
ತುಮಕೂರು: ಸೇವೆ ಖಾಯಮಾತಿ ಮತ್ತು ಸೇವಾ ಭದ್ರತೆಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಧರಣಿಯು 35ನೇ ದಿನವು ಮುಂದುವರೆದಿದ್ದು, ರಾಜ್ಯ ಸರ್ಕಾರವು ಈ ಅತಿಥಿಗಳಿಗೆ ಆತಿಥ್ಯ ನೀಡದೆ, ಇವರು ತಿಥಿಯಾಗಲೆಂದು ತೀರ್ಮಾನಿಸಿದಂತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರವು 35ದಿನವಾದರೂ ಅತಿಥಿ ಉಪನ್ಯಾಸಕರನ್ನು ಕರೆದು ಮಾತನಾಡದೆ ಇರುವುದು ಅತಿಥಿ ಉಪನ್ಯಾಸಕರು ಬೇಡವಾದ ಕೂಸಾಗಿದೆ ಎನ್ನುವಂತಾಗಿದೆ.
ನಗರದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಧರಣಿಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಸ್ಥಳಕ್ಕೆ ಬಂದ ನೂರಾರು ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಬೆಂಬಲ ನೀಡಿ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರುಕಗಳ ಸಮಸ್ಯೆಯನ್ನು ಬಗೆಹರಿಸಿ ನಮಗೆ ತರಗತಿಗಳನ್ನು ನಡೆಯುವಂತೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಲತಾ ಮಾತನಾಡಿ, ಪಿ.ಎಚ್.ಡಿ., ಎಂ.ಪಿಲ್ ಪೂರೈಸಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ನಮ್ಮ ಗುರುಗಳ ಬದುಕೆ ಹೀಗಾದರೆ ಇನ್ನು ವಿದ್ಯಾರ್ಥಿಗಳಾದ ನಮ್ಮಗಳ ಬದುಕು ಹೇಗಾಗಬಹುದು. 35 ದಿನಗಳಿಂದ ಯಾವುದೇ ತರಗತಿಗಳು ನಡೆಯದೆ ಪಾಠ ಪ್ರವಚನಗಳಿಂದ ವಂಚಿತರವಾಗಿರುವ ನಾವು ನಮ್ಮ ಮುಂದಿನ ಜೀವನ ಇನ್ನೂ ಯಾವ ಸ್ಥಿತಿಯಲ್ಲಿರುತ್ತದೆ ಎಂದು ನೆನಸಿಕೊಂಡರೆ ನಮಗೆ ಭಯವಾಗುತ್ತದೆ. ಸರ್ಕಾರ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಿ ತರಗತಿಗಳಲ್ಲಿ ಪಠ್ಯ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ ಮಾತನಾಡಿ, ಹಿಂದಿನ ಎಲ್ಲಾ ಸರ್ಕಾರಗಳು ಅತಿಥಿ ಉಪನ್ಯಾಸಕರ ಬದುಕನ್ನು ಅರೆ ಜೀವನ ಮಾಡುವಂತೆ ಮಾಡಿದೆ. ವಿದ್ಯಾರ್ಥಿಗಳಿಗೆ ಒಂದು ಕಡೆ ಅತಂತ್ರ ಸ್ಥಿತಿಯಾದರೆ ಇನ್ನೂ ಉಪನ್ಯಾಸಕರ ಬದುಕು ದುರಂತ ಸ್ಥಿತಿಯಲ್ಲಿದೆ. ಜವಾಬ್ದಾರಿತವಾಗಿರುವ ಸರ್ಕಾರ ಇವರ ಬೇಡಿಕೆಯನ್ನು ಈಡೇರಿಸದಿದ್ದರೆ ರಾಜೀನಾಮೆಯನ್ನು ಕೊಟ್ಟು ಮನೆಗೆ ಹೋಗಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ಬಾರದಿರುವುದು ದುರಂತ. ಇನ್ನು ಅವರ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಎμÉ್ಟೂೀ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಇಂಥ ಜವಾಬ್ದಾರಿ ಸ್ಥಾನ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಉಪನ್ಯಾಸಕರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ ಎಂದರು.
ಬಿಜೆಪಿ ಪ್ರಚಾರ ಸಮಿತಿಯ ಚಂದ್ರಶೇಖರ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ 11 ಸಾವಿರ ಅತಿಥಿ ಉಪನ್ಯಾಸಕರಗಳ ಅವರ ಕುಟುಂಬ ಅವರನ್ನೇ ಅವಲಂಬಿತವಾಗಿದೆ. ಅವರುಗಳ ಬದುಕೇ ದುರಂತ ಸ್ಥಿತಿಯಾದರೆ, ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಮತ್ತು ಉಪನ್ಯಾಸಕರಿಗೆ ಬೀದಿ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುವ ಸ್ಥಿತಿಗೆ ಯಾವುದೇ ಸರ್ಕಾರ ತರಬಾರದು. ತಿಂಗಳು ಕಳೆದರೂ ಉಪನ್ಯಾಸಕರ ಬೇಡಿಕೆಗೆ ಈಡೇರಿಸದೆ ವಿದ್ಯಾರ್ಥಿಗಳ ಬದುಕನ್ನು ಅವರ ಭವಿಷ್ಯವನ್ನು ಮಂಕು ಕವಿದಂತೆ ಮಾಡುತ್ತಿರುವ, ಉಪನ್ಯಾಸಕರಿಲ್ಲದೆ ಕಾಲೇಜು ಬಣಗುಡುತ್ತಿವೆ. ವಿದ್ಯಾರ್ಥಿಗಳು ತರಗತಿಗಳನ್ನು ತೊರೆದು ಬೀದಿಬದಿಯಲ್ಲಿ ಓಡಾಡುತ್ತಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿವೆ. ಇವುಗಳನ್ನೆಲ್ಲ ನೋಡಿದರೆ ಸರ್ಕಾರ ಯುವಕರ ಬದುಕನ್ನು ದುರಂತಕ್ಕೆ ತಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಡಾ. ಧರ್ಮವೀರ.ಕೆ.ಎಚ್, ಶಿವಣ್ಣ ತಿಮ್ಲಾಪುರ ಮಾತನಾಡಿ, ವಿದ್ಯಾರ್ಥಿಗಳು ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸುವಂತೆ ವಿವಿಧ ರೀತಿಯಲ್ಲಿ ನೀವುಗಳು ಪ್ರತಿಭಟನೆ ಮಾಡಿ ಸರ್ಕಾರ ಗಮನ ಸೆಳೆಯಬೇಕು ಎಂದರು.
ಪ್ರತಿಭಟನೆಯಲ್ಲಿ ನೂರಾರು ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.