ತುಮಕೂರು: ಹಸು ಅಲ್ಲ, ಹಂದಿಗಳೂ ತಿನ್ನಲು ಲಾಯಕ್ ಅಲ್ಲದ ಹುಳು ಬಿದ್ದ ಧಾನ್ಯಗಳನ್ನು ಬಳಸಿ ಶಾಲಾ ಮಕ್ಕಳಿಗೆ ಆಹಾರ ತಯಾರಿಸುತ್ತಿದ್ದಾರೆ. ಇದನ್ನು ನೋಡಿಕೊಳ್ಳಬೇಕಾದ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಎಲ್ಲಾ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೆ? ಅವರ ವಿರುದ್ಧ ರಾಜ್ಯ ಮಟ್ಟದ ತನಿಖೆಗೆ ಆದೇಶಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ಗೌಡರು ವಿಧಾನಸಭೆಯಲ್ಲಿ ಆಗ್ರಹಿಸಿದರು.
ಗಮನ ಸೆಳೆಯುವ ಸೂಚನೆಯ ಮೂಲಕ ವಿಷಯ ಪ್ರಸ್ತಾಪಿಸಿದ ಅವರು, ತಾವು ಶಾಸಕರಾಗಿ, ಎಸ್ಎಡಿಎಂಸಿ ಅಧ್ಯಕ್ಷರಾಗಿ ಇದ್ದುಕೊಂಡು ಈ ಪ್ರಕರಣವನ್ನು ಸದನದ ಗಮನಕ್ಕೆ ತರುತ್ತಿರುವುದಾಗಿ ಹೇಳಿದ ಸುರೇಶ್ಗೌಡರು, ಇದು ಕೇವಲ ಒಂದು ಶಾಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ ಎಂದರು.
ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಉತ್ತರದಿಂದ ಶಾಸಕರು ಸಮಾಧಾನಗೊಳ್ಳದ ಕಾರಣ ಈ ಬಗ್ಗೆ ನಾಳೆ ವಿವರವಾದ ಉತ್ತರ ನೀಡುವುದಾಗಿ ಹೇಳಿದರು. ಒಂದು ವೇಳೆ ಕಡಿಮೆ ದರದ ಟೆಂಡರ್ ಉಲ್ಲೇಖ ಮಾಡಿ ಅಕ್ರಮ ಎಸಗಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಆಹಾರ ಪೂರೈಕೆ ವ್ಯವಸ್ಥೆ ನೋಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಮಿತಿ ಇರುತ್ತದೆ. ಅದರ ಅಡಿಯಲ್ಲಿ ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಒ ಸೇರಿದಂತೆ ಹಲವು ಅಧಿಕಾರಿಗಳು ಇರುತ್ತಾರೆ. ಇವರೆಲ್ಲಾ ಇದ್ದಾಗಲೂ ಏಕೆ ಅಕ್ರಮ ಆಗುತ್ತಿದೆ? ವರ್ಷಗಳಿಂದ ಇದೇ ದಂಧೆ ನಡೆಯುತ್ತಿದೆ ಎಂದು ಸುರೇಶ್ಗೌಡರು ಆಪಾದಿಸಿದರು.
ತಾವು ಸಚಿವರ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ, ಆದರೆ ಅಕ್ಷರ ದಾಸೋಹ ಸಮಿತಿ ಏನು ಮಾಡುತ್ತಿದೆ? ಇಲಾಖೆ ಆಯುಕ್ತರೇ ಟೆಂಡರ್ ಅನ್ನು ಅಂತಿಮಗೊಳಿಸುತ್ತಾರೆ. ಪಿಎಂ ಪೋಷಣ್ ಎಂಬ ಪ್ರಧಾನಿಗಳ ಹೆಸರಿನಲ್ಲಿರುವ ಈ ಯೋಜನೆಗೆ ಒಬ್ಬ ನಿರ್ದೇಶಕರೂ ಇರುತ್ತಾರೆ. ಇದು ಈ ಇಬ್ಬರು ಅಧಿಕಾರಿಗಳ ಪ್ರಧಾನ ಹೊಣೆಗಾರಿಕೆ. ಇವರು 63 ರೂಪಾಯಿಗೆ ಒಂದು ಕಿಲೋ ತೊಗರಿ ಬೇಳೆ ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಕಿಲೋ ತೊಗರಿಬೇಳೆಗೆ 93 ರೂ. ಇದೆ. ಹೀಗಿರುವಾಗ 63 ರೂಪಾಯಿಗೆ ಬೇಳೆ ಹೇಗೆ ಪೂರೈಸಲು ಸಾಧ್ಯ? ಇಂಥಾ ತೊಗರಿಬೇಳೆಯನ್ನು ಹಸು ಅಲ್ಲ, ಹಂದಿಯೂ ತಿನ್ನುವುದಿಲ್ಲ. ಅಂತಹ ತೊಗರಿ ಬೇಳೆಯನ್ನು ಶಾಲಾ ಮಕ್ಕಳ ಊಟ ತಯಾರಿಸಲು ಬಳಸಲಾಗುತ್ತದೆ ಎಂದು ಟೀಕಿಸಿದರು.
ಬಡವರ ಮಕ್ಕಳ ಊಟ: ಅಧಿಕಾರಿಗಳ ಚೆಲ್ಲಾಟ
ಬಡವರ ಮಕ್ಕಳ ಊಟದ ವಿಚಾರದಲ್ಲಿ ಅಧಿಕಾರಿಗಳು ಚೆಲ್ಲಾಟ ಆಡಬಾರದು. ಅಧಿಕಾರಿಗಳು ಶಾಲೆಗೆ ಹೋಗಿ ಏಕೆ ನೋಡುವುದಿಲ್ಲ? ಅವರೇನು ಕತ್ತೆ ಕಾಯುತ್ತಾರೆಯೆ? ನಾನು ಕನಿಷ್ಠ 50 ಶಾಲೆಗಳಿಗೆ ಹೋಗಿ ಪರೀಕ್ಷೆ ಮಾಡಿರುವೆ. ಎಲ್ಲಾ ಶಾಲೆಗಳಿಗೂ ಹುಳು ಬಿದ್ದ ಬೇಳೆಯನ್ನೇ ಪೂರೈಕೆ ಮಾಡುತ್ತಿದ್ದಾರೆ. ಸ್ಯಾಂಪಲ್ಗೆ ಕೊಡುವ ಬೇಳೆಯೇ ಬೇರೆ ಶಾಲೆಗಳಿಗೆ ಸರಬರಾಜು ಮಾಡುವ ಮೂಟೆಯೇ ಬೇರೆ. ಇಡೀ ರಾಜ್ಯದಲ್ಲಿ ನಡೆದಿರುವ ಈ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರುಗಿಸಲು ತನಿಖೆಗೆ ಆದೇಶ ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಆಗದಂತೆ ತಡೆಯಬೇಕು ಎಂದು ಸುರೇಶ್ಗೌಡರು ಒತ್ತಾಯಿಸಿದರು.
ಸುರೇಶ್ಗೌಡರ ಮಾತಿಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರೂ ಧ್ವನಿಗೂಡಿಸಿ ಅತ್ಯಂತ ಕಳಪೆ ಧಾನ್ಯ ಪೂರೈಕೆಯಾಗುತ್ತಿದೆ ಎಂದು ದೂರಿದರು. ಕಡಿಮೆ ದರದಲ್ಲಿ ಧಾನ್ಯ ಹೇಗೆ ಪೂರೈಸಲು ಸಾಧ್ಯ? ಗುಣಮಟ್ಟದ ನಿಯಂತ್ರಣ ಹೇಗೆ ಮಾಡುತ್ತೀರಿ ಎಂದು ಕೇಳಿದರು.