ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣರವರಿಗೆ “ಗಣೆ ಗೌರವ”

ತುಮಕೂರು: ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಆಯೋಜಿಸುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದು, ಅದರಲ್ಲಿಯೂ ಎತ್ತಪ್ಪ ಮತ್ತು ಜುಂಜಪ್ಪನ ಕುರಿತು ಆಳವಾಗಿ ತಳಸ್ಪರ್ಶಿ ಅಧ್ಯಯನ ಮಾಡಿರುವುದೇ ‘ಗಣೆ ಗೌರವ’ ನೀಡಲು ಪ್ರಮುಖ ಕಾರಣವಾಗಿದೆ ಎಂದು ಶಿವೋತ್ಸವ ಸಮಿತಿಯ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ಒಂದು ನಾಡಿನ ಸಾಂಸ್ಕೃತಿಕ ಪರಂಪರೆಯ ಮುಖ್ಯಧಾರೆಯಿಂದಾಚೆಗೆ, ಅಂದರೆ ಪರಿಧಿಯಾಚೆಗೆ ತಳ್ಳಲ್ಪಟ್ಟ ಮೌಖಿಕ ರೂಪಗಳ ಬೆನ್ನು ಹತ್ತಿ ಅವುಗಳಿಗೆ ಸಾಂಸ್ಕೃತಿಕ ಅನನ್ಯತೆ ತಂದುಕೊಡುವುದು ಡಾ.ಶಿವಣ್ಣನವರ ಪ್ರಧಾನ ಆಸಕ್ತಿಯಾಗಿದೆ.

ಜಾನಪದವನ್ನು ಶುದ್ಧಾಂಗ ಪಠ್ಯವನ್ನಾಗಿ ಗ್ರಹಿಸದೆ,ಅದನ್ನು ನಾಗರಿಕತೆ ಇತಿಹಾಸ ಸಮಾಜ ಸಂಸ್ಕೃತಿ ಆರ್ಥಿಕ ಮತ್ತು ಅಧಿಕಾರ ಸಂಬಂಧಗಳ ಮೊತ್ತವಾಗಿ ಅಧ್ಯಯನ ಮಾಡುವವರ ಸಾಲಿನಲ್ಲಿ ಡಾ.ಶಿವಣ್ಣ ಮುಖ್ಯರಾಗಿದ್ದಾರೆ.

ಪ್ರಶಸ್ತಿಯನ್ನು ಶನಿವಾರ ಶಿವರಾತ್ರಿಯ ಆಹೋರಾತ್ರಿ ಕಾರ್ಯಕ್ರಮದಲ್ಲಿ ಪ್ರದಾನಮಾಡಲಾಗುವುದು ಎಂದು ಗೋಮಾರದನಹಳ್ಳಿ ಮಂಜುನಾಥ್ ಅವರು ತಿಳಿಸಿದ್ದಾರೆ.

ಈ ಗೌರವದ ಪ್ರಮುಖ ಅಕರ್ಷಣೆ ಗಣೆ. ಈ ವಾದ್ಯ ಮಾಡಿಕೊಡುವುದು ಕುಂಬಾರ ಹಳ್ಳಿ ಗೊಲ್ಲರಹಟ್ಟಿ ಕುಕ್ಕುಡದಮ್ಮನ ಪೂಜಾರಿ ಈರಣ್ಣ. ಬಿದಿರಮ್ಮತಾಯಿ ಕುಕ್ಕುಡದಮ್ಮನ ಮೂಲ ನೆಲೆ ಚನ್ನಗಿರಿ ತಾಲ್ಲೂಕಿನ ಅಮ್ಮನ ಗುಡ್ಡಕ್ಕೆ ಹೋಗಿ ಬಿದಿರು ತಂದು ಈ ಬಾರಿ ಗಣೆ ಮಾಡಿದ್ದೇನೆಂದು ಈರಣ್ಣ ತಿಳಿಸಿದ್ದಾರೆ.

ಏನಿದು ‘ಗಣೆ ಗೌರವ’?:
ಶಿವೋತ್ಸವದ ಆತ್ಮದ ಸಾಂಸ್ಕೃತಿಕ ಸದ್ದೇ ಗಣೆ ಗೌರವ. ನಾಡಿನಲ್ಲಿ ಎಲೆಮರೆಕಾಯಂತಿರುವ ಪ್ರಮುಖರೊಬ್ಬರಿಗೆ ಕಂಬಳಿ ಗದ್ದುಗೆ ಮೇಲೆ ಬುಡಕಟ್ಟು ಸಂಗೀತ ವಾದ್ಯ ಗಣೆ ನೀಡಿ ಗೌರವಿಸುವುದೇ ಗಣೆ ಗೌರವ ಎಂದು ಕಾರ್ಯಕ್ರಮ ಸಂಘಟಕ, ರಂಗ ಭೂಮಿ ಕಲಾವಿದ ಗೋಮಾರದನಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.

ಅಕ್ಷರಶಃ ಕಾಡಿನಲ್ಲಿ ಈ ಶಿವೋತ್ಸವ ನಡೆಯುತ್ತಿದ್ದು, ಅದರ ಹೆಸರೇ ಖಾನೆ ಅಡ್ಲು. ಖಾನೆ ಅಂದರೆ ಕಾಡು ಅಂತಾನೇ ಅರ್ಥ.ಇಲ್ಲಿ ಊರು ಕೇರಿ ಇಲ್ಲ. ಬಸ್ಸಿಲ್ಲ. ಬೈಕು ಕಾರಲ್ಲೇ ಬರಬೇಕು. ಶಿರಾ ತಾವರೇಕೆರೆ ಭೂತಪ್ಪನಗುಡಿ ಕೆ.ರಂಗನಹಳ್ಳಿ ಕಳುವರಹಳ್ಳಿ ಕೆರೆ ಏರಿ ಮೇಲೆ ಬರಬೇಕು. ಇಲ್ಲಿಗೆ ನೀವು ಬಂದರೆ ಇಲ್ಲೊ ಶಾಮಿಯಾನ ಚೇರು ಇರಲ್ಲ. ನೆಲ ಇಲ್ಲವೇ ಕಲ್ಲಟ್ನಿ ಮೇಲೆ ಕೂರಬೇಕು. ಕುಡಿಯಲು ನೀರು, ಹೊಟ್ಟೆ ತುಂಬಾ ಅನ್ನ ಸಾರು ಊಟ ಎಂದು ಮಂಜುನಾಥ್ ತಿಳಿಸಿದ್ದಾರೆ.

ಪ್ರಶಾಂತವಾದ ಶಿವರಾತ್ರಿಯಲ್ಲಿ ಗಣೆ ನಾದ ಕೇಳೋದೇ ವಿಶೇಷ ಸುಖ
ಹಳೆಯಟ್ಟಿ ಕರಿಯಣ್ಣ ಗಣೆ ಊದುತ್ತಾರೆ, ಕೇಳೋದೇ ಒಂದು ಆಹ್ಲಾದ. ಅಷ್ಟು ಚೆನ್ನಾಗಿ ಊದುತ್ತಾರೆ. ಅವರು ಕುರಿ ಹಿಂದೆ ವಲಸೆ ಹೋಗಿದ್ದರು. ಚನ್ನಗಿರಿಯಿಂದ ಬರ್ತಿದ್ದಾರೆ. ಆರಂಭದ ಒಂದೆರಡು ಶಿವೋತ್ಸವದಲ್ಲಿ ಅವರು ಗಣೆ ಊದಿದ್ದರು. ಆಗ ಕೇಳಿದ ಗಣೆ ನಾದ ಈಗಲೂ ಕಿವಿಯಲ್ಲಿದೆ. ಈ ಬಾರಿ ರಿಕ್ವೆಸ್ಟ್ ಮಾಡಿಕೊಂಡಿದ್ದರಿಂದ ಕರಿಯಣ್ಣ ಬರ್ತಿದ್ದಾರೆ. ಈ ಗಣೆನಾದದ ಜತೆ ಕೆ.ರಂಗನಹಳ್ಳಿ ಜುಂಜಣ್ಣ ಜುಂಜಪ್ಪನ ಕಥೆ ಹೇಳ್ತಾರೆ.ಅದನ್ನ ಜುಂಜಪ್ಪನ ತಾಯಿ ಚಿನ್ನಮ್ಮನ ತವರು ಕಂಬೇರಹಟ್ಟಿಯಲ್ಲಿ ಕುಂತು ಕೇಳೋದೇ ಆನಂದ ಎಂದು ತಿಳಿಸಿದ್ದಾರೆ.

ದೇವನೂರು ಮಹಾದೇವರ ಒಡಲಾಳ ನಾಟಕ ಇತ್ಯಾದಿ ರಾತ್ರಿಯೆಲ್ಲಾ ಇರುತ್ತದೆ.
ಗದ್ದುಗೆಗೆ ಕರೇ ಕಂಬಳಿ ಸಿದ್ಧ!
ಶಿವೋತ್ಸವ ಗಣೆ ಗೌರವದ ಗದ್ದುಗೆಗೆ ಕರೇ ಕಂಬಳಿ ಬಹಳ ಮುಖ್ಯ. ನಮ್ಮ ಸಿರಾ ಸೀಮೆ ಈ ಹಿಂದೆ ಕಂಬಳಿ ಸೀಮೆ ಕೂಡ ಆಗಿತ್ತು. ಮಲೆನಾಡಿಗೆ ಇಲ್ಲಿಂದ ಕಂಬಳಿ ಹೋಗುತ್ತಿದ್ದೆವು. ಈಗ ಕಂಬಳಿ ಮಗ್ಗಗಳಿಗೆ ಆ ವೈಭವ ಇಲ್ಲ.

ಆದ್ರೂ ಶಿವೋತ್ಸವಕ್ಕೆ ಅಗತ್ಯವಾದ ಕರೇ ಕಂಬಳಿ ಸಿದ್ದವಾಗಿದೆ. ಸಿರಾ ತಾಲ್ಲೂಕಿನಲ್ಲಿ ಶಿಕ್ಷಕರಾಗಿರುವ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ತಿಪ್ಪೇಸ್ವಾಮಿಯವರು ಸ್ವತಃ ಕಂಬಳಿ ನೆಯ್ದು ತರುತಿದ್ದಾರೆ. ಶಿಕ್ಷಕರೊಬ್ಬರು ಈ ರೀತಿ ಕಂಬಳಿ ನೇಯುತ್ತಿರುವುದೇ ಸಖತ್ ಖುಷಿ ಕೊಡುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಈವರೆಗೆ ಗಣೆ ಗೌರವಕ್ಕೆ ರೈತ ನಾಯಕ ಕಡಿದಾಳು ಶಾಮಣ್ಣ, ದೇಶಿ ಪ್ರಸನ್ನ, ಪೆÇ್ರ. ಕಾಳೇಗೌಡ ನಾಗವರ, ವೈ ಎಸ್ ವಿ ದತ್ತ, ಡಾ. ಬಿ ಟಿ ಲಲಿತಾ ನಾಯ್ಕ್, ಕೋಟಿಗಾನಹಳ್ಳಿ ರಾಮಣ್ಣ ಅವರು ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *