ತುಮಕೂರು : ಕಾಂಗ್ರೆಸ್‍ನವರು ಒಂದು ಸುಳ್ಳನ್ನೇ ನೂರು ಸಲ ಹೇಳಿ ಸತ್ಯ ಅಂತ ರೂಪಿಸಲು ಹೊರಟಿದ್ದಾರೆ, 40% ಲಂಚವನ್ನು ಯಾರು ಕೊಟ್ಟರು-ಯಾರು ತೆಗೆದುಕೊಂಡರು ಎಂಬುದನ್ನು ಸಾಭೀತು ಪಡಿಸಲಿ ಎಂದು ಕಾನೂನು-ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಕಿದರು.
ಅವರಿಂದು ಕುಣಿಗಲ್‍ನಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು, ಸಂಕಲ್ಪ ಯಾತ್ರೆ ಏನೆಂದರೆ ನಾವು ಏನು ಮಾಡಿದ್ದೇವೆ ಎಂಬುದನ್ನು ಜನರಿಗೆ ತಿಳಿಸುವುದು, ಜನರು ಮತ್ತು ಕಾರ್ಯಕರ್ತರು ಸರ್ಕಾರ ಮಾಡಿರುವ ಕೆಲಸಗಳನ್ನು ಹೇಳುವ ಸಂಕಲ್ಪ ಮಾಡಬೇಕೆಂದು ಹೇಳಿದರು.
ನೆರೆ ಮತ್ತು ಕೋವಿಡ್‍ಗಳನ್ನು ನಮ್ಮ ಸರ್ಕಾರ ಅಚ್ಚುಕಟ್ಟಾಗಿ ನಿಭಾಯಿಸಿದೆ, ಕಾರ್ಯಕರ್ತರು ಈ ಸಾಧನೆಗಳನ್ನು ಮಾತನಾಡಬೇಕು, ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಇದನ್ನು ಜನರಿಗೆ ತಿಳಿಸುವುದೇ ನಮ್ಮ ಸಂಕಲ್ಪ ಎಂದರು.
ಜಲಜೀವನ್ ಯೋಜನೆಯಡಿ ಮನೆ-ಮನೆಗೆ ನೀರು, ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನೀರನ್ನು ಕಟ್ಟಕಡೆಯ ಭಾಗಕ್ಕೂ ತಲುಪಿಸಿದ್ದೇವೆ, ಪ್ರತಿ ಕ್ಷೇತ್ರಕ್ಕೆ 50 ಕೋಟಿ ಅನುದಾನ ನೀಡಿದ್ದೇವೆ, ಜಿಲ್ಲೆಯಲ್ಲಿ ಭಾರತಜೋಡೋ ಯಾತ್ರೆ ಬಂದಿತು ಅದು ಭಾರತ ತೋಡೋ ಯಾತ್ರೆ ಎಂದು ಜರಿದ ಮಾಧುಸ್ವಾಮಿಯವರು, ಜೋಡೋ ಯಾತ್ರೆಯಲ್ಲಿ ಸ್ಥಳೀಯರೆ ಇರಲಿಲ್ಲ ಎಂದರು.
ಕೃಷ್ಣಕುಮಾರ್ ಗೆಲ್ಲಿಸಿ :ಕೃಷ್ಣಕುಮಾರ್ ಅವರಿಗೆ ಟಿಕೆಟ್ ಕೊಡೊಲ್ಲ ಎಂದು ಯಾರೂ ಹೇಳಿಲ್ಲ, 3 ಸಲ ಅವರನ್ನು ಸೋಲಿಸಿದ್ದೀರಿ, ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ, ಬಿಜೆಪಿಗೆ ಮತ ನೀಡಬೇಕೆಂದು ಸಂಕಲ್ಪ ಮಾಡಿ ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.
ಗದ್ಗದಿತರಾದ ಕೃಷ್ಣಕುಮಾರ್ : ಜನಸಂಕಲ್ಪ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿದ ಕೃಷ್ಣಕುಮಾರ್ ಅವರು, ತುಂಬಿದ್ದ ಜನಸ್ತೋಮವನ್ನು ಕಂಡು ಮಾತನಾಡುತ್ತಿರುವಾಗಲೇ ನನಗೆ 3 ಬಾರಿ ಶಿಕ್ಷೆ ಯಾಕೆ ಕೊಟ್ರಿ, ಬೆಳಿಗ್ಗೆಯಿಂದ ರಾತ್ರಿಯವರೆವಿಗೂ ನಿಮ್ಮ ಕೆಲಸ ಮಾಡುತ್ತೇನೆ ಎಂದು ಗದ್ಗದಿತರಾದರು.
ಕುಕ್ಕರ್, ಸೀರೆ ಹಂಚುವವರನ್ನು ಗೆಲ್ಲಿಸುತ್ತೀರ, ನಿಮ್ಮ ಮನೆ ಸೇವಕಾನಾಗಿ ಕೆಲಸ ಮಾಡುವ ನನ್ನನ್ನು ಏಕೆ ಗೆಲ್ಲಿಸುವುದಿಲ್ಲ ಎಂದು ವಿನಮ್ರವಾಗಿ ಸೇರಿದ್ದ ಜನರನ್ನು ಕೇಳಿದರು.