ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ 12ನೇ ದಿನಕ್ಕೆ-ಪ್ರತಿಭಟನೆ ಬೆಳಗಾವಿಗೆ

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ 12ನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಧರಣಿಯನ್ನು ಮುಕ್ತಾಯಗೊಳಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮತ್ತು ತಾಲ್ಲೂಕುಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದ ಮುಂದೆ ಅತಿಥಿ ಉಪನ್ಯಾಸಕರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ನಮ್ಮ ಪ್ರತಿಭಟನೆ ಬೆಳಗಾವಿಯಲ್ಲಿ ಮುಂದುವರೆಯಲಿದೆ ಎಂದು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಕೆ.ವಿ. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 12ನೇ ದಿನವೂ ಅನಿರ್ಧಿಷ್ಟಾವಧಿ ಧರಣಿ ಮುಂದುವರೆದಿದ್ದು, ಪ್ರತಿಭಟನಾ ಸ್ಥಳದಲ್ಲಿ ಅತಿಥಿ ಉಪನ್ಯಾಸಕರ ಸಭೆ ಸೇರಿ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಉಪನ್ಯಾಸಕರು ತೆರಳುತ್ತಿದ್ದು, ತುಮಕೂರು ಜಿಲ್ಲೆಯಿಂದ ಸುಮಾರು ಐನೂರು ಜನ ಅತಿಥಿ ಉಪನ್ಯಾಸಕರಿದ್ದು ಇದರಲ್ಲಿ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಬೆಳಗಾವಿ ಅಧಿವೇಶನದ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಲು ಈಗಾಗಲೇ ರೈಲು, ಬಸ್ಸು, ವಾಹನಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದು ನಾವೆಲ್ಲರೂ ನಾಳೆ 4,ಗಂಟೆಯ ನಂತರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ, ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಅನಿರ್ಧಿಷ್ಟಾವಧಿ ಧರಣಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ನಿಮ್ಮ ಬೇಡಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವಂತೆ ಮತ್ತು ಜಿಲ್ಲೆಯಿಂದಲೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ದಲಿತ ಮುಖಂಡ ಮತ್ತು ವಕೀಲ ರಂಗಧಾಮಯ್ಯ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಜನಪರವಾದ ಸರ್ಕಾರವಾಗಿದ್ದು, ನಿಮ್ಮ ಈ ಹೋರಾಟ ಇಂದಿನದಲ್ಲ, ನೀವು ನಿರಂತರವಾಗಿ ಹೋರಾಟ ಮಾಡುತ್ತಿದ್ದೀರಿ, ನಿಮ್ಮ ಹೋರಾಟಕ್ಕೆ ಯಶಸ್ವಿಯಾಗಲಿ ಎಂದು ಹಾರೈಸಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆ ಇಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು

ಅತಿಥಿ ಉಪನ್ಯಾಸಕ ಕುಮಾರ್.ಸಿ ಮಾತನಾಡಿ, ರಾಜ್ಯಾದ್ಯಂತ ನಮ್ಮ ಪ್ರತಿಭಟನೆ 12ನೇ ದಿನವೂ ಮುಂದುವರೆಯುತ್ತಿದ್ದು, ಸರ್ಕಾರ ನಮ್ಮ ಬಗ್ಗೆ ಗಮನ ಹರಿಸದೆ ಅತಿಥಿ ಉಪನ್ಯಾಸಕರನ್ನು ಬೀದಿಯಲ್ಲಿ ಪ್ರತಿಭಟನೆ ಮಾಡಲು ಬಿಟ್ಟು, ವಿದ್ಯಾರ್ಥಿಗಳನ್ನು ರಸ್ತೆಗಳಲ್ಲಿ ಅಲೆಯುವಂತೆ ಮಾಡುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವವರೆಗೂ ನಮ್ಮ ಈ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ. ಸವಿತಾ, ಗಿರಿಜಮ್ಮ.ಆರ್, ಎರ್ರಿಸ್ವಾಮಿ, ಶಂಕರಪ್ಪ.ಹೆಚ್.ಎನ್ ಹಾರೋಗೆರೆ, ಸುರೇಶ್.ಟಿ, ಗಿರೀಶ್, ಶ್ರೀನಿವಾಸ್.ಕೆ.ಟಿ, ಶಿವಣ್ಣ ತಿಮ್ಲಾಪುರ್,ಹನುಮಂತರಾಯಪ್ಪ, ಶಿವಯ್ಯ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *