ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ: ಪ್ರತಿ ಕ್ವಿಂಟಾಲ್‍ಗೆ 3846 ರೂ. ನಿಗಧಿ

ತುಮಕೂರು : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದನ್ವಯ ಜಿಲ್ಲೆಯ 11 ಖರೀದಿ ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್‍ಗೆ 3846 ರೂ.ಗಳ ದರವನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ರಾಗಿ ಖರೀದಿಗಾಗಿ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೆರೆಯಲಾಗುವ 11 ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಗಿ ಖರೀದಿಗೆ ಸಂಬಂಧಿಸಿದಂತೆ ಡಿಸೆಂಬರ್ 1 ರಿಂದ ರೈತರ ನೋಂದಣಿ ಕಾರ್ಯವನ್ನು ಪ್ರಾರಂಭಿಸಬೇಕು ಹಾಗೂ 2024ರ ಜನವರಿ 1 ರಿಂದ ಮಾರ್ಚ್ 31ರವರೆಗೆ ರೈತರಿಂದ ರಾಗಿಯನ್ನು ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಪ್ರವೇಶಿಸದಂತೆ ಹಾಗೂ ಖರೀದಿಸಿದ ದಾಸ್ತಾನನ್ನು ಸಂಗ್ರಹಣೆ ಮಾಡಲು ಸ್ಥಳಾವಕಾಶದ ಕೊರತೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಗಿಯನ್ನು ಖರೀದಿಸುವ ಹಂತದಲ್ಲಿ ಅಧಿಕಾರಿಗಳು ಎಫ್.ಎ.ಕ್ಯೂ, ಗುಣಮಟ್ಟವನ್ನು ದೃಢೀಕರಿಸಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು ಹಾಗೂ ಗ್ರೇಡರ್‍ಗಳೊಂದಿಗೆ ರಾಗಿಯ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಲು 3ನೇ ವ್ಯಕ್ತಿ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು. ರಾಗಿ ಸಂಗ್ರಹಣೆಗೆ ಅಗತ್ಯವಿರುವ ಗೋಣಿ ಚೀಲವನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒದಗಿಸಬೇಕೆಂದು ಸೂಚಿಸಿದರು. 

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಜಿಲ್ಲೆಯ ಚಿಕ್ಕನಾಯನಹಳ್ಳಿ ಮತ್ತು ಕುಣಿಗಲ್ ತಾಲ್ಲೂಕಿನಲ್ಲಿ 2 ಖರೀದಿ ಕೇಂದ್ರ ಹಾಗೂ ಗುಬ್ಬಿ, ಹುಳಿಯಾರು, ಮಧುಗಿರಿ, ಶಿರಾ, ತಿಪಟೂರು, ತುಮಕೂರು ಮತ್ತು ತುರುವೇಕೆರೆ ತಾಲ್ಲೂಕುಗಳಲ್ಲಿ ತಲಾ 1 ಕೇಂದ್ರ ಸೇರಿದಂತೆ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರಲ್ಲದೆ ಕಳೆದ ಬಾರಿ ಏಪ್ರಿಲ್ 30ರವರೆಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 65709 ರೈತರು ನೋಂದಾಯಿಸಿದ್ದು, 950432.50 ಕ್ವಿಂಟಾಲ್ ರಾಗಿಯನ್ನು ನೋಂದಣಿ ಮಾಡಲಾಗಿತ್ತು ಹಾಗೂ 61550 ರೈತರಿಂದ 895876 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿತ್ತು ಎಂದು ವಿವರಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ರಾಜಣ್ಣ, ಕೃಷಿ ಅಧಿಕಾರಿಗಳು, ವಿವಿಧ ತಾಲ್ಲೂಕಿನ ತಹಶೀಲ್ದಾರರು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರು, ಎಪಿಎಂಸಿ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು. 

Leave a Reply

Your email address will not be published. Required fields are marked *