ತುಮಕೂರು : ಪ್ರಧಾನಿ ನರೇಂದ್ರಮೋದಿರವರು ಗುಬ್ಬಿಯ ಬಿದರೆಹಳ್ಳಿ ಕಾವಲ್‍ನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಲಘು ಹೆಲಿಕ್ಯಾಪ್ಟರ್ ಕಾರ್ಖಾನೆ ಉದ್ಘಾಟನೆಯನ್ನು ಫೆಬ್ರವರಿ 6ರ ಸೋಮವಾರ ಮಧ್ಯಾಹ್ನ 3.30ಕ್ಕೆ ಮಾಡಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2016ರಲ್ಲಿ ಪ್ರಧಾನಿ ನರೇಂದ್ರಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ ಹೆಚ್‍ಎಎಲ್‍ನ್ನು ಇದೀಗ ಅವರೇ ಉದ್ಘಾಟಿಸುತ್ತಿದ್ದಾರೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯ ಕೇಂದ್ರ ಮಂತ್ರಿಗಳಾದ ರಾಜನಾಥ್‍ಸಿಂಗ್ ಹಾಗೂ ರಾಜ್ಯ ಸಚಿವ ಅಜಯ್‍ಭಟ್, ರಕ್ಷಣಾ ಇಲಾಖೆ ಹಾಗೂ ಹೆಚ್‍ಎಎಲ್ ಪ್ರಮುಖ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಕುಣಿಗಲ್, ತಿಪಟೂರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಕ್ಷದ ಹಿತೈಷಿಗಳು ತಮ್ಮಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್ ರ್ಯಾಲಿಗಳ ಮೂಲಕ ಗುಬ್ಬಿಯ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಹೆಚ್.ಎಸ್.ರವಿಶಂಕರ್‍ಹೆಬ್ಬಾಕ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿಯೇ ಪ್ರಧಾನಿ ನರೇಂದ್ರಮೋದಿರವರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕುಗಳಿಗೆ ತಲಾ 900 ಕೋಟಿ ರೂ.ಗಳಲ್ಲಿ ಪ್ರತಿ ಗ್ರಾಮ ಮನೆ-ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಯ “ಜಲ್ ಜೀವನ್ ಮಿಷನ್” ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರೆವೇರಿಸಲಿದ್ದಾರೆ ಎಂದು ತಿಳಿಸಿದರು.