ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು ಸರ್ಕಾರದ ಮಾರ್ಗಸೂಚಿ ಅನುಸಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಕ್ಯೆಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಇಂದು ನಡೆದ ಕೋವಿಡ್ ಮಾರ್ಗಸೂಚಿ ಅನುಷ್ಠಾನ ಕುರಿತ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೋವಿಡ್ ವೈರಾಣು ಹಲವು ದೇಶಗಳಲ್ಲಿ ತೀವ್ರವಾಗಿ ಹಬ್ಬುತ್ತಿದ್ದು, ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಇಂದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದೆ.

ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದು, ಎಲ್ಲಾ ತೀವ್ರ ನೆಗಡಿ, ಕೆಮ್ಮು, ಜ್ವರ ಪ್ರಕರಣಗಳನ್ನು ಪರೀಕ್ಷೆ ಮಾಡುವುದು, ವಿಶೇಷವಾಗಿ ತೀವ್ರವಾದ ಉಸಿರಾಟದ ಸೋಂಕಿನಿಂದ ಬಳಲುತ್ತಿರುವವರಿಗೆ ಮುನ್ನೆಚ್ಚರಿಕೆ ಕ್ರಮಗಳು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿಡುವುದು, ಬೂಸ್ಟರ್ ಡೋಸ್ ಲಸಿಕಾಕರಣ ಹೆಚ್ಚಿಸುವುದು, ಈ ವಿಷಯಗಳನ್ನು ಅನುಸರಿಸುವ ಮೂಲಕ ಸಾಮಾನ್ಯ ಜನಜೀವನಕ್ಕೆ ಯಾವುದೇ ಧಕ್ಕೆಯುಂಟಾಗದಂತೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ, ಕೋವಿಡ್-19 ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟಲು ಸಮರ್ಥ ನಿರ್ವಹಣೆಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್ ತಡೆಗಟ್ಟುವಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.


ಎಲ್ಲಾ ಅಸ್ಪತ್ರೆಗಳಲ್ಲಿ, ರೆಮ್ಡೆಸಿವರ್ ಸೇರಿದಂತೆ ಅವಶ್ಯಕತೆ ಇರುವ ಔಷಧಿಗಳು, ಬೆಡ್, ವೆಂಟಿಲೆಟರ್ ವ್ಯವಸ್ಥೆ, ಅಕ್ಷಿಜನ್ ಲಭ್ಯತೆ ವ್ಯವಸ್ಥಿತವಾಗಿ ಇರಬೇಕು, ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚು ಮಾಡಲು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಒಟ್ಟು 100 ಬೆಡ್, ತಾಲೂಕು ಆಸ್ಪತ್ರೆಯಲ್ಲಿ 25 ಬೆಡ್ ಕಾಯ್ದಿರಿಸಬೇಕು, ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಆದಾಗ್ಯೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ: ಜಿಲ್ಲೆಯಲ್ಲಿಯೂ ಕೋವಿಡ್-19 ರೂಪಾಂತರಗೊಂಡಿರುವ ವೈರಸ್‍ನ ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರು ಇನ್ನೂ ಹೆಚ್ಚಿನ ಮುಂಜಾಗ್ರತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ, ಎಲ್ಲರೂ ಉತ್ತಮ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೂಸ್ಟರ್ ಡೋಸ್ ಲಸಿಕೆ ಪಡೆಯುವುದು ಒಳ್ಳೆಯದು, ಉಸಿರಾಟದ ಸಮಸ್ಯೆ ಹಾಗೂ ಕೋವಿಡ್-19 ಸೋಂಕಿನ ಲಕ್ಷಣ ಹೊಂದಿರುವವರು ಕಡ್ಡಾಯ ಪರೀಕ್ಷೆ ಮಾಡಿಸಿಕೊಳ್ಳಬೇಕು, 60 ವರ್ಷ ಮೇಲ್ಪಟ್ಟವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು (ಅಧಿಕ ರಕ್ತದ ಒತ್ತಡ, ಹೃದಯದ ಕಾಯಿಲೆ, ಮೂತ್ರಪಿಂಡ ಖಾಯಿಲೆ, ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್ ಅಥವಾ ಮಧುಮೇಹದಂತಹ) ಹಾಗೂ ಗರ್ಭಿಣಿಯರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಸಾರ್ವಜನಿಕವಾಗಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಈ ಬಗ್ಗೆ ಮತ್ತು ಕೋವಿಡ್ ಮಾರ್ಗಸೂಚಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದ್ದು, ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು, ಪಬ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಬಾರ್‍ಗಳಲ್ಲಿ ಹೊಸ ವರ್ಷಾಚರಣೆಗೆ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಹೊಸ ವರ್ಷದ ಆಚರಣೆಗಳು ರಾತ್ರಿ 1ರ ಒಳಗೇ ಅಂತ್ಯವಾಗಬೇಕು, ಜನ ಸೇರುವಂತಹ ಯಾವುದೇ ಆಚರಣೆಗಳು ನಡೆಯುವ ಸ್ಥಳಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರು ಇರಬಾರದು, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಪಾಲಿಸುವುದು ಅಗತ್ಯವಾಗಿದೆ, ಆಚರಣೆ ಸಂದರ್ಭದಲ್ಲಿ ‘NO MASK NO ENTRY’ ಎಂಬ ಸೂಚನಾ ಫಲಕವನ್ನು ಆಯೋಜಕರು ಪ್ರದರ್ಶಿಸುದರ ಮೂಲಕ ಜಾಗೃತಿ ಮೂಡಿಸಬೇಕು, ವಿವಿಧ ವರ್ಗದ ಸಿಬ್ಬಂದಿಗಳು ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು, ಯಾರೂ ಭಯಪಡದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ .ಎಸ್. ಪಾಟೀಲ್ ಅವರು ತಿಳಿಸಿದರು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್. ಮಾತನಾಡಿ ಕೋವಿಡ್-19 ರೋಗಲಕ್ಷಣಗಳಾದ ಜ್ವರ, ಕೆಮ್ಮು, ದಣಿವು, ರುಚಿ ಅಥವಾ ವಾಸನೆ ಇಲ್ಲದಿರುವುದು, ತಲೆನೋವು, ಗಂಟಲು ನೋವಿನಂತಹ ಲಕ್ಷಣಗಳಿದ್ದರೆ ಸಾರ್ವಜನಿಕರು ಮನೆಯ ಇತರ ಸದಸ್ಯರ ಸಂಪರ್ಕಕ್ಕೆ ಬಾರದೇ ಸ್ವಯಂ, ಪ್ರತ್ಯೇಕವಾಗಿರಿ, ಹಾಗೂ ಸಂಬಂಧಪಟ್ಟ ವೈದ್ಯರಿಗೆ ತೋರಿಸಿ ಪರೀಕ್ಷೆ ಮಾಡಿಸಬೇಕು, ಕಾಯಿಲೆ ಹರಡದಂತೆ ತಡೆಗಟ್ಟಲು ಆರೋಗ್ಯ ಸುರಕ್ಷಾ ನಿಯಮಗಳನ್ನು ಪಾಲಿಸುವುದು ಅವಶ್ಯವಾಗಿದೆ, ನಿಯಮಿತವಾಗಿ ಮತ್ತು ಸಂಪೂರ್ಣವಾಗಿ ನಿಮ್ಮ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪ್ ಮತ್ತು ನೀರಿನಿಂದ ತೊಳೆಯುವದರಿಂದ ನಿಮ್ಮ ಕೈಯಲ್ಲಿರಬಹುದಾದ ವೈರಸ್‍ಗಳು ಸೇರಿದಂತೆ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ, ಕೆಮ್ಮು ಅಥವಾ ಸೀನುವ ವೇಳೆ, ಮುಖ/ಮೂಗನ್ನು ಟಿಶ್ಯು ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳುವ ಅಭ್ಯಾಸ ಮಾಡಬೇಕು, ಅಲ್ಲದೆ ಬಳಸಿದ ಟಿಶ್ಯುವನ್ನು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಏಕೆಂದರೆ ಸೀನುವ ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಹೋಗುತ್ತವೆ. ಇವುಗಳಲ್ಲಿ ಸೋಂಕು ಹರಡುವ ವೈರಾಣುಗಳಿರುವ ಸಾಧ್ಯತೆಗಳಿರುತ್ತದೆ, ಅನವಶ್ಯಕವಾಗಿ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ಅನೇಕ ವಸ್ತುಗಳ ಮೇಲ್ಮೆಗಳು ವೈರಸ್‍ಗಳನ್ನು ಹೊಂದಿರಬಹುದು ಇದರಿಂದ ಕಲುಷಿತಗೊಂಡ ಕೈಗಳು ನಿಮ್ಮ ಕಣ್ಣು, ಮೂಗು ಅಥವಾ ಬಾಯಿಗೆ ವೈರಸ್ ಅನ್ನು ವರ್ಗಾಯಿಸಬಹುದು ಮತ್ತು ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು ಅದ್ದರಿಂದ ಕೋವಿಡ್-19 ತಡೆಗಟ್ಟುವಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿ, ವಿಶೇಷ ಜಾಗೃತಿ ವಹಿಸಬೇಕು ಎಂದರು.

ಜಿಲ್ಲಾ ಸರ್ಜನ್ ಡಾ.ವೀಣಾ, ಡಿ.ಡಿಎಲ್.ಆರ್ ಸುಜಯ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನದಾಸ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯತ್ರಂಣಾಧಿಕಾರಿ ಡಾ.ಪುರೋಷತ್ತಮ, ಉಪವಿಭಾಗಾಧಿಕಾರಿ ಕಲ್ಪಶ್ರೀ,  ತಹಸೀಲ್ದಾರ್ ಸಿದ್ದೇಶ್ ಸೇರಿದಂತೆ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸಿಲ್ದಾರ್‍ಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಂಬಂಧಿಸಿದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *