ತಿಪಟೂರು : ಮಹಿಳೆಯರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ತಿಪಟೂರಿನ ಕಾಂಗ್ರೆಸ್ ಮುಖಂಡ ಟೂಡಾ ಶಶಿಧರ ಆರಂಭಿಸಿರುವ ನಮ್ಮ ಆರೋಗ್ಯ ಕೇಂದ್ರ ಯೋಜನೆಯ 2ನೇ ಕೇಂದ್ರ ಇದೀಗ ಕೆ.ಬಿ.ಕ್ರಾಸ್ ನಲ್ಲಿ ಜನವರಿ 29ರಂದು ಆರಂಭವಾಗಲಿದೆ.
ಖ್ಯಾತ ಪ್ರಸೂತಿ ತಜ್ಞರಾದ ಡಾ.ಹೇಮಾ ದಿವಾಕರ್ ಅವರ ನೇತೃತ್ವದಲ್ಲಿ ಆರ್ಟಿಸ್ಟ್ ಫಾರ್ ಹರ್ ಹಾಗೂ ಜನ ಸ್ಪಂದನ ಟ್ರಸ್ಟ್ ಸಹಕಾರದೊಂದಿಗೆ ಈ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸುಸ್ಥಿರ ಬದುಕು ನಡೆಸಲು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ನಿಟ್ಟಿನಲ್ಲಿ ಮಹಿಳಾ ಆರೋಗ್ಯ ಅತಿ ಮುಖ್ಯ. ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಕುಟುಂಬ ಸದೃಢವಾಗಿರುತ್ತದೆ, ಅದೇ ರೀತಿ ಮಹಿಳೆಯರೆಲ್ಲರೂ ಆರೋಗ್ಯವಾಗಿದ್ದರೆ ಇಡೀ ಸಮಾಜವೇ ಸದೃಢವಾಗಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಮಹಿಳೆಯರಿಗಾಗಿಯೇ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ತಿಪಟೂರು ತಾಲೂಕಿನಲ್ಲಿ ಡಿಸೆಂಬರ್ 6ರಂದು ನಮ್ಮ ಆರೋಗ್ಯ ಕೇಂದ್ರ ಲೋಕಾರ್ಪಣೆಯಾಯಿತು. ಅದೇ ರೀತಿ ಇದೀಗ ಜನವರಿ 29ರಂದು ಕೆ. ಬಿ. ಕ್ರಾಸ್ ಹಳ್ಳಿಯಲ್ಲಿ ನಮ್ಮ ಆರೋಗ್ಯ ಕೇಂದ್ರವು ಮಹಿಳೆಯರ ಆರೋಗ್ಯ ಸೇವೆಗೆ ಸಿದ್ದವಾಗುತ್ತಿದೆ.
ಚಿಕ್ಕ ಹೆಣ್ಣು ಮಕ್ಕಳಿಂದ ವಯೋವೃದ್ಧ ಮಹಿಳೆಯರೆಲ್ಲರೂ ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಈ ಆರೋಗ್ಯ ಕೇಂದ್ರದಲ್ಲಿ ಸಲಹೆ, ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ.
ಹಾಲ್ಕುರಿಕೆ ಗ್ರಾಮದ ನಮ್ಮ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಆರೋಗ್ಯ ತರಬೇತಿ ಪಡೆದ ಸಖಿಯರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದ ಮಹಿಳೆಯರೆಲ್ಲರೂ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಖಿಯರು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೌಕರ್ಯಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು ಎಂಬುದನ್ನು ತಿಳಿಸುತ್ತಾರೆ.
ಯೋಜನೆಯ ತಿರುಳೇನು?
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನವಿರುವುದು ವಿದಿತ. ಈ ಸಂಸ್ಕೃತಿ ಜಗತ್ತಿಗೇ ಮಾದರಿಯೂ ಹೌದು. ಕುಟುಂಬವೊಂದರ ಯಶಸ್ಸು, ಶ್ರೇಯಸ್ಸು ಎಲ್ಲದರ ಹಿಂದೆ ಮಹಿಳೆಯ ತ್ಯಾಗ, ಶಕ್ತಿ ಇದ್ದೇ ಇದೆ ಎಂಬುದು ಸತ್ಯ. ಆದಾಗ್ಯೂ ಕಾಲಮಾನದ ಬೆಳವಣಿಗೆಗಳು, ವಿಚಾರಗಳ ಪಲ್ಲಟಗಳ ಪರಿಣಾಮ ಮಹಿಳೆ ನಿರ್ಲಕ್ಷ್ಯಕ್ಕೆ ಒಳಗಾಗಿರಬಹುದು. ಆದರೆ ಕಾಲೋಚಿತ ಪ್ರಜ್ಞೆಗಳು ಅದರಿಂದ ಹೊರಬಂದು ಮಹಿಳೆಯ ಸ್ಥಾನಮಾನ ಕಾಪಾಡುವ ನಿಟ್ಟಿನಲ್ಲಿ ನೆರವಾಗಿವೆ. ಅದರ ಫಲವೇ ಇತ್ತೀಚಿನ ಮಹಿಳಾ ಸಬಲೀಕರಣದ ಯತ್ನಗಳು ಎನ್ನಬಹುದು.
ಡಿಸೆಂಬರ್ 6ರಂದು ನಮ್ಮ ಆರೋಗ್ಯ ಕೇಂದ್ರದ ಉದ್ಘಾಟನೆಯಲ್ಲಿ ಟೂಡಾ ಶಶಿಧರ್ ಅವರು ಭರವಸೆ ನೀಡಿದಂತೆ, ಇದೀಗ ಮತ್ತೊಂದು ಆರೋಗ್ಯ ಕೇಂದ್ರವನ್ನು ಕೆ.ಬಿ. ಕ್ರಾಸ್ ನಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕಿಬ್ಬನಹಳ್ಳಿ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಹಾಗೂ ಮಹಿಳೆಯರು ಈ ಆರೋಗ್ಯ ಕೇಂದ್ರದ ಸೌಲಭ್ಯವನ್ನು ಪಡೆಯಬಹುದಾಗಿದೆ.
ಏನೆಲ್ಲ ಸೇವೆಗಳು?
‘ನಮ್ಮ ಆರೋಗ್ಯ ಕೇಂದ್ರ’ ಮಹಿಳೆಯರ ಆರೋಗ್ಯದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಸಂಜೀವಿನಿಯಾಗಲಿದೆ. ಯುವತಿಯರಿಗೂ ಮತ್ತು ಮಹಿಳೆಯರಿಗೂ ಅವರ ಜೀವನದಲ್ಲಿ ಪ್ರತಿ ಹಂತದಲ್ಲಿ ಬರುವ ಆರೋಗ್ಯ ಸಮಸ್ಯೆಗಳಿಗೆ ಸಲಹೆ, ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ವಿಡಿಯೋ ಕನ್ಸಲ್ಟೇಷನ್ ಮೂಲಕ ಇಲ್ಲಿ ದೊರೆಯಲಿದೆ. ಕಾಲಕ್ರಮೇಣ ಮಹಿಳೆಯರ ಸ್ಪಂದನೆಯನ್ನಾಧರಿಸಿ ಸೇವೆಗಳ ವ್ಯಾಪ್ತಿ ಹೆಚ್ಚಿಸಲಾಗುವುದು.