ತಿಪಟೂರು: ತಿಪಟೂರಿನ ಯುವಕರ ಅನುಕೂಲಕ್ಕಾಗಿ ಕೌಶಲ್ಯ ತರಬೇತಿ ಕೇಂದ್ರವನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ಇದು ತಿಪಟೂರಿನ ಯುವಕರಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಲಾಭದಾಯಕವಾಗಿ ಉದ್ಯೋಗ ಪಡೆಯುವಲ್ಲಿ ಒಂದು ಗೇಮ್ ಚೇಂಜರ್ ಆಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿ. ಬಿ. ಶಶಿಧರ್ (ಟೂಡಾ) ತಿಳಿಸಿದರು.
ತಿಪಟೂರು ನಗರದ ಬಯಲು ರಂಗ ಮಂದಿರದಲ್ಲಿ ನಡೆದ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ಆರಂಭದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಶೈಕ್ಷಣಿಕ ಶಿಕ್ಷಣದಿಂದ ಉದ್ಯೋಗ ಸಿಗುವುದಿಲ್ಲ. ಸ್ಪರ್ಧೆಯ ಈ ಯುಗದಲ್ಲಿ, ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಒಬ್ಬರು ಹೆಚ್ಚು ಕೌಶಲ್ಯವನ್ನು ಹೊಂದಿರಬೇಕು. ಇದಕ್ಕೆ ವಿವಿಧ ವಿಭಾಗಗಳಲ್ಲಿ ಪ್ರೇರಣೆ ಮತ್ತು ತರಬೇತಿಯ ಅಗತ್ಯವಿದೆ. ತಿಪಟೂರು ನುರಿತ ಯುವಕರ ಕೇಂದ್ರವಾಗಿ ಹೊರಹೊಮ್ಮಬೇಕು. ಇದು ತಿಪಟೂರಿನಿಂದ ಪ್ರಮುಖ ನಗರಗಳಿಗೆ ಯುವಕರ ವಲಸೆಯನ್ನು ತಡೆಯುತ್ತದೆ. ಈ ಮಹತ್ವಾಕಾಂಕ್ಷೆಯೊಂದಿಗೆ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಉತ್ಪನ್ನ ವ್ಯವಸ್ಥಾಪಕರು ಹಾಗೂ ಟೋಬಿ. ಸ್ಟಾರ್ಟ್ ಅಪ್ ಸಲಹೆಗಾರ ಮತ್ತು ಹೂಡಿಕೆದಾರರಾದ ಪ್ರವೀಣ್ ಮಾಯ್ಕರ್ ಅವರು ಮಾತನಾಡಿ, ಇಂದು ಪ್ರತಿಕ್ಷಣ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಸಹ ನಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನತೆ ಕೌಶಲ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ವೃತ್ತಿ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ನಿರುದ್ಯೋಗ ಸಮಸ್ಯೆಯಿಂದ ನರಳಾಡುತ್ತಿರುವ ಯುವ ಜನತೆಯ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವ ಸದುದ್ದೇಶದಿಂದ ಈ ಕೌಶಲ್ಯ ಕೇಂದ್ರವನ್ನು ಆರಂಭಿಸುತ್ತಿರುವ ಸಿ. ಬಿ. ಶಶಿಧರ್ ಅವರಂತಹ ನಾಯಕರು ನಮ್ಮ ಸಮಾಜಕ್ಕೆ ಬೇಕಿದೆ ಎಂದು ಪ್ರಶಂಸಿದರು.
ಕ್ವೆಸ್ ಕಾರ್ಪೋರೇಷನ್ ಲಿ. ಪ್ರಧಾನ ವ್ಯವಸ್ಥಾಪಕರಾದ ಮನೋಜ್ ಉಣ್ಣಿಕೃಷ್ಣನ್ ಅವರು ಮಾತನಾಡಿ, ಯುವಜನ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ಸ್ಥಳೀಯ ನಾಯಕರಾದ ಶ್ರೀ ಸಿ ಬಿ ಶಶಿಧರ್ ರವರ ಮುಂದಾಳತ್ವದಲ್ಲಿ ಪ್ರಾರಂಭವಾಗುತ್ತಿರುವ ಯುವಜನ ಸ್ಪಂದನ ತರಬೇತಿ ಕೇಂದ್ರದ ಸಹಭಾಗಿಗಳಾಗಿ ಭಾರತದ ಪ್ರಸಿದ್ಧ ಕ್ವೆಸ್ ಕಂಪನಿಯು ಆರೋಗ್ಯ ವಲಯ ಕೌಶಲ್ಯ ಪರಿಷತ್ತು ಜೊತೆಗೂಡಿ ಭಾಗಿಯಾಗುತ್ತಿರುವುದು ಸಂತೋಷಕರವಾದ ವಿಷಯ. ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ನೂರಕ್ಕೂ ಹೆಚ್ಚು ಕೌಶಲ್ಯ ತರಬೇತಿ ಕೇಂದ್ರಗಳನ್ನು ಹೊಂದಿ ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗಗಳನ್ನು ಒದಗಿಸುತ್ತಿದೆ ತಿಪಟೂರಿನಲ್ಲಿ ಪ್ರಾರಂಭವಾಗುತ್ತಿರುವ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ನೆರವಿನೊಂದಿಗೆ ಸ್ಥಳೀಯ ಯುವಜನ ಅಭಿರುಚಿ ಮತ್ತು ಪ್ರತಿಭೆಗೆ ತಕ್ಕಂತೆ ಸಮಾಲೋಚನೆ ನೀಡಿ ಅಗತ್ಯ ತರಬೇತಿಯೊಂದಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಹಾಗೂ ಮಾಹಿತಿ ನೀಡುವ ಕಾರ್ಯವನ್ನು ನಮ್ಮ ಸಂಸ್ಥೆ ನಿರ್ವಹಿಸಲಿದೆ ಸಾರ್ವಜನಿಕರು ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗವನ್ನು ಮಾಡಿಕೊಂಡು ಇತರರಿಗೆ ನೆರವಾಗಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕವಿತಾ ರೆಡ್ಡಿ ಅವರು ಮಾತನಾಡಿ, ಭಾರತವು ಗಂಭೀರ ಉದ್ಯೋಗ ಬಿಕ್ಕಟ್ಟು, ಉದ್ಯೋಗ ಸೃಷ್ಟಿಯ ಕೊರತೆ ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿದೆ.
ಬ್ರಿಟನ್ ನಲ್ಲಿ ಶೇ.68, ಜರ್ಮನಿಯಲ್ಲಿ ಶೇ.75, ಅಮೆರಿಕದಲ್ಲಿ ಶೇ.52, ಜಪಾನ್ನಲ್ಲಿ ಶೇ.80 ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ.96 ರಷ್ಟು ಉದ್ಯೋಗಿಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ.4 ಕ್ಕಿಂತ ಕಡಿಮೆ ಉದ್ಯೋಗಿಗಳು ಔಪಚಾರಿಕ ಕೌಶಲ್ಯ ತರಬೇತಿ ಪಡೆದಿದ್ದಾರೆ.
ತರಬೇತಿ ಸಾಮರ್ಥ್ಯದ ಕೊರತೆ, ಕೈಗಾರಿಕೆಗಳೊಂದಿಗಿನ ಸಂಪರ್ಕ ಕಡಿತ, ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಸಮರ್ಪಕತೆ, ಸರ್ಕಾರದ ಸಾಮೂಹಿಕ ತರಬೇತಿ ಕಾರ್ಯಕ್ರಮದ ವೈಫಲ್ಯ ಈ ದೇಶದ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ.
ವಿಕೇಂದ್ರೀಕೃತ ಮತ್ತು ಕೇಂದ್ರೀಕೃತ ಉದ್ಯೋಗ ಆಧಾರಿತ ತರಬೇತಿಯು ಸ್ಥಳೀಯ ಯುವಕರನ್ನು ಉದ್ಯೋಗ ಮಾರುಕಟ್ಟೆಗೆ ಸಂಪರ್ಕಿಸಲು ಏಕೈಕ ಮಾರ್ಗವಾಗಿದೆ.
ಶಶಿಧರ್ ಮತ್ತು ಅವರ ಜನಸ್ಪಂದನ ಸಂಸ್ಥೆಯು ಕೈಗೊಂಡ ಉದ್ಯೋಗ ಕೌಶಲ್ಯ ಕೇಂದ್ರದ ಆರಂಭವು ಸರಿಯಾದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು ಎಂದರು.
ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ. ವಿ. ದಿವಾಕರ್ ಅವರು ಮಾತನಾಡಿ, ಈ ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರದ ಮುಖಾಂತರ ತಿಪಟೂರಿನ ಯುವಕ ಯುವತಿಯರು ಹಲವಾರು ಕೌಶಲ್ಯಗಳನ್ನು ಪಡೆದು ತಮ್ಮದೇ ಆದ ಸಣ್ಣ ಅಥವಾ ದೊಡ್ಡ ಉದ್ಯಮವನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗುವ ಅವಕಾಶ ನಿಮ್ಮ ಮುಂದಿದೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಯುವ ಜನತೆಗೆ ಸಂದೇಶ ನೀಡಿದರು.
ಯುವಜನತೆ ಶಿಕ್ಷಣ ಮುಗಿದ ನಂತರ ಸರ್ಕಾರಿ ನೌಕರಿಗಾಗಿ ಕಾಯದೆ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಪ್ರಾವೀಣ್ಯತೆಯನ್ನು ಪಡೆದು ಜ್ಞಾನವಂತರಾಗಿ ಮತ್ತು ಸ್ವತಂತ್ರರಾಗಿ ಬದುಕಲು ನಮ್ಮ ಜನಸ್ಪಂದನ ಕೇಂದ್ರ ನೆರವಾಗಲಿದೆ ಎಂದರು
ಸ್ಟ್ರ್ಯಾಟಜಿಸ್ಟ್ ಎಂ. ಜೆ. ಶ್ರೀಕಾಂತ್ ಅವರು ಮಾತನಾಡಿ ನಮ್ಮ ಭಾರತ ದೇಶವು ಶೇ.60ಕ್ಕೂ ಹೆಚ್ಚು ಯುವಜನತೆಯನ್ನು ಹೊಂದಿದೆ. ಉದ್ಯೋಗದ ಕನಸನ್ನು ಹೊತ್ತಿರುವ ಈ ಯುವಕ ಯುವತಿಯರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಯುವ ಮನಸ್ಸಿನ ಮತ್ತು ಹೊಸ ವಿಚಾರದ ರಾಜಕೀಯ ನಾಯಕತ್ವದ ಅವಶ್ಯಕತೆ ಇದೆ. ಈ ವಿಷಯದಲ್ಲಿ ಸಿ.ಬಿ. ಶಶಿಧರ್ ಅವರು ಸೂಕ್ತವಾದ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು.
ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಭರತ್ ಹೆಚ್. ಪಿ ಮಾತನಾಡಿ, ಉದ್ಯೋಗ ನೀಡುವ ವಿಷಯದಲ್ಲಿ ಯುವಕರಿಂದ ಕೌಶಲ್ಯಗಳನ್ನು ನಿರೀಕ್ಷಿಸುವ ಉದ್ದಿಮೆಗಳ ದೃಷ್ಟಿಕೋನ ಏನೆಂಬುದನ್ನು ನಾವು ಮೊದಲಿಗೆ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಿಪಟೂರು ಯುವಜನತೆಯ ಕೌಶಲ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉನ್ನತಿ ಸಂಸ್ಥೆಯ ನಿರ್ದೇಶಕರಾದ ರಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.