಂಜನ್ ಅವರು ಪೆಟ್ರೋಲ್, ಡೀಸೆಲ್ ಪಂಪುಗಳು ಸೇರಿದಂತೆ ತೂಕ ಮತ್ತು ಅಳತೆ ಯಂತ್ರಗಳನ್ನು ವರ್ಷಕ್ಕೊಮ್ಮೆ ತಪಾಸಣೆ ನಡೆಸಿ ಸರ್ಟಿಫೈ ಮಾಡುವ ಅವಕಾಶ ಈವರೆಗೆ ಇದೆ. ಆದರೆ ಈ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಾಗಲೇ ನೋಟಿಫಿಕೇಷನ್ ಹೊರಡಿಸಿದೆ. ಈ ನಿಯಮ ಜಾರಿಗೆ ಬಂದರೆ ಗ್ರಾಹಕರ ಮೇಲೆ ಮತ್ತಷ್ಟು ಹೊಡೆತ ಬೀಳುವುದಲ್ಲದೆ, ತೂಕ ಮತ್ತು ಅಳತೆಯಲ್ಲಿನ ಮೋಸ ಮತ್ತಷ್ಟು ಹೆಚ್ಚಲಿದೆ ಎಂದರು.

ಪೆಟ್ರೋಲ್, ಡೀಸೆಲ್ ಪಂಪುಗಳ ಮುದ್ರೆ ಅವಧಿಯನ್ನು ಒಂದುವರ್ಷದಿಂದ 2 ವರ್ಷಕ್ಕೆ ವಿಸ್ತರಿಸಲಾಗಿದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರವು ಕಾನೂನು ಮಾಪನ ಶಾಸ್ತ್ರ ಇಲಾಖೆಯನ್ನು ಖಾಸಗೀಕರಣಗೊಳಿಸುವ ಮೂಲಕ ಇಲಾಖೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಮುದ್ರೆ ಮಾಡುವ ಅಧಿಕಾರವನ್ನು ಸರ್ಕಾರದಿಂದ ಕಸಿದು ಖಾಸಗೀಯವರ ಕೈಗೆ ಒಪ್ಪಿಸುವ ಪ್ರಯತ್ನದ ಅನುಮಾನಗಳು ಮೂಡುತ್ತಿದ್ದು, ಕೇಂದ್ರ ಸರ್ಕಾರ ಈ ಕೂಡಲೆ ಈ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಬಿಡುವಂತೆ ಆಗ್ರಹಿಸಿದರು.

ಬಹಳಷ್ಟು ಕಡೆ ಪೆಟ್ರೋಲ್, ಡೀಸೆಲ್ ಪಂಪುಗಳಲ್ಲಿ ಮೋಸವಾಗುತ್ತಿರುವ ಆಪಾದನೆಗಳಿವೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯು ಈ ಬಗ್ಗೆ ಹೆಚ್ಚು ತಪಾಸಣೆ ನಡೆಸಿ ಅನ್ಯಾಯಗಳನ್ನು ಪತ್ತೆ ಹಚ್ಚಬೇಕು. ಆದರೆ ಸಮಯದ ಅವಕಾಶವನ್ನು ಎರಡು ವರ್ಷಗಳಿಗೆ ವಿಸ್ತರಿಸುವುದರಿಂದ ಇಲಾಖೆಯ ಕಾರ್ಯವೈಖರಿಯನ್ನೇ ಕುಂಠಿತಗೊಳಿಸಿದಂತಾಗುತ್ತದೆ. ಮೋಸದ ಸಂಭವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ರೈತರು ತೂಕ ಮಾಡಿಸುವ ತೂಕದ ಯಂತ್ರಗಳು, ಒಡವೆ, ಆಭರಣ ಅಂಗಡಿಗಳಲ್ಲಿ, ದಿನಸಿ ಅಂಗಡಿಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಬಳಸುವ ತೂಕದ ಯಂತ್ರಗಳನ್ನು ಪರಿಶೀಲಿಸಿ ಮುದ್ರೆ ಮಾಡುವ ಅಧಿಕಾರ ಖಾಸಗೀಯವರಿಗೆ ವಹಿಸಿದರೆ ಮತ್ತಷ್ಟು ಅಪಾಯವಿದೆ. ಇದರಿಂದ ರೈತರು ಮಾರಾಟ ಮಾಡುವ ಹಾಗೂ ಗ್ರಾಹಕರು ಖರೀದಿಸುವ ವಸ್ತುಗಳಲ್ಲಿ ಮೋಸದ ಸಾಧ್ಯತೆ ಹೆಚ್ಚುತ್ತದೆ. ನಿಯಮ ಉಲ್ಲಂಘಿಸುವವರಿಗೆ ಕಠಿಣ ಕ್ರಮ ವಹಿಸುವ ಬದಲು ಸುಧಾರಣಾ ನೋಟಿಸ್ ನೀಡುವ ಮೂಲಕ ಗ್ರಾಹಕರ ಹಕ್ಕುಗಳನ್ನು ವಂಚಿಸಲಾಗುತ್ತಿದೆ ಎಂದರು.

ಖಾಸಗೀಕರಣದಿಂದ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ರೂ.ಗಳಷ್ಟು ರಾಜಸ್ವ ನಷ್ಟವಾಗುವುದಲ್ಲದೆ, ಗ್ರಾಹಕರ ರಕ್ಷಣೆಯಲ್ಲಿ ವಿಫಲವಾಗುತ್ತದೆ. ನೂರಾರು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ತೂಕ ಮತ್ತು ಅಳಗೆಯಲ್ಲಿ ಸಣ್ಣ ಪ್ರಮಾಣದ ಮೋಸವಾದರು ಗ್ರಾಹಕರಿಗೆ ಸಾವಿರಾರು ಕೋಟಿ ರೂ.ಗಳಷ್ಟು ನಷ್ಟ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕದ ಯಂತ್ರಗಳ ಪರಿಶೀಲನೆ ಮತ್ತು ಮುದ್ರೆ ಅವಧಿಯನ್ನು ವಿಸ್ತರಿಸದೆ ಒಂದು ವರ್ಷದ ಅವಧಿಗೆ ಸೀಮಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಗ್ರಾಹಕ ಪರಿಷತ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಾಟ ರೂಪಿಸಲಾಗುವುದು. ಪ್ರಹ್ಲಾದ ಜೋಷಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಎ.ವಿ.ವಿಠ್ಠಲರಾವ್, ಅತ್ತಿ ರೇಣುಕಾನಂದ,ಅಯಾಜ್ ಅಹಮದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *