ತುಮಕೂರು : ಹೊಸ ಸರ್ಕಾರದ ಮೇಲೆ ಜನರ ನಿರೀಕ್ಷೆ ಹೆಚ್ಚಿದ್ದು, ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾದ ಡಾ.ಜಿ.ಪರಮೇಶ್ವರ ಕರೆ ನೀಡಿದರು.
ಇಂದು ಬೆಳಿಗ್ಗೆ ಪಾವಗಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಸರಬರಾಜು, ಮುಂಗಾರು ಸಿದ್ದತೆ ಹಾಗೂ ಇತರೆ ಪ್ರಮುಖ ವಿಚಾರಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರ ಸಮಗ್ರ ಕಲ್ಯಾಣಕ್ಕಾಗಿಯೇ ಸರ್ಕಾರವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸರ್ಕಾರಿ ನೌಕರರು, ಯೋಜನೆಗಳ ಫಲಾನುಭವಿಗಳಿಂದ ಯಾವುದೇ ಫಲಾಪೇಕ್ಷೆ ಬಯಸದೇ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಬೇಕು ಈ ಬಗ್ಗೆ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು
ಪಾವಗಡ ತಾಲ್ಲೂಕಿನ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ಪಡೆದ ಸಚಿವರು ತಾಲೂಕಿನ ಎರಡು ಸಾವಿರ ರೈತರಿಗೆ ಹನಿ ನೀರಾವರಿ ಉಪಕರಣಗಳುನ್ನು ವಿತರಿಸುವಂತೆ ಸೂಚಿಸಿದರು.
ರೈತರಿಗೆ ಅನುಕೂಲ ವಾಗುವಂತೆ ಕೃಷಿ ಹೊಂಡಗಳ ನಿರ್ಮಾಣ ಮಾಡಿ, ಈಗಾಗಲೇ ನಿರ್ಮಾಣಗೊಂಡಿರುವ ಕೃಷಿ ಹೊಂಡಗಳ ಸಮರ್ಪಕ ಬಳಕೆಯಾಗುತ್ತರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಸೂಚಿಸಿದರು. ತಾಲೂಕಿನ
ಕೊಳವೆ ಬಾವಿಗಳಿಂದ ಫ್ಲೋರೈಡ್ ರಹಿತ ಶುದ್ಧ ಕುಡಿಯುವ ನೀರನ್ನು ವ್ಯತ್ಯಯವಾಗದಂತೆ ಪೂರೈಸಬೇಕು.
ಜಲ ಜೀವನ್ ಅಭಿಯಾನದಡಿ ಜಿಲ್ಲೆಯಲ್ಲಿ ಅಳವಡಿಸಿರುವ ಪ್ಲಾಸ್ಟಿಕ್ ಪೈಪ್ ಗಳು, ಕಿತ್ತು ಬರುವಂತಿದ್ದು , ಇವುಗಳನ್ನು ಬದಲಿಸಿ ಸಧೃಡ ಕಬ್ಬಿಣ ಪೈಪ್ ಗಳ ಅಳವಡಿಸುವಂತೆ ಸೂಚಿಸಿದರು
ರಸಗೊಬ್ಬರ ಗೊಬ್ಬರ ವಿತರಣೆ ಕೇಂದ್ರದಲ್ಲಿ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರಕಟಿಸಿರುವ ಬಗ್ಗೆ ಖಚಿತ ಪಡಿಸಿಕೊಂಡು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹೆಚ್.ವಿ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್,ಉಪವಿಭಾಗಾಧಿಕಾರಿ ರಿಷಿಆನಂದ್ ಐ.ಎ.ಎಸ್. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ ಕೆ.ಹೆಚ್,
ಎತ್ತಿನಹೊಳೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ, ಕೃಷಿ ಇಲಾಖೆಯ ಮಧುಗಿರಿ ವಿಭಾಗದ ಜಂಟಿ ನಿರ್ದೇಶಕಿ ದೀಪಶ್ರೀ, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ರಾದ ರಾಮಕೃಷ್ಣ, ಜಿಲ್ಲಾ ಯೋಜನಾ ನಿರ್ದೇಶಕ ಆಂಜಿನಪ್ಪ,ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ದಿನೇಶ್, ತಹಶೀಲ್ದಾರ್, ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.