ಮೈ (ಬೆನ್ನು) ಉಜ್ಜುವ ಕಲ್ಲು

ಅಬ್ಬಾ ನಿನ್ನನ್ನು ಎಲ್ಲೆಲ್ಲಿ ಹುಡುಕಿದೆ
ಕಾಡು-ಮೇಡು ಹುಡುಕಿ ತಡಕಿ
ತಂದೆ
ನಿನ್ನ ಚೆಂದ-ಅಂದ ಬೇಕಿರಲಿಲ್ಲ
ನನ್ನ ಮೈಯುಜ್ಜಲು ಉರುಕು,ಚುರುಕಾಗಿದ್ದರೆ ಸಾಕು

ನಾ ಹುಡುಗನಾಗಿದ್ದಾಗ ಅಮ್ಮ ನಿನ್ನ ಕೈಯಲ್ಲಿ
ಹಿಡಿದಾಗ ನನ್ನ ಮೈ ನಡುಗುತಿತ್ತು
ಕಣ್ಣು ತೇವಗೊಳ್ಳುತ್ತಿದ್ದವು ಅಷ್ಟು ಒರಟ ನೀನು
ಅಯ್ಯೋ ಎಷ್ಟೊಂದು ಕೊಳೆ ಎಂದೆನ್ನುತಾ
ಬೆನ್ನ, ಮೈಯ ಉರಿವಂತೆ ಅಮ್ಮ ಉಜ್ಜುವಾಗ
ನಿನಗೆ ದುರ್ವಾಸಮುನಿಗಿಂತ ಕಠೋರ ಶಾಪ

ಬೆನ್ನೆಲ್ಲಾ ಕೆಂಪಾಯಿತು, ಕಿತ್ತೋಯಿತು
ಹೊಯ್ದುಕೊಂಡರು, ಅಮ್ಮ ನಿನ್ನ ಬಿಡಲೊಲ್ಲಳು
ಮತ್ತಷ್ಟು ಗಸಗಸನೆ ತಿಕ್ಕಿ ತಿಕ್ಕಿ ಸುಡೋ ನೀರ ಹಾಕಿ
ಮತ್ತಷ್ಟು ಬೆನ್ನ ತಿಕ್ಕಿದಳಲ್ಲ.

ಎಷ್ಟೋ ದಿನ ನಿನ್ನ ಬಚ್ಚಿಟ್ಟೆವು, ಹೊಡೆದಾಕಿದೆವು
ಮತ್ತೆ ಹೊಸ ರೂಪದಲಿ ನಮ್ಮ ಮೈಯಿಗೆ ಮುಳ್ಳಾಗಿ ವಕ್ಕಿರಿಸುತ್ತಿದ್ದೆ
ನಿನ್ನ ಮೈಯೇಕೆ ನುಣುಪಿಲ್ಲ, ಉರುಕು ಉರುಕು
ನಿನ್ನ ಕಂಡರೇನೆ ಭಯ, ನಿನಗೆ ಸ್ನಾನದ ಮನೆಯಲ್ಲೊಂದು ಸ್ಥಾನ

ಹೊಸ ಮದುವೆ-ಗಂಡು ಮೈಯುಜ್ಜುವ ನೆಪದಲ್ಲಿ
ಸರಸ ಸಲ್ಲಾಪ, ಅತ್ತೆ ಬಚ್ಚಲು ಮನೆಯಲ್ಲೇ
ಬೆಚ್ಚಗೇನು ಮಾಡುತ್ತಿದ್ದಿಯೇ, ಅಮ್ಮ ಬೆನ್ನುಜ್ಜುತ್ತಿದ್ದಾಳೆ
ನಾ ಕಾಣದ ಬೆನ್ನುಜ್ಜುವಿಕೆ ಸಾಕು ಕಳಿಸೋ
ನಾಳಿಕ್ಕೆ ಉರುಪು ಕಲ್ಲು ತಂದಿಡುವೆಂಬ ಬೈಗುಳ

ಆಹಾ ಮೈಯುಜ್ಜುವ ಕಲ್ಲೆ ಯಾರ್ಯಾರ ಮೈ
ಬೆನ್ನು, ಎದೆಯನ್ನು ಉಜ್ಜಿ ನೀನು ಪಾವನಯಾದೆಯಲ್ಲಾ
ನಿನಗೂ ಜೀವವಿದ್ದರೆ ರೋಮಾಂಚನಗೊಂಡು ಬಿಡುತ್ತಿದ್ದೆಯೇನೋ
ಆ ಬೆನ್ನು, ಎದೆ, ಮೈಯ ನೋಡಿ

ಮೈ ಕಡಿತವಿದ್ದಾಗ ಮತ್ತಷ್ಟು ಉಜ್ಜವಿಕೆ ಆಯೆನಿಸುತಿತ್ತು
ಚಳಿಗಾಲದಲ್ಲಿ ಕೈ-ಕಾಲುಗಳನ್ನು ಉಜ್ಜಿ ರಕ್ತ ಹರಿಯುತಿತ್ತು
ನೀ ಬಿಟ್ಟರೂ ನಾವಿನ್ನ ಬಿಟ್ಟಿಲ್ಲ ನಿನ್ನ
ಆದರೂ ನಿನಗೆ ಪೈಪೋಟಿ ನೀಡಲು
ಬ್ರಷ್, ನಾರು, ಬಂದಿವೆ ಆದರೂ
ನಿನ್ನ ಮುಂದೆ ಅವೆಲ್ಲಾ ತೃಣಕ್ಕೆ ಸಮಾನ

ನನ್ನಜ್ಜನ ಕಾಲದಿಂದ ನನ್ನ ಕಾಲದವರೆಗೂ
ನೀ ಮೈಯುಜ್ಜುತ್ತಲೇ ಇದ್ದೀಯ
ಯಾವ ಬದಲಾವಣೆ ಕಂಡೆ,ಯಾವ ಸುಖ ಕಂಡೆ
ಛೇ! ನಿನ್ನ ಬದಲಾಗದ ಸ್ಥಿತಿ ಕಂಡು ಬಚ್ಚಲು ನಗುತಾ ಇದೆ
ಬಚ್ಚಲಿಗೀಗ ಶೆವರ್, ಸೋಲಾರು, ಗೀಜರ್, ಟೈಲ್ಸ್ ಬಂದಿವೆ
ನಿನ್ನ ಮೈ ಮಾತ್ರ ಅದೇ ಉರುಪು, ಒರಟು ಬದಲಾಗೇ ಇಲ್ಲ

ಈಗ ಮೈಸೋಪುಗಳ ಜೊತೆ ಮಾಲ್‍ಗಳಲ್ಲಿ
ನಿನ್ನನ್ನೂ ಇಟ್ಟಿದ್ದಾರೆ, ಆ ನಿನ್ನ ನುಣುಪು
ಮೈ ಕಂಡು ಕೊಳ್ಳುವವರೆ ಇಲ್ಲ
ನಮ್ಮೂರ ಕಾಡು, ಮೇಡಿನ ಉರುಪು
ಕಲ್ಲೇ ಬೇಕು ಮೈಯುಜ್ಜಲು

ಇನ್ನಾದರೂ ಬದಲಾಗು ಎಂದು ನಾನು ಹೇಳಲಾರೆ
ಏಕೆಂದರೆ ನೀನು ನನಗೂ ಬೇಕು
ನೀನಿಲ್ಲದೆ ನನ್ನ ಮೈ ಕೊಳೆ ತೆಗೆಯುವವರು ಯಾರು
ನೀ ಎಂದೆಂದಿಗೂ ಚಿರಾಯಿ, ಈ ಭುವಿಯಿರುವ ತನಕ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *