ಗುಂಡ್ಲುಪೇಟೆ: ನಜೀರ್ ಸಾಬ್ ಅವರು ಕೊಟ್ಟ ಪಂಚಾಯತ್ ರಾಜ್ ಸ್ವಾತಂತ್ರ್ಯವನ್ನು ಪುನಃ ಅನುಷ್ಠಾನಗೊಳಿಸುವವರೆಗೂ ವಿರಮಿಸುವುದಿಲ್ಲ ಎಂದು ಶಪಥ ಮಾಡುವುದಾಗಿ ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.
ಅವರು ಡಿಸೆಂಬರ್ 25ರಂದು ಪಂಚಾಯತ್ ರಾಜ್ ಮಾಜಿ ಸಚಿವರಾದ ನಜೀರ್ ಸಾಬ್ ಅವರ ಜನ್ಮ ದಿನಾಚರಣೆ ಅಂಗವಾಗಿ ಚಾಮರಾಜನರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಂಡಿದ್ದ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಸಂದರ್ಭದಲ್ಲಿ ನಜೀರ್ಸಾಬ್ ಸಮಾದಿಗೆ ನಮಿಸಿದ ನಂತರ ಮಾತನಾಡುತ್ತಿದ್ದರು.
ನಜೀರ್ ಸಾಬ್ ಅವರು ಅನುಷ್ಠಾನ ಮಾಡಿದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಕೊಟ್ಟಿದ್ದ ಪಂಚಾಯತ್ ರಾಜ್ ಸ್ವತಂತ್ರ್ಯವನ್ನು ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪುನಃ ಕೊಡಿಸುವ ತನಕ ನಾವು ವಿರಮಿಸುವುದಿಲ್ಲ, ಅಲ್ಲಿಯವರೆವಿಗೂ ನಮ್ಮ ಹೋರಾಟ ಈ ಕ್ಷಣದಿಂದ ಪ್ರಾರಂಭವಾಗಿದೆ ಎಂದು ಹೇಳಿದರು.
ನಮ್ಮ ಪಂಚಾಯತ್ ರಾಜ್ಗೆ ಸಂವಿಧಾನದಲ್ಲಿರುವಂತಹ ಆಶಯಗಳಿಗೆ ಅನುಗುಣವಾಗಿ ಏನು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಯನ್ನು ಹೆಚ್.ಕೆ.ಪಾಟೀಲರು ಪಂಚಾಯತ್ ರಾಜ್ ಸಚಿವರಾಗಿದ್ದ ಕಾಲದಲ್ಲಿ ಮಾಡಿದಂತಹ ಅದ್ಭುತವಾದ ಕಾಯ್ದೆಯ ಎಲ್ಲಾ ಅಂಶಗಳು ಸಂಪೂರ್ಣವಾಗಿ ಜಾರಿಗೆ ಬರುವ ತನಕ ವಿರಮಿಸುವುದಿಲ್ಲ, ಅಲ್ಲಿಯ ತನಕ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದ ಅವರು, ನಾವು ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದವಿದ್ದೇವೆ ಎಂಬ ಶಪಥ ಮತ್ತು ಪ್ರತಿಜ್ಞೆಯನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಮಾಡುತ್ತಿರುವುದಾಗಿ ನಜೀರ್ ಸಾಬ್ ಜನಿಸಿದ ನೆಲದಲ್ಲಿ ನಿಂತು ಹೇಳುತ್ತಿರುವುದಾಗಿ ಘೋಷಣೆ ಮಾಡಿದರು.
ನಮ್ಮೆಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಕೈ ಜೋಡಿಸುವ ಮೂಲಕ ನಮ್ಮ ಪಂಚಾಯತ್ ರಾಜ್ ಕಾಯ್ದೆಯಲ್ಲಿನ ಅಂಶಗಳನ್ನು ಅನುಷ್ಠಾನಕ್ಕೆ ಬೇಕಾದಂತಹ ಎಲ್ಲಾ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮೇಲಿನ ಹಂತದ ಜನಪ್ರತಿನಿಧಿಗಳು, ಪ್ರಮುಖವಾಗಿ ಮೇಲಿನ ಹಂತದ ಅಧಿಕಾರಿಗಳು ತಕ್ಷಣ ನಿಲ್ಲಿಸಬೇಕು ಎಂದು ಈ ನೆಲದಿಂದ ಪಂಚಾಯತ್ ರಾಜ್ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ನೌಕರರಿಗೆ ಕರೆ ಕೊಡುತ್ತಿದ್ದು, ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಿಜವಾದ ಗ್ರಾಮಸ್ವರಾಜ್ಯವನ್ನಾಗಿ ಆಚರಿಸೋಣ ಎಂದು ಕರೆ ನೀಡಿದರು.
1983ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿತು, ಇದಕ್ಕೆ ಮೂಲ ಕಾರಣ ಅಂದಿನ ಪಂಚಾಯತ್ ರಾಜ್ ಸಚಿವರಾಗಿದ್ದ ನಜೀರ್ ಸಾಬ್ ಅವರು, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯಡಿ ಕೆಲಸ ಮಾಡುವ ಜನ ಪ್ರತಿನಿಧಿಗಳು, ಅಧಿಕಾರಿಗಳು, ನೌಕರರ ವರ್ಗ ಸೇರಿದಂತೆ ಯಾರ್ಯಾರಿಗೆ ಸ್ಥಳೀಯ ಸರ್ಕಾರದ ಬಗ್ಗೆ ಆಸಕ್ತಿ, ನಂಬಿಕೆ ಇದೆಯೋ ಅವರಿಗೆಲ್ಲಾ ಇಂದು ಅತ್ಯಂತ ಪವಿತ್ರವಾದ ಸ್ಥಳದಲ್ಲಿ ನಿಂತು ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೆ ದಾರಿ ದೀಪವಾದ, ಒಂದು ಪ್ರಯೋಗ ಮಾಡದಂತಹ ನಜೀರ್ ಸಾಬ್ ಅವರ ಸಮಾಧಿ ಸ್ಥಳದಲ್ಲಿ ನಾವು ನಿಂತಿರುವುದು ನಮ್ಮ ಹಕ್ಕನ್ನು ಮತ್ತೆ ಪಡೆಯುವುದಕ್ಕಾಗಿ ಎಂದು ಹೇಳಿದರು.
ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಕಾಲದಲ್ಲಿ ಪಂಚಾಯಿತಿ ಅಧ್ಯಕ್ಷರನ್ನು ಗ್ರಾಮ ಸ್ವರಾಜ್ಯದ ಪ್ರಧಾನಿ ಎಂದು ಭಾವಿಸಿ ಪ್ರಧಾನ ಎಂದು ಕರೆಯಲಾಗುತ್ತಿತ್ತು, ಮುಖ್ಯಕಾರ್ಯದರ್ಶಿಯಾಗಿದ್ದ ಉಮೇಶ್ ಎಂಬುವವರು, ಸಚಿವ ನಜೀರ್ ಸಾಬ್ ಅವರಿಗೆ ಸಾರ್ ಈ ಜನ ಪ್ರತಿನಿಧಿಗಳಿಗೆ ದೊಡ್ಡ ಜವಾಬ್ದಾರಿ ಕೊಟ್ರಿ, ಅವರಿಗೆ ಅನುಭವವಿಲ್ಲ, ಆಡಳಿತ ಮಾಡಲು ಆಗುವುದಿಲ್ಲ, ತುಂಬಾ ತಪ್ಪು ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದಾಗ, ನಜೀರ್ ಸಾಬ್ ಅವರುYes I have given power to them, they are comrades, they will come mistake, ಹೌದು ಅವರು ನನ್ನ ಸೇನಾನಿಗಳು, ಅವರು ತಪ್ಪು ಮಾಡ್ತಾರೆ ಅದನ್ನು ಸರಿ ಪಡಿಸೋದಕ್ಕೆ ನಿಮ್ಮನ್ನು ಇಟ್ಟಿರೋದು ಎಂದು ಕಡಕ್ಕಾಗಿ ಹೇಳಿದರು ಎಂದು ತಿಳಿಸಿದರು.
ನಜೀರ್ ಸಾಬ್ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಬೆನ್ನೆಲುಬಾಗಿ ನಿಂತು ವ್ಯವಸ್ಥೆಯ ಪರವಾಗಿ, ಜನಪ್ರತಿನಿಧಿಗಳ ಪರವಾಗಿ ಇಂದ್ದಂತಹವರು, ಅಂದಿನ ವ್ಯವಸ್ಥೆಯನ್ನು ಸುವರ್ಣ ಯುಗವೆಂದು ಕರೆಯಬಹುದು, ಆ ಸುವರ್ಣ ಯುಗವನ್ನು ಮತ್ತೊಮ್ಮೆ ವಾಪಸ್ಸು ಬರಬೇಕಾಗಿದೆ ಎಂದರು.
ಇಂದಿನ ಪಂಚಾಯತ್ ರಾಜ್ ವ್ಯವಸ್ಥೆ ಸಂಪೂರ್ಣ ಅಧಿಕಾರ ಕೇಂದ್ರಿತವಾಗಿ ಬಿಟ್ಟಿದೆ,ಅಧಿಕಾರಿಗಳು ಹೇಳಿದ್ದೇ ಮಡೆಯಬೇಕು, ರಾಜ್ಯಮಟ್ಟದಲ್ಲಿ ಕುಳಿತ ಅಧಿಕಾರಿಗಳು ತೆಗೆದುಕೊಂಡ ನಿರ್ಣಯಗಳನ್ನು ಅನಿಷ್ಠಾನ ಮಾಡುವ ಗ್ರಾಮ ಸರ್ಕಾರವಾಗಿಲ್ಲದೆ, ಕೇವಲ ಏಜೆನ್ಸಿಗಳಾಗಿರುವ ಸಂದರ್ಭಗಳಿಗೆ ಈ ಕಾರ್ಯಕ್ರಮವನ್ನು ಮಾಡುತ್ತಿದ್ದು ನಜೀರ್ ಸಾಬ್ ಅವರು ಕೊಟ್ಟ ಪಂಚಾಯತ್ ರಾಜ್ ಸ್ವಾತಂತ್ರ್ಯವನ್ನು ಪುನಃ ಅನುಷ್ಠಾನಗೊಳಿಸುವವರೆಗೂ ವಿರಮಿಸುವುದಿಲ್ಲ ಎಂದು ಶಪಥ ಮಾಡುತ್ತಿರುವುದಾಗಿ ಸತೀಶ್ ಕಾಡಶೆಟ್ಟಿಹಳ್ಳಿ ಹೇಳಿದರು.