ಧ್ರುವನಾರಾಯಣ್ ನಿಧನ, ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ-ಡಾ.ಜಿ.ಪರಮೇಶ್ವರ್

ತುಮಕೂರು-ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ್ ಅವರು ಬಹಳ ಅಪರೂಪದ ವ್ಯಕ್ತಿತ್ವವುಳ್ಳವರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಾ ದೊಡ್ಡ ನಷ್ಟವುಂಟಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ರುವನಾರಾಯಣ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಧ್ರುವನಾರಾಯಣ ಅವರು ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳು. 2 ಬಾರಿ ಸಂಸದರಾಗಿ, ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸಂಸದರಾಗಿ, ಶಾಸಕರಾಗಿ ಕಾರ್ಯನಿರ್ವಹಿಸಿದ ಪರಿ ಹಾಗೂ ಅವರ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿತ್ತು ಎಂದರು.

ಪಕ್ಷ ನೀಡಿದ ಜವಾಬ್ದಾರಿಯನ್ನು ಧ್ರುವನಾರಾಯಣ ಅವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಎಂದ ಅವರು, ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ನಾವೆಲ್ಲರೂ ಅಂದುಕೊಂಡಿದ್ದೆವು. ಆದರೆ ಈ ರೀತಿಯಾಗಿರುವುದು ವೈಯುಕ್ತಿಕವಾಗಿ ನನಗೆ ತುಂಬಾ ನೋವು ತಂದಿದೆ ಎಂದರು.

ಪ್ರಸ್ತುತ ಕಲುಷಿತವಾದ ವಾತಾವರಣ ಇರುವಂತಹ ಸಂದರ್ಭದಲ್ಲಿ ಇಂತಹ ವ್ಯಕ್ತಿ ಸಿಗುವುದು ಬಹಳ ಅಪರೂಪ. ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧಕ್ಷ ರಾಯಸಂದ್ರ ರವಿಕುಮಾರ್, ಮಾಜಿ ಶಾಸಕ ಕೆ.ಎಸ್. ಕಿರಣ್‍ಕುಮಾರ್, ಮುಖಂಡರಾದ ಕೆಂಚಮಾರಯ್ಯ, ಮುರುಳೀಧರ ಹಾಲಪ್ಪ, ನಾರಾಯಣಮೂರ್ತಿ, ವಾಲೇಚಂದ್ರು, ಅತೀಕ್ ಅಹಮದ್, ಇಕ್ಬಾಲ್ ಅಹಮದ್, ಪುಟ್ಟರಾಜು, ಮಂಜುನಾಥ್, ಸಿದ್ದಲಿಂಗೇಗೌಡ, ನಟರಾಜು, ಪ್ರಧಾನ ಕಾರ್ಯದರ್ಶಿ ಸುಜಾತ, ಸಂಜೀವ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *