ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದರೆ ಬೇಡ ಅನ್ನಲು ಸಾಧ್ಯವೇ!-ಡಾ.ಜಿ.ಪರಮೇಶ್ವರ್

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, 6ರಿಂದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಂದು ತಿಳಿಸಿದರು.

ಅವರಿಂದು ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು,
ರಾಜ್ಯದಲ್ಲಿ ಬದಲಾವಣೆಯ ಅಭಿಪ್ರಾಯ ಎದ್ದು ಕಾಣುತ್ತಿದ್ದು, ಈ ಬಾರಿ ಯುವಕರ ಯೋಚನೆಗಳು ಕೂಡ ಕೆಲಸ ಮಾಡಿದ್ದು, ಅವು ಸಹ ಕಾಂಗ್ರೆಸ್‍ಗೆ ಸಹಕಾರಿಯಾಗಲಿವೆ ಎಂದ ಅವರು, ಜಿಲ್ಲೆಯಲ್ಲಿ ಉತ್ತಮ ಮತ ಚಲಾವಣೆಯಾಗಿದ್ದು, ಜಿಲ್ಲೆಯ ಜನರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿದೆ ಎಂದರು.

ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು, ರಾಜ್ಯದಲ್ಲಿ 130 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ, ಸರ್ಕಾರ ರಚನೆಯಾದ ಕೂಡಲೇ ನಮ್ಮ ಪಕ್ಷದ 5 ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮುಖ್ಯಮಂತ್ರಿಯ ಆಯ್ಕೆಯನ್ನು ಶಾಸಕರು ಆಯ್ಕೆ ಮಾಡಲಿದ್ದು, ನನಗೂ ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದರೆ ಬೇಡ ಅನ್ನಲು ಸಾಧ್ಯವೇ ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಮಾತನಾಡಿ ಮತದಾನ ನೀಡದವರಿಗೆ ಸರ್ಕಾರ ಸವಲತ್ತು ಸಿಗದಂತಹ ಕಾಯ್ದೆ ತರಬೇಕಾಗಿದೆ ಎಂದರು.

ಭಜರಂಗಿಗೂ ಭಜರಂಗಿದಳಕ್ಕೂ ಯಾವುದೇ ಸಂಬಂಧವಿಲ್ಲ, ಸಮಾಜಘಾತಕ ಶಕ್ತಿಗಳನ್ನು ನಿಷೇಧಿಸುವುದಾಗಿ ಹೇಳಿರುವುದು ಅದನ್ನು ಕೆಲವರು ತಪ್ಪಾಗಿ ಅರ್ಥೈಸಲು ಹೊರಟಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಕಾರ್ಯದರ್ಶಿ ಮುರಳಿಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ರವಿಕುಮಾರ್ ರಾಯಸಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್‍ಗೌಡ, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಮಾಜಿ ಶಾಸಕ ಗಂಗಹನುಮಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *