ಇಡೀ ಪ್ರಪಂಚವನ್ನು ಅಲುಗಾಡಿಸಿ ಲಾಕ್‍ಡೌನ್‍ನಲ್ಲಿಟ್ಟ ಕೋವಿಡ್-19(ಕೋರೊನಾ) ಮತ್ತೆ ದೇಶದಲ್ಲಿ ಜೆಎನ್-1ರ ರೂಪಾಂತರ ತಳಿ ಮೂಲಕ ಕಾಣಿಸಿಕೊಂಡಿದ್ದು, ದೇಶದ ಜನರಲ್ಲಿ ಆತಂಕ ಮೂಡಿದ್ದು ಮತ್ತೆ ಲಾಕ್‍ಡೌನ್ ಆಗಬಹುದೇ ಎಂಬ ಆತಂಕದಲ್ಲಿದ್ದಾರೆ.
2020ನೇ ಇಸವಿ ಮಾರ್ಚ್ ತಿಂಗಳಿನಲ್ಲಿ ಎಂದೂ ಕೇಳರಿಯದ ಕೊರೋನಾ ಎಂಬ ಮಹಾಮಾರಿ ಚೀನಾದಲ್ಲಿ ಕಾಣಿಸಿಕೊಂಡು ಇಡೀ ಪ್ರಪಂಚಕ್ಕೆ ಹರಡಿ ಭಯ ಹುಟ್ಟಿಸಿ ಲಾಕ್‍ಡೌನ್ ಮಾಡಿ, ಜನ ಜೀವನವನ್ನೇ ಬುಡಮೇಲು ಮಾಡಿತು.
ಈ ಕಾಯಿಲೆಯನ್ನು ಪೆಂಡಮಿಕ್ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಲ್ಪಡುತ್ತದೆ, ಇಂತಹ ಪೆಂಡಮಿಕ್ ಕಾಯಿಲೆ ಅಥವಾ ರೋಗಾಳುಗಳು ನೂರು ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತಿದ್ದು, ಕಳೆದ ಶತಮಾನದಲ್ಲಿ , ಪ್ಲೇಗ್ ಎಂಬ ಮಹಾಮಾರಿ ಹರಡಿ ಊರೂರು ಜನರೇ ಸಾಯುತ್ತಿದ್ದರಂತೆ. ಊರಿನಲ್ಲಿ ಹೆಣ ಊಳಲು ಜನರಿಲ್ಲದೆ ಸಾವನ್ನಪಿದ ಉದಾಹರಣೆಗಳಿವೆ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿದ್ದೇವೆ.
ಪ್ಲೇಗ್ ಬಂದ ಕಾಲದಲ್ಲಿ ಯಾವ ದೇಶದಲ್ಲೂ ಈಗಿನಷ್ಟು ವೈದ್ಯಕೀಯ ಕ್ಷೇತ್ರ ಔಷಧ ತಂತ್ರಜ್ಞಾನ, ಸಂಶೋಧನೆ ಮತ್ತು ಆಧುನಿಕ ಪ್ರಯೋಗಾಲಯ(ಲ್ಯಾಬ್‍ಗಳು)ಗಳನ್ನು ಹೊಂದಿರಲಿಲ್ಲ. ಯಾವುದೋ ದೇಶದಲ್ಲಿ ಹಬ್ಬಿದ ಕಾಯಿಲೆ ಮತ್ತೊಂದು ದೇಶಕ್ಕೆ ಹರಡಲು ವರ್ಷಾನುಗಟ್ಟಲೆ ಹಿಡಿಯುತಿತ್ತು. ಆದರೆ ಈಗ ಅಮೇರಿಕಾದಲ್ಲಿ ಕಾಣಿಸಿಕೊಂಡ ಪ್ಲೂ ಜ್ವರ ಮಧ್ಯಾಹ್ನದ ವೇಳೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳಬಹುದು.
ಯಾಕೆಂದರೆ ಪ್ಲೂ ಹಚ್ಚಿಕೊಂಡಿರುವ ವ್ಯಕ್ತಿ ನಿನ್ನೆ ಬೆಳಿಗ್ಗೆ ಅಮೇರಿಕಾದಲ್ಲಿ ಹತ್ತಿದ್ದು, ಇಂದು ಮಧ್ಯಾಹ್ನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಹೊತ್ತಿಗೆ ಅವನಲ್ಲಿ ಪ್ಲೂ ದೇಹದಲ್ಲಿ ಉಲ್ಬಣಗೊಂಡಿರುತ್ತದೆ, ಅವನು ಏನೋ ಜ್ವರ ಎಂದು ಬೆಂಗಳೂರಿಗೆ ಬಂದು ಬೆಂಗಳೂರಿಗೆಲ್ಲಾ ಹರಡಿರುತ್ತಾನೆ, ಈಗ ರೋಗ ಹರಡಲು ಆ ದೇಶ, ಈ ದೇಶ ಅಂತಿಲ್ಲ.
ಒಂದೆರಡು ಗಂಟೆಗಳಲ್ಲಿ ಎಲ್ಲಾ ದೇಶಗಳಿಗೆ ಹರಡಬಹುದು, ಏಕೆಂದರೆ ಈಗ ಜರ್ನಿ ತುಂಬ ವೇಗ ಮತ್ತು ಸುಲಭವಾಗಿದೆ, ಇದರಿಂದಲೇ ಎಲ್ಲೆಯೋ ಇದ್ದ ಕಾಯಿಲೆ ಇನ್ನೆಲ್ಲೂ ಕಾಣಿಸಿಕೊಂಡು ಬಿಡುತ್ತದೆ.
ಕೊರೋನಾ ಕೂಡ ಹಾಗೆಯೇ ಆಗಿದ್ದು, ಚೀನಾದಲ್ಲಿ ಕಾಣಿಸಿಕೊಂಡ ನಂತರ, ಇದು ಈ ತರಹದ ಭಯಂಕರ ರೋಗ ಎಂದು ತಿಳಿಯುವ ವೇಳೆಗೆ ಎಲ್ಲಾ ದೇಶಗಳಿಗೆ ಈ ಪೆಂಡಮಿಕ್ ರೋಗ ಹರಡಿ ಇಡೀ ಜಗತ್ತನ್ನು ಕೊರೋನಾಮಯ ಮಾಡಿ ಲಾಕ್‍ಡೌನ್ ಎಂಬ ದಿಗ್ಭಂಧನಕ್ಕೆ ನೂಕಲ್ಪಟ್ಟಿತ್ತು.
ಈ ರೋಗಕ್ಕಿಂತ ಈ ರೋಗದ ಭಯಂಕರತೆ ಮತ್ತು ಹರಡುವಿಕೆಯನ್ನು ಟಿವಿ ಮಾಧ್ಯಮಗಳು ಮತ್ತು ಜಾಲತಾಣಗಳು ಎಬ್ಬಿಸಿದ ಭಯಕ್ಕೇ ಎಷ್ಟೋ ಜನ ಕೆಮ್ಮು, ಜ್ವರ ಬಂದವರು ಕೊರೋನಾ ಎಂದು ಭಯಭೀತರಾಗಿ ಪ್ರಾಣ ಕಳೆದುಕೊಂಡರು.
ಚಿಕಿತ್ಸೆ ಕೊಡಬೇಕಾದ ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುವುದಕ್ಕಿಂತ ತಮ್ಮ ಪ್ರಾಣ ಉಳಿದರೆ ಸಾಕೆಂದು ಜ್ವರ, ಕೆಮ್ಮು ನೆಗಡಿಗೂ ಚಿಕಿತ್ಸೆ ನೀಡದಂತೆ ಸ್ವಯಂಪ್ರೇರಿತರಾಗಿ ಲಾಕ್‍ಡೌನ್ ಮಾಡಿಕೊಂಡಿದ್ದರಿಂದ ಹೃದಯ ಸಂಬಂಧಿ, ಕಿಡ್ನಿ ಸಂಬಂಧಿ, ಲಿವರ್ ಸಂಬಂಧಿ ಕಾಯೆಲೆಗಳಿಂದ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದಾಗ, ಅವರಿಗೆಲ್ಲಾ ಕೋವಿಡ್, ಕೊರೋನಾ ಎಂದು ಬಿಂಬಿಸಿ ಮನೆಗಳಿಗೆ ತಗಡು ಹೊಡೆದು ಕ್ವಾರಂಟೈನ್ ಮಾಡಲಾಯಿತು.
ಕೊರೋನಾ ಹೊಸದರಲ್ಲಿ ಯಾವುದಾದರೂ ಮನೆ ಮುಂದೆ ಆಕಸ್ಮಾತ್ ಅಂಗಡಿಯಲ್ಲಿ ಸಾಮಾನು ತರಲು ಬಂದವರಿಗೆ ತಗಡೇನಾದರೂ ಕಂಡರೆ ಅಯ್ಯೋಯಪ್ಪ ಎಂದು ಕೀರ್ಲಿಕೊಂಡು ಮೂಗನ್ನು ಮತ್ತಷ್ಟು ಮುಚ್ಚಿಕೊಂಡು ಮನೆ ಸೇರಿಕೊಂಡು ಬಿಡುತ್ತಿದ್ದರು ಅಷ್ಟು ಭಯವನ್ನು ಈ ಟಿವಿ ಮಾಧ್ಯಮಗಳು ಹುಟ್ಟಿಸಿದ್ದವು.
ಇದರ ಜೊತೆಗೆ ಮೃತಪಟ್ಟವರನ್ನು ಸಂಬಂಧಿಕರು ಮುಟ್ಟುವುದಿರಲ್ಲಿ, ಮುಖವನ್ನೂ ನೋಡಲು ಬರುತ್ತಿರಲಿಲ್ಲ, ಯಾರಾದರೂ ತಗೊಂಡು ಹೋಗಿ ಸುಟ್ಟಾಕಿದರೆ ಸಾಕು ಎಂಬ ಭಯ ಕಾಡುತಿತ್ತು, ಕೊರೊನಾ ಸರಣಿ ರೂಪದಲ್ಲಿ ಮೊದಲನೆಯದು ಬಂತು ಒಂದಷ್ಟು ಜನ ಸತ್ತರು, ಎಲ್ಲಾ ಒಂದು ತಹಬದಿಗೆ ಬಂದಿತು ಎನ್ನುವ ವೇಳೆಗೆ ಮತ್ತೆ ಎರಡನೇ ಅಲೆ ಕಾಣಿಸಿಕೊಂಡು ಮತ್ತೊಮ್ಮೆ ನಾಲ್ಕು ಗೋಡೆಗಳ ಮಧ್ಯೆ ಬದುಕುವಂತಾಯಿತು.
ಮೂರನೇ ಅಲೆ ಮಕ್ಕಳಿಗಂತೆ ಎಂದು ಹಬ್ಬಿಸಿ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಲಾಯಿತು.
ಇಷ್ಟರ ವೇಳೆಗೆ ಕೊರಾನಕ್ಕೆ ಇಂಜೆಕ್ಷನ್ ಬಂದಿದೆಯಂತೆ ಎಂದು, ಕೋವಿಡ್ ಇಂಜೆಕ್ಷನ್ ನೀಡುವ ಕೇಂದ್ರಗಳನ್ನು ಪ್ರಕಟಿಸಲಾಯಿತು, ಅಲ್ಲೋ ಮೂಗಿಗೆ, ಬಾಯಿಗೆ ಮಾಸ್ಕ್ ಹಾಕಿಕೊಂಡ ಸರತಿ ಸಾಲು ಹನುಮಂತನ ಬಾಲದಂತೆ ಸಾಲು, ಇವತ್ತು ನೂರು ಜನಕ್ಕೆ, ಇನ್ನೊಂದು ದಿನ ಇನ್ನೂರು ಜನಕ್ಕೆ, ಕೊರೊನಾ ಇಂಜೆಕ್ಷನ್ ಸ್ಟಾಕ್ ಇಲ್ಲವಂತೆ ಎಂದು ಮತ್ತಷ್ಟು ಭಯ ಹುಟ್ಟಿಸುವುದಲ್ಲದೆ, ಕೊರೋನಾ ಇಂಜೆಕ್ಷನ್ ತಗೊಂಡವರು ಇಂಜೆಕ್ಷನ್ ತಗೊಂಡಿದ್ದೇನೆ, ಹುಮ್ಯಾನಿಟಿ ಬಂದಿದೆ ಎಂದು ಬೀಗಿದರೆ, ಕೊರೋನಾ ಇಂಜೆಕ್ಷನ್ ಪಡೆಯದವರು, ಈ ಕೇಂದ್ರದಿಂದ, ಆ ಕೇಂದ್ರ ಅಲೆದದ್ದು ಅಲ್ಲದೆ, ಪ್ರಭಾವಿ ವ್ಯಕ್ತಿಗಳಿಂದ ಶಿಫಾರಸ್ಸು ಮಾಡಿಸಿ ಇಂಜೆಕ್ಷನ್ ತಗೊಂಡಿದ್ದಾಯಿತು.
ಇದಾದ ಮೇಲೆ ಕೊರೋನಾ ಇಂಜೆಕ್ಷನ್ ಪಡೆದ ಸರ್ಟಿಪಿಕೇಟ್ ಬಸ್‍ಗಳಲ್ಲಿ ತೋರಿಸಿ ಪ್ರಯಾಣಿಸುವ ಮತ್ತೊಂದು ಕಂಟಕ, ಕರೋನಾ ಇಲ್ಲವೆಂಬ ಟೆಸ್ಟ್ ಸರ್ಟಿಫಿಕೇಟ್ ಇಲ್ಲ ಅಂದರೆ ಪ್ರಯಾಣವೇ ಇಲ್ಲ, ಶಾಲಾ, ಕಾಲೇಜು ಇಲ್ಲ, ಯಾವ ಕಛೇರಿಗೂ ಪ್ರವೇಶವಿಲ್ಲ.
ಎಲ್ಲಾ ಅಂಗಡಿ, ಕಛೇರಿ ಭಾಗಿಲುಗಳ ಮುಂದೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಎಂಬ ಫಲಕದ ಜೊತೆಗೆ ಬಾಗಿಲುಗಳಿಗೆ ದಾರ ಕಟ್ಟಿ ಒಳಗೆ ಪ್ರವೇಶವಿಲ್ಲ ಎಂಬ ಬೋರ್ಡ್, ಇದರ ಜೊತೆಗೆ ಕೆಮ್ಮುವಂತಿಲ್ಲ, ಶೀನುವಂತಿಲ್ಲ, ಒಳಗೆ ಹೋಗುವಾಗ ಟೆಂಪರೇಚರ್, ಆಕ್ಸಿಜನ್ ಮಟ್ಟ ಕಡ್ಡಾಯವಾಗಿ ಪರೀಕ್ಷೆಗೊಳಪಡಬೇಕು, ಆ ನಂತರ ಒಳಗೆ ಹೋದರೂ ದೂರದಲ್ಲೇ ನಿಲ್ಲಬೇಕು, ಮುಟ್ಟುವಂತಿಲ್ಲ, ಶೇಕ್ ಹ್ಯಾಂಡ್ ಮಾಡುವಂತಿಲ್ಲ, ದೂರದಿಂದಲೇ ಹಾಯ್ ಅಥವಾ ನಮಸ್ಕಾರ ಅನ್ನಬೇಕು.
ಕೆಲ ಆಸ್ಪತ್ರೆ ಕೋವಿಡ್-19 ಆಸ್ಪತ್ರೆಗಳೆಂದು ಬೆಡ್, ಆಕ್ಸಿಜನ್ ಮತ್ತು ಐಸಿಯುಗಳನ್ನು ಅಳವಡಿಸಿಕೊಂಡು ಬಂದವರಿಗೆಲ್ಲಾ ಕೊರೋನಾ ಎಂದು ಕೂಡಿ ಹಾಕಿ ದುಡ್ಡು ಮಾಡಿದವು ಎನ್ನಲಾಗುತ್ತಿದೆ. ಇನ್ನ ಸರ್ಕಾರಗಳು, ಮಂತ್ರಿಗಳು ಪಿಪಿ ಕಿಟ್‍ಗಳು, ಕೊರೋನಾ ಟೆಸ್ಟ್ ಸಲಕರಣೆಗಳಿಂದಲೇ ಹಣ ದೋಚಿದರು ಎಂಬ ಮಾತುಗಳು ಇವೆ.
ಇಂತಹ ಮಾನಮರ್ಯಾದೆ ತೆಗೆದ, ಅವಮಾನ ಮಾಡಿದ ಕೊರೋನಾ ಅಥವಾ ಕೋವಿಡ್-19 ಎಂಬ ಭಯಂಕರ ಪೆಂಡಮಿಕ್ ರೋಗ ಮತ್ತೊಮ್ಮೆ ಜೆಎನ್-1ರ ರೂಪಾಂತರ ತಳಿ ಕಾಣಿಸಿಕೊಂಡಿದೆ.
ಈಗಾಗಲೇ ರಾಜ್ಯದಲ್ಲಿ 34ಜನರಿಗೆ ಜೆಎನ್-1 ಕೊರೋನಾ ಕಾಣಿಸಿಕೊಂಡಿದ್ದು, ಇದರಲ್ಲಿ 4ಜನ ಗೊಟಕ್ ಎಂದಿದ್ದಾರೆ ಎಂದು ಟಿವಿಗಳು ಒಂದೇ ಸಮನೆ ಬಡಿದುಕೊಳ್ಳುತಿವೆ.
ಈ ಟಿವಿಗಳು ಬಡಿದುಕೊಳ್ಳುತ್ತಿರುವುದರಿಂದ ಕೆಲವೇ ದಿನಗಳಲ್ಲಿ ನೆಗಡಿ, ಕೆಮ್ಮು, ಜ್ವರ ಬಂದವರಿಗೆಲ್ಲಾ ಕೊರೋನಾ ಟೆಸ್ಟ್ ಮಾಡಿಸಿ ಕೊರೋನಾ ಪಾಸಿಟೀವ್ ಎಂದು ಮನೆ ಕ್ವಾರಂಟೈನ್ ಕೆಲವರನ್ನು ಮಾಡಿದರೆ ಮತ್ತೆ ಕೆಲವರನ್ನು ಆಸ್ಪತ್ರೆಯ ಐಸಿಯೂನಲ್ಲಿ, ಆಕ್ಸಿಜನ್‍ನಲ್ಲಿ ಇಟ್ಟಾರು ಜೋಕೆ ಸೀನಬೇಡಿ, ಕೆಮ್ಮಬೇಡಿ, ಉಸಿರಾಟ ತೊಂದರೆ ಅನ್ನಬೇಡಿ.
ಚೆನ್ನಾಗಿ ಉಸಿರಾಡಿ, ಕೆಮ್ಮು ಜ್ವರಬರದಂತೆ ನೋಡೊಕೊಳ್ಳಿ, ಸಿಕ್ಕಿಸಿಕ್ಕದನ್ನೆಲ್ಲಾ ತಿನ್ನಬೇಡಿ, ಕುಡಿಯಬೇಡಿ, ತಿಂದು, ಕುಡಿದು ನೆಗಡಿ ಕೆಮ್ಮಾದರೆ ಕೋರೋನಾ ಎಂದಾರು.
ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ, ಕೈಗೆ ಸಾನಿಟೈಸರ್ ಹಾಕಿಕೊಳ್ಳಿ ಮನುಷ್ಯರಿಂದ ದೂರವಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.
-ವೆಂಕಟಾಚಲ.ಹೆಚ್.ವಿ.