ಈ ಪಪ್ಪಿಗೆ ಬದುಕುವ ಹಕ್ಕಿರಲಿಲ್ಲವೇ?- (Bad walk Day)- ತಾಯಿ ಎಂಬ ದೇವರು.

ತುಮಕೂರು : ಈ ದಿನ ನಾನು ಯಾವ ದಿಕ್ಕಿನಲ್ಲಿ ಎದ್ದೆ ಎಂಬುದು ತಿಳಿದಿಲ್ಲ, ಯಾಕೆಂದ್ರೆ ನಾನು ಎಡಕ್ಕೆ-ಬಲಕ್ಕೆ ಎದ್ದರೆ ಒಳ್ಳೆಯದಾಗುತ್ತದೆ ಎಂಬುದರಲ್ಲಿ ನಂಬಿಕೆಯಿಲ್ಲ, ಆದರೆ ಒಂದು ಪಪ್ಪಿ ನನ್ನನ್ನು ನೋಡು ನೋಡುತ್ತಲೇ ಜೀವ ಬಿಟ್ಟಿತು, ಈ ಪಪ್ಪಿಗೆ ಬದುಕುವ ಹಕ್ಕಿರಲಿಲ್ಲವೇ- ಈ ದಿನದ ವಾಕ್ ಬಾಡ್ ವಾಕ್ ಡೇ(Bad walk Day

ನಾನು ಸುಮಾರು ಬೆಳಗಿನ ಜಾವ 5.30ಕ್ಕೆಲ್ಲಾ ಬೆಳಗಿನ ವಾಯು ವಿಹಾರಕ್ಕೆ (ವಾಕ್) ಮನೆಯನ್ನು ಬಿಡುತ್ತೇನೆ. ನಾನು ಮನೆ ಬಿಟ್ಟು ಮುಖ್ಯರಸ್ತಗೆ ಬರುವುದೇ ತಡ ನಾನು ಬರುವುದನ್ನೇ ಕಾಯುತ್ತಿರುವ ನನ್ನ ಬಾಡಿಗಾಡ್ರ್ಸ್(ನಾಯಿಗಳ) ಹಿಂದೆ-ಮುಂದೆ ಬಂದು ಬಾಲ ಅಲ್ಲಾಡಿಸುತ್ತಾ ನನ್ನ ಜೊತೆ ಕೈ ಕಾಲಿಗೆಲ್ಲ ಮುತ್ತಿಕ್ಕುತ್ತಾ ಯಾರಾದರೂ ಹತ್ತಿರ ಬಂದರೆ ಗುರ್ ಎಂದು ಮತ್ತಷ್ಟು ನನ್ನ ಹತ್ತಿರ ಬಂದು ನನ್ನ ಮುಂಭಾಗ ಬಂದು ನನ್ನ ಉದ್ದಕ್ಕೂ ನಿಂತು ಮುತ್ತಿಕ್ಕುತ್ತವೆ, ಆನಂತರ ನನ್ನ ಪ್ಯಾಂಟ್ ಹಿಡಿದು ಎಳೆಯುತ್ತವೆ, ಆಗ ನನ್ನ ಜೇಬಿನಲ್ಲಿರುವ ತಿಂಡಿಯನ್ನು ಅವಕ್ಕೆ ಸಮವಾಗಿ ನೀಡಬೇಕು.

ಆ ನಂತರ ಅವುಗಳ ಗಡಿಯ ತನಕ ನನಗೆ ಬಾಡಿಗಾಡ್ರ್ಸ್ ತರ ನನ್ನ ಹಿಂದೆ ಮುಂದೆ ಬರುತ್ತವೆ, ಅವುಗಳ ಗಡಿ ಮುಗಿದ ನಂತರ ಮುಂದಿನ ಐದಾರು ನಾಯಿಗಳು ತಮ್ಮ ಬಾಡಿಗಾಡ್ರ್ಸ್ ಚಾರ್ಜ್ ತೆಗೆದುಕೊಂಡು ಹಿಂದೆ ಮುಂದೆ ಪಕ್ಕದಲ್ಲಿ ನನ್ನ ಸಮ್ಮಕ್ಕೆ ನನ್ನ ಕೈ ಎಳೆಯುತ್ತಾ ಪಾಂಟ್ ಎಳೆಯುತ್ತಾ ಸಾತು ಕೊಡುತ್ತವೆ.


ಅವುಗಳ ಗಡಿ ಮುಗಿಯುವುದರೊಳಗೆ ನನ್ನ ವಾಕ್ ಮಾಡುವ ಸ್ಥಳ ಸಿಗುತ್ತದೆ. ಆ ಸ್ಥಳದಲ್ಲಿ ಇಬ್ಬರು ಬಾಡಿಗಾಡ್ರ್ಸ್ ಹಿಂದೆ-ಮುಂದೆ ನಾನು ವಾಕ್ ಮಾಡುವ ತನಕ ನನ್ನ ಜೊತೆ ನನಗೆ ಜೊತೆಯಾಗಿ ನಡೆಯತ್ತಾ ಚೆಲ್ಲಾಟವಾಡುತ್ತಾ ಬರುತ್ತವೆ, ಈ ಮಧ್ಯೆ ತಿಂಡಿಕೊಟ್ಟರೂ ತಿನ್ನುವುದಿಲ್ಲ, ನನಗೆ ವಾಕ್ ಸಾಕು ಎಂದು ಅವುಗಳನ್ನು ಕರೆದು ಮುದ್ದು ಮಾಡಿದಾಗ ನನ್ನ ಮೂತಿಗೆ ಮುತ್ತಿಕ್ಕಿದಾಗ ಅವುಗಳಿಗೆ ತಿಂಡಿ ಕೊಡಲೇಬೇಕು, ಇಲ್ಲದಿದ್ದರೆ ಅಂಗಡಿಯ ತನಕ ನನ್ನ ಹಿಂದೆಯೇ ಬರುತ್ತವೆ.

ಇಂದೂ ಹಾಗೆಯೇ ಬೆಳಗಿನ ವಿಹಾರಕ್ಕೆ ಹೊರಟಾಗ ತಾಯಿ ನಾಯಿಯೊಂದು ತಿಂಡಿ ಇಸ್ಕೊಳ್ಳಲು ಬಾರದೆ ತನ್ನ ಮಡಿಲಲ್ಲಿ ಮರಿಯೊಂದನ್ನು ಮಲಗಿಸಿಕೊಂಡು ಮಲಗಿತ್ತು, ಅಯ್ಯೋ ಮರಿಗೆ ಹಾಲು ಕುಡಿಸುತ್ತಾ ಇದೆ ಎಂದು ನಾನು ಬಿರ ಬಿರನೇ ಮುಂದಕ್ಕೆ ಹೆಜ್ಜೆ ಹಾಕಿದಂತೆಲ್ಲಾ, ತಾಯಿ ನಾಯಿ ಮರಿಯನ್ನು ಮಡಿಲಲ್ಲಿ ಮಲಗಿಸಿಕೊಂಡಿರುವುದೇ ಕಾಡುತ್ತಾ ಇತ್ತು, ಆ ಮರಿ ತಾಯಿಯನ್ನು ಸಾಕುವುದಿಲ್ಲ, ಆದರೂ ತಾಯಿ ಎಂಬ ದೇವರು ತನ್ನ ಮರಿಗಳನ್ನು ಅವು ಊಟ ಕೇಳಿ ಪಡೆಯುವ ತನಕ ತನ್ನ ಮೊಲೆ ಹಾಲು ಉಣಿಸಿ ಪೋಷಿಸುವುದು ನೋಡಿದಾಗ ಈ ಜಗತ್ತಿನಲ್ಲಿ ತಾಯಿಗಿಂತ ಬೇರೆ ದೇವರಿಲ್ಲ.

ಇದೇ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು, ವಾಪಸ್ಸು ಬರುವಾಗ ಆ ತಾಯಿ ತನ್ನ ಮರಿಯನ್ನು ಮಡಿಲಲ್ಲೇ ಹಾಕಿಕೊಂಡು ನೆಕ್ಕುತ್ತಾ ಇತ್ತು, ಮರಿ ಉಸಿರಾಡುತ್ತಿತ್ತು, ನನ್ನ ನೋಡಿದ ತಾಯಿ ನಾಯಿ ಕುಯ್ ಕುಯ್ ಎಂದು ಅಳಲು ಪ್ರಾರಂಭ ಮಾಡಿದಾಗ ಹಸಿವಾಗಿರಬೇಕೆಂದು ಬಿಸ್ಕೆಟ್ ನೀಡಿದಾಗ ತನ್ನ ಬಾಯಿನ್ನು ಮರಿಗೆ ಇಟ್ಟು ನೆಕ್ಕಲಾರಂಭಿಸಿತು.

ಆಗ ಆ ಪಪ್ಪಿಯನ್ನು ಎತ್ತಿಕೊಂಡು ನೋಡಿದಾಗ ಪಪ್ಪಿಯ ಕಣ್ಣಿನ ಬಳಿ ಗಾಯವಾಗಿ ರಕ್ತ ಹೊರ ಬಂದಿತ್ತು, ತಾಯಿ ನಾಯಿ ನನ್ನ ಕಾಲನ್ನು ಎರಡೂ ಕಾಲುಗಳಿಂದ ಬಿಗಿದು ಹಿಡಿದುಕೊಂಡಿತ್ತು.


ಕೈಯಲ್ಲಿದ್ದ ಪಪ್ಪಿಗೆ ಪಪ್ಪಿ, ಚಿನ್ನು ಮರಿ. ಕಂದ ಎಂದಾಗ ಮೆಲ್ಲಗೆ ಕಣ್ಣು ಬಿಟ್ಟು ನೋಡಿ ದೊಡ್ಡದಾಗಿ ಉಸಿರು ಬಿಟ್ಟಿತು. ನನಗೆ ಗೊತ್ತಿಲ್ಲದೆ ನನ್ನ ಕಣ್ಣಲ್ಲಿ ನೀರು ಜಿನುಗಿತು. ಪಪ್ಪಿಯನ್ನು ಅವಚಿಕೊಂಡು ಮನೆಗೆ ಹೋಗಿ ಹಾಲು ಕಡಿಸಿ ವೈದ್ಯರಿಗೆ ತೋರಿಸೋಣ ಅಂತ ಮುಂದಕ್ಕೆ ಹೆಜ್ಜೆ ಇಟ್ಟಾಗ ತಾಯಿ ನಾಯಿ ಅಡ್ಡ ಹಾಕಿಕೊಂಡು ಅಳಲು ಪ್ರಾರಂಭಿಸಿತು.

ಅದಕ್ಕೇನು ಗೊತ್ತು ನನ್ನ ಮರಿಗೆ ಪೆಟ್ಟಾಗಿದೆ ಎಂದು, ತಾಯಿ ನಾಯಿ ಪಾಪ ನನ್ನ ಮರಿಯನ್ನು ತೆಗೆದುಕೊಂಡು ಹೋಗುತ್ತಾನೆ ತೆಗೆದುಕೊಂಡು ಹೋಗಬೇಡಬೇಡ, ಅದಿನ್ನೂ ಹಾಲು ಕುಡಿಯುವ ಕಂದ ಎಂದು ಹೇಳಿದಂತಾಯಿತು. ತಾಯಿ ನಾಯಿ ನಾನು ಮುಂದಕ್ಕೆ ಹೋಗಲು ಬಿಡಲಿಲ್ಲ, ಅದಕ್ಕೆ ಅದರ ಮಗು ಬೇಕಿತ್ತು.


ಕೈಯಲಿದ್ದ ಪಪ್ಪಿಯನ್ನು ಹುಲ್ಲಿನ ಮೇಲೆ ಮಲಗಿಸಿ, ಪಶು ವೈದ್ಯರಿಗೆ ಪೋನ್ ಮಾಡಿದೆ, ನಡೆದ ಘಟನೆ ವಿವರಿಸಿದಾಗ ಬೇಗ ಪಪ್ಪಿ ತನ್ನಿ ಅಂದರು, ಮನೆಗೆ ಹೋಗಿ ಪಪ್ಪಿ ಹಾಕಿಕೊಳ್ಳಲು ಬಾಕ್ಸ್ ಮತ್ತು ವಾಹನವನ್ನು ತೆಗೆದುಕೊಂಡು ನನ್ನ ಮಗನನ್ನು ಕರೆದುಕೊಂಡು ಬಂದೆ.

ತಾಯಿ ತನ್ನ ಕಂದ ಮರಿಯನ್ನು ನೆಕ್ಕುತ್ತಲೇ ಇತ್ತು, ಹತ್ತಿರ, ಹತ್ತಿರ ಇನ್ನೂ ಹತ್ತಿರ ಹೋದಾಗ ಪಪ್ಪಿ ಉಸಿರಾಟ ನಿಲ್ಲಿದೆ ಅಂತ ಗೊತ್ತಾಯಿತು, ಅಳು ಬಂತು, ನನ್ನ ಮಗನೂ ಅತ್ತನು, ತಾಯಿ ನಾಯಿ ಮೂಖರೋಧನೆಯೊಂದಿಗೆ ಅಳುತಿತ್ತು.

ತಾಯಿ ನಾಯಿ ನನ್ನ ಕಂದಮರಿಯನ್ನು ಎಬ್ಬಿಸು ಬಾ ಎಂದು ಕರೆಯುವಂತಿದೆ ಈ ದೃಶ್ಯ.

ಯಾವ ಪಾಪಿ ಆ ಪಪ್ಪಿ ಮೇಲೆ ಗಾಡಿ ಓಡಿಸಿದನೋ ಅವನು ಗಾಡಿ ನಿಲ್ಲಿಸಿ ಚಿಕಿತ್ಸೆ ಕೊಡಿಸಿದ್ದರೆ ಆ ಪಪ್ಪಿ ಜೀವ ಉಳಿಯುತಿತ್ತು, ಅದಕ್ಕೂ ಈ ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯನುಗಿಂತ ಹೆಚ್ಚಿಗೆ ಇತ್ತು.


ವಾಹನ ಸವಾರರಲ್ಲಿ ಒಂದು ಮನವಿ ಪ್ರಾಣಿಗಳು ಸಂಚರಿಸುವಾಗ ಅವುಗಳಿಗೆ ದಯವಿಟ್ಟು ದಾರಿ ಬಿಡಿ, ಅವುಗಳಿಗೆ ನಮ್ಮಂತೆ ಮಾತು ಬರುವುದಿಲ್ಲ, ಪಪ್ಪಿ ಮೇಲೆ ಗಾಡಿ ಹೊಡೆದು ಸಾವಿಗೆ ಕಾರಣನಾದವನೂ ಇದನ್ನು ಅರ್ಥ ಮಾಡಿಕೊಳ್ಳಲ್ಲಿ ಈ ದಿನ ನನ್ನ ವಾಕ್ (Bad walk Day) ಬಾಡ್ ಡೇ ವಾಕ್.


ಇತ್ತೀಚೆಗೆ ತಾನೆ ನಮ್ಮ ಗೆಳೆಯರ ಮನೆಯಲ್ಲಿ “ನೀಲಾ” ಎಂಬ ನಾಯಿ ಮರಿ ಸಾವನ್ನಪ್ಪಿದಾಗ ಮನೆಯವರೆಲ್ಲಾ ದು:ಖ ಪಟ್ಟಿದ್ದು ಇನ್ನೂ ಮನಸ್ಸಿನಲ್ಲಿರುವಾಗಲೇ ಬಾಳಿ ಬದುಕಬೇಕಾದ “ಪಪ್ಪಿ” ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದು ನನ್ನಂತಹವನಿಗೆ ತಂಬಾ ದುಃಖವಾಗಿದೆ.

ಆ ಪಪ್ಪಿಯ ಆತ್ಮಕ್ಕೆ ಶಾಂತಿ ಸಿಗಲಿ, ಪಪ್ಪಿ ತಾಯಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಬುದ್ಧನಲ್ಲಿ ಪ್ರಾರ್ಥಿಸುತ್ತೇನೆ.

ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *