ತುಮಕೂರು : ಜೆಡಿಎಸ್ ತುಮಕೂರು ನಗರ ಅಭ್ಯರ್ಥಿ ತಮ್ಮನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯ ವಕ್ತಾರರ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ಬೆಳ್ಳಿ ಲೋಕೇಶ್ ಬಿಜೆಪಿ ಪಕ್ಷವನ್ನು ಸೇರ್ಪಡೆ ಯಾದರು.
ನಗರದ ಭದ್ರಮ್ಮ ಚೌಟರಿಯ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಸಂಸದರಾದ ಜಿ.ಎಸ್.ಬಸವರಾಜು ಅವರ ಸಮ್ಮುಖದಲ್ಲಿ ಬೆಳ್ಳಿ ಲೋಕೇಶ್ ಮತ್ತು ದೇವರಾಜು ಅವರುಗಳನ್ನು ಪಕ್ಷದ ಬಾವುಟ ನೀಡಿ, ಪಕ್ಷದ ಶಾಲು ಹಾಕುವ ಮೂಲಕ ಸೇರ್ಪಡೆ ಮಾಡಿಕೊಂಡರು.
ಬೆಳ್ಳಿ ಲೋಕೇಶ್,ಜೆಡಿಎಸ್‍ನ ಹಿರಿಯ ಉಪಾಧ್ಯಕ್ಷ ದೇವರಾಜು ಸೇರಿದಂತೆ ಹಲವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಎನ್.ರವಿಶಂಕರ್,ಸಂಘಟನಾತ್ಮಕ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು,ತುಮಕೂರು ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿದ್ದು, ನಗರದಲ್ಲಿ ಆಗಿರುವ ಬದಲಾವಣೆಗೆ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅತ್ಯಧಿಕ ಮತಗಳಿಂದ ಜ್ಯೋತಿಗಣೇಶ್ ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಬೆಳ್ಳಿ ಲೋಕೇಶ್ ರಾಜಕಾರಣದಲ್ಲಿ ಪ್ರಜಾಪ್ರಭುತ್ವ ಕಾಪಾಡುತ್ತಿರುವ ಏಕೈಕ ಪಕ್ಷ ಬಿಜೆಪಿ ಮಾತ್ರ, ಮಾಜಿ ಶಾಸಕ ಸುರೇಶ್ ಗೌಡರು ನನಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನಿಸಿದರು,ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಕಾರಣಕ್ಕೆ ಶಾಸಕ ಜ್ಯೋತಿಗಣೇಶ್ ಮನೆಗೆ ಬಂದು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದರು.ರಾಜಕಾರಣದಲ್ಲಿ ವಿರೋಧಿಗಳಾದರೂ ಬಹುತೇಕರೊಂದಿಗೆ ಆತ್ಮೀಯತೆಯನ್ನು ಕಂಡುಕೊಂಡಿದ್ದೇನೆ, ಬಿಜೆಪಿಯಲ್ಲಿರುವ ಸ್ನೇಹಿತರು ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ.ಪಕ್ಷ ನೀಡುವ ಜವಾಬ್ದಾರಿಯನ್ನು ಯಾವುದೇ ಲೋಪ ಬಾರದಂತೆ ಶಿರಸಾ ವಹಿಸಿ ಪಾಲಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ,ಬೇರೆ ಪಕ್ಷಗಳಿಂದ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ, ಬಿಜೆಪಿ 11 ಕ್ಷೇತ್ರಗಳಲ್ಲಿಯೂ ಗೆಲ್ಲುವ ವಾತಾವರಣವಿದೆ ಬಿಜೆಪಿಗೆ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ಪಕ್ಷಕ್ಕೆ ಸೇರ್ಪಡೆಯಾಗಿರುವವರನ್ನು ಗೌರವಯುತವಾಗಿ ನಡೆಸಿಕೊಳ್ಳು ತ್ತೇನೆ,ಸಕಾಲದಲ್ಲಿ ಪಕ್ಷ ಸೇರಿ ಶಕ್ತಿ ತುಂಬಿದ್ದೀರಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪಕ್ಷ ಕಟ್ಟಲು ಮುಂದಾಗೋಣ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಆರ್.ದೇವರಾಜು,ಡಿಪೆÇೀ ನಾಗರಾಜು, ಕೇಸರಿ ಶ್ರೀನಿವಾಸ್, ಲೀಲಾವತಿ, ನಟರಾಜು, ಕುಬೇರ್ ಭೂಷಣ್, ಸದಾರಾಂ, ಅರುಣ್‍ಗೌಡ, ಸೇರಿದಂತೆ ಇತರರು ಬಿಜೆಪಿ ಸೇರ್ಪಡೆಯಾದರು.
ಈ ವೇಳೆ ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ,ನರಸಿಂಹಮೂರ್ತಿ, ಪಂಚೆ ರಾಮಚಂದ್ರಪ್ಪ, ಹನುಮಂತರಾಜು, ಸಂದೀಪ್ ಗೌಡ, ರುದ್ರೇಶ್, ಕೆಂಪರಾಜು, ಜಯಂತ್ ಗೌಡ, ಬಳ್ಳಗೆರೆ ವೆಂಕಟೇಶ್ ಸೇರಿದಂತೆ ಇತರರಿದ್ದರು