ತುಮಕೂರು : ತುಮಕೂರು ಜಿಲ್ಲೆಯಲ್ಲಿ ಫೆಬ್ರವರಿ 25ರಿಂದ ಪ್ರತಿ ಬೂತ್ ಮಟ್ಟದಲ್ಲಿ ಪ್ರಗತಿ ರಥ ವಾಹನ (ಎಲ್.ಇ.ಡಿ ವಿಡಿಯೋಗಳು) ಹಾಗೂ ಜನಧ್ವನಿಯಾಗಿ ಪ್ರಣಾಳಿಕೆ ಸಲಹಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದರು.
ಇವರು ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಪಡೆಯಲು ಕೇಂದ್ರ, ರಾಜ್ಯದ ಪ್ರಮುಖ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದರು.
ಈ ಮೂಲಕ ಬಿಜೆಪಿಯು ಅಧಿಕೃತವಾಗಿ ವಿಧಾನಸಭಾ ಚುನಾವಣೆಗೆ ಪ್ರಚಾರವನ್ನು ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಿದೆ.
ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ಜೀ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್, ಪ್ರಮುಖರಾದ ಆರ್.ಅಶೋಕ್, ಗೋವಿಂದ ಕಾಳಜೋಳ, ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ, ವಿ.ಸೊಮಣ್ಣ, ಅರಗ ಜ್ಞಾನೇಂದ್ರ, ಸಿ.ಅಶ್ವಥ್ನಾರಾಯಣ್, ಜೆ.ಸಿ.ಮಾಧುಸ್ವಾಮಿ, ಬಿ.ಎಸ್.ನಾಗೇಶ್ ಮತ್ತು ಜಿಲ್ಲೆಯ ಸಂಸದರು, ಶಾಸಕರು ಮುಂತಾದ ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆಂದರು.
ಕುಣಿಗಲ್ನಲ್ಲಿ ರೈತ ಮೋರ್ಚಾ ಸಮಾವೇಶ, ಗುಬ್ಬಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ, ಚಿಕ್ಕನಾಯಕನಹಳ್ಳಿಯಲ್ಲಿ ಎಸ್.ಟಿ. ಮೋರ್ಚಾ ಸಮಾವೇಶ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಸ್.ಸಿ. ಮೋರ್ಚಾ ಸಮಾವೇಶ, ತಿಪಟೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ತುಮಕೂರು ನಗರ ಹಾಗೂ ತುರುವೇಕೆರೆಯಲ್ಲಿ ಯುವ ಮೋರ್ಚಾ ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದು ಹೆಚ್.ಎಸ್.ರವಿಶಂಕರ್ ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ 16 ರಂದು ತುಮಕೂರು ನಗರ, ಮಾರ್ಚ್ 17ರಂದು ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ಮಾರ್ಚ್ 18ರಂದು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.