ತುಮಕೂರು: ರಾಜ್ಯ ನೊಣಂಬ ವೀರಶೈವ ಸಮಾಜದ ಸರ್ವಸದಸ್ಯರ ಸಭೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರ ವಿರುದ್ಧ ಹೇಳಿಕೆ ನೀಡಿರುವುದನ್ನು ರಾಜ್ಯ ವಿ.ಸೋಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಹೆಚ್.ಡಿ.ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹೇಶ್ ಖಂಡಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ನೊಣಂಬ ವೀರಶೈವ ಸಮಾಜದ ಸಭೆಯಲ್ಲಿ ಜಿ.ಎಸ್.ಬಸವರಾಜು ಅವರು, ವಿ.ಸೋಮಣ್ಣ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ತಾವು ಶ್ರಮ ಹಾಕಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ ಎಂದು ಆರೋಪಿಸಿ ಅವರ ಹೇಳಿಕೆಯನ್ನು ಖಂಡಿಸಿದರು.
ಸಚಿವ ಸೋಮಣ್ಣ ಅವರು ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಜನರ ಮನ್ನಣೆ ಪಡೆಯುತ್ತಿದ್ದಾರೆ. ಆದರೆ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಸೋಮಣ್ಣನವರನ್ನು ಅಪಮಾನಿಸುವ ಉದ್ದೇಶದಿಂದ ಅವರ ವಿರುದ್ಧ ಸಲ್ಲದ ಹೇಳಿಕೆ ನೀಡಿ ಟೀಕಿಸಿರುವುದು ಸರಿಯಲ್ಲ ಎಂದು ಹೇಳಿದರು
ತಮ್ಮ 50 ವರ್ಷಗಳ ರಾಜಕಾರಣದಲ್ಲಿ ಜಿ.ಎಸ್.ಬಸವರಾಜು ಅವರ ಕೊಡುಗೆಗಳೇನು? ಕಾಂಗ್ರೆಸ್ನಲ್ಲಿದ್ದ ಅವರು ಬಿಜೆಪಿಗೆ ಬಂದಮೇಲೂ ಕಾಂಗ್ರೆಸ್ ಧೋರಣೆ ಅನುಸರಿಸಿದರು. ಬಿಜೆಪಿಯಲ್ಲಿದ್ದ ಬಂಡಾಯದ ಲಾಭ ಪಡೆದು ಅಂದಿನ ಲೋಕಸಭಾ ಸದಸ್ಯರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ಅವರು ಮತ್ತೆ ಸ್ಪರ್ಧೆ ಮಾಡದಂತೆ ಲಾಭಿ ಮಾಡಿದರು. ಬಿಜೆಪಿಯ ಸಂಸದರಾಗಿ ಕೆಜೆಪಿಗೆ ಬೆಂಬಲ ನೀಡಿರುವುದಲ್ಲದೆ ವಿಧಾನಸಭಾ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ತಪ್ಪಿಸಿ ಪಕ್ಷ ಸೋಲು ಕಾಣಲು ಕಾರಣರಾದರು ಎಂದು ಆರೋಪಿಸಿದರು.
ಸಚಿವ ವಿ.ಸೋಮಣ್ಣನವರು ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇಂದೇಂದೂ ಆಗಿರದಂತಹ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಚಾಲನೆ ಕಂಡಿವೆ. ಸೋಮಣ್ಣನವರ ಜನಪ್ರಿಯತೆ ಹಾಗೂ ಕಾರ್ಯವೈಖರಿ ಸಹಿಸಲಾಗದೆ ಜಿ.ಎಸ್.ಬಸವರಾಜು ಅವರು ಸೋಮಣ್ಣ ಅವರ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ರಾಮಲಿಂಗಯ್ಯ, ಕೆ.ಪಿ.ಮಹೇಶ್ ಒತ್ತಾಯಿಸಿದರು