ತುಮಕೂರು:ನಗರ ಕ್ಷೇತ್ರದ ಅಭ್ಯರ್ಥಿ ನಡವಳಿಕೆಯಿಂದ ಬೇಸರಗೊಂಡು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದೇನೆ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷಕ್ಕೆ ಚೈತನ್ಯ ತುಂಬಿದ್ದೇನೆ,ಆದರೆ ತುಮಕೂರು ಜಿಲ್ಲೆಯಲ್ಲಿ ತೇಜೋವಧೆ ಮಾಡುವ ಹುನ್ನಾರ ಮಾಡಲಾಗಿದೆ ಎಂದರು.
2013ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದೆ ಆಗ ನಿರಾಕರಿಸಲಾಯಿತು,ಪಕ್ಷಕ್ಕಾಗಿ ದುಡಿಯದವರಿಗೆ ಟಿಕೆಟ್ ನೀಡಲಾಯಿತು, ಚುನಾವಣೆ ಮುಗಿದ ಮೇಲೆ ಹೊರಟು ಹೋದರು,2018ರಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆಯಿತು, ವರಿಷ್ಠರ ಮಾತಿಗೆ ಕಟ್ಟುಬಿದ್ದು ಪಕ್ಷಕ್ಕಾಗಿ ದುಡಿದಿದ್ದೇವೆ ಎಂದರು.
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ತುಮಕೂರಿಗೆ ಬಂದರೆ ಅವರನ್ನು ನಾಮಪತ್ರ ಸಲ್ಲಿಸಲು ಕರೆಯಲಿಲ್ಲ, ಪಂಚರತ್ನ ಯಾತ್ರೆ ಆರಂಭದಲ್ಲಿ ಟಿಕೆಟ್ ಘೋಷಣೆ ಮಾಡಿದರು, ಪಕ್ಷ ಸಂಘಟನೆ ಮಾಡುವಂತೆ ಅಭ್ಯರ್ಥಿಗೆ ಮನವಿ ಮಾಡಿದರು ಸಹ, ಕಿವಿಗೊಡಲಿಲ್ಲ ಎಂದು ಆರೋಪಿಸಿದರು.
ತಮ್ಮ ಹಿಂಬಾಲಕರಿಗಾಗಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಯಿತು,ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿಲ್ಲದ ಅಭ್ಯರ್ಥಿಯ ನಡವಳಿಕೆಯಿಂದ ಬೇಸರಗೊಂಡು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ, ಇಂತಹ ವ್ಯಕ್ತಿಗಳೊಂದಿಗೆ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಖಂಡ ದೇವರಾಜು ಸಹ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿವುದಾಗಿ ಹೇಳಿದರು.
ಸುದ್ದಿಗೋಷ್ಠಿಯ ಒಂದು ಹಂತದಲ್ಲಿ ದೇವೇಗೌಡರನ್ನು ನೆನೆದು ಕಣ್ಣಾಲಿಗಳನ್ನು ತುಂಬಿಕೊಂಡು ಗದ್ಗದಿತರಾದರು.