ತುಮಕೂರು: ಅಟ್ಟಿಕಾ ಬಾಬು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಚಾರವನ್ನು ಕಳೆದೆರೆಡು ದಿನಗಳಿಂದ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಚಾರ ಕೇವಲ ಊಹಾಪೋಹವಷ್ಟೆ. ಎಂದು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.
ಕಳೆದ ವರ್ಷಗಳಲ್ಲಿ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ನಾನು ಅತ್ಯಂತ ಸಕ್ರಿಯನಾಗಿ ಸಮಾಜಸೇವೆ ಸಲ್ಲಿಸಿದ್ದೇನೆ. ಬೇರೆ ಪಕ್ಷದ ಅಭ್ಯರ್ಥಿಗಳಿಗಿಂತ ಹೆಚ್ಚು ಸಕ್ರಿಯನಾಗಿ ಕೆಲಸ ಮಾಡಿದ್ದೇನೆ. ಲಾಕ್‍ಡೌನ್ ಸಮಯದಲ್ಲಿ ಅವಶ್ಯವಿರುವ ಕಡೆಗಳಲ್ಲಿ ಪ್ರತಿದಿನವೂ ಸಹ ಆಹಾರ ಧಾನ್ಯಗಳ ಕಿಟ್, ತರಕಾರಿ, ಊಟದ ವ್ಯವಸ್ಥೆ ಯನ್ನು ಮಾಡಿ ನಿಸ್ವಾರ್ಥ ಸೇವೆ ಸಲ್ಲಿಸಿರುವುದು ನಗರದ ಜನತೆ ಮರೆತಿಲ್ಲ. ಲಾಕ್‍ಡೌನ್ ಸಮಯದಲ್ಲಿ ನಗರದತ್ತ ಸುಳಿಯದೆ ಬೆಂಗಳೂರಿನಲ್ಲಿದ್ದ ವ್ಯಕ್ತಿಗಳು ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಣದ ಆಮಿಷವೊಡ್ಡಿ ಮತದಾರರ ದಾರಿ ತಪ್ಪಿಸುತ್ತಿದ್ದಾರೆ.
ಆದರೆ ನಾನು ಕಳೆದ ಚುನಾವಣೆಯಲ್ಲಿ ಪರಾಭವಗೊಂಡರೂ ಸಹ ನಗರದಲ್ಲೇ ವಾಸ್ಥವ್ಯವಿದ್ದೇನೆ. ನಿರಂತರ ಜನರ ಸಂಪರ್ಕದಲ್ಲಿರುವ ನನ್ನನ್ನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಬಿಂಬಿಸಿ, ಚುನಾವಣೆ ಹೊಸ್ತಿಲಲ್ಲಿ ಮಾತ್ರ ಹಣದ ಆಮಿಷವೊಡ್ಡುವವರನ್ನು ಸಕ್ರಿಯರಾಗಿದ್ದಾರೆ ಎಂದು ಬಿಂಬಿಸುವುದು ಎಷ್ಟು ಸರಿ ಎಂದು ಡಾ.ರಫೀಕ್ ಅಹ್ಮದ್ ಬೇಸರ ವ್ಯಕ್ತ ಪಡಿಸಿದ್ದಾರೆ. ನಗರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿ, ತುಮಕೂರು ನಗರವನ್ನು ಬೆಂಗಳೂರಿಗೆ ಪರ್ಯಾಯ ನಗರವನ್ನಾಗಿ ಮಾಡುವುದೇ ನನ್ನ ಧ್ಯೇಯವಾಗಿದೆ ಎಂದು ಡಾ.ರಫೀಕ್ ಅಹ್ಮದ್ ನುಡಿದು, ಹಣದ ಆಮಿಷವೊಡ್ಡುವ ವ್ಯಕ್ತಿಗಳಿಗೆ ಬೆಂಬಲ ನೀಡಬಾರದು ಎಂದು ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ನಂತರ ಮಾಜಿ ಶಾಸಕ ಷಫಿ ಅಹ್ಮದ್ ಮಾತನಾಡಿ, ಅಟ್ಟಿಕಾ ಬಾಬು ರವರು ಮಾಜಿ ಶಾಸಕರಾದ ಷಫಿ ಅಹ್ಮದ್ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ ಎಂದು ನೀಡಿರುವ ಹೇಳಿಕೆಯೂ ಸಹ ಶುದ್ದ ಸುಳ್ಳು, ನಾನು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಬಗ್ಗೆ ಅಟ್ಟಿಕಾ ಬಾಬು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ. ತುಮಕೂರು ನಗರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಳ್ಳಷ್ಟೂ ಕೊಡುಗೆ ನೀಡದ ವ್ಯಕ್ತಿಗೆ ನಾನು ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಕೂಡಲೇ ಈ ಹೇಳಿಕೆ ಹಿಂಪಡೆಯಬೇಕು ಎಂದು ಮಾಜಿ ಶಾಸಕ ಷಫಿ ಅಹ್ಮದ್ ಆಗ್ರಹಿಸಿದ್ದಾರೆ.
ನಗರದ ಜನತೆ ಪ್ರಜ್ಞಾವಂತ ಮತದಾರರು, ಕೇವಲ ಚುನಾವಣೆ ಹೊಸ್ತಿಲಲ್ಲಿ ನಗರಕ್ಕೆ ಬಂದು ಹಣ ಹಾಗೂ ಮತ್ತಿತರ ಆಮಿಷವೊಡ್ಡಿ ನಗರದ ಜನತೆಯನ್ನು ದಾರಿ ತಪ್ಪಿಸಿ ಚುನಾವಣೆಯ ದಿಕ್ಕನ್ನೇ ಬದಲಿಸಿ ನಗರದಲ್ಲಿ ಅನೈತಿಕ ರಾಜಕಾರಣ ಸೃಷ್ಟಿ ಮಾಡುವ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ಇಂತಹವರ ಹೇಳಿಕೆಗೆ ಯಾರೂ ಕಿವಿಗೊಡದೆ ಗೊಂದಲಕ್ಕೀಡಾಗಬಾರದು ಎಂದು ಮಾಜಿ ಶಾಸಕರಾದ ಷಫಿ ಅಹ್ಮದ್ ಮತ್ತು ಡಾ.ರಫೀಕ್ ಅಹ್ಮದ್ ಇಬ್ಬರೂ ಕೂಡ ನಗರದ ಮತದಾರರಿಗೆ ಮನವಿ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.