ತುಮಕೂರು:ಪ್ರಜಾಪ್ರಭುತ್ವ ಇಂದು ಅತ್ಯಂತ ಬಿಕ್ಕಟ್ಟು ಎದುರಿಸುತ್ತಿದ್ದು,ಸಾಹಿತಿಗಳು ತಮ್ಮ ಜವಾಬ್ದಾರಿ ಮರೆತು ಮೌನಕ್ಕೆ ಶರಣಾಗಿ,ಅವರು ಏನೇ ಬರೆದರೂ ಅದು ಬೂಸಾ ಸಾಹಿತ್ಯವಾಗಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಜಿನಮನೆಯ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ವೇದಿಕೆಯಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಜನರ ಸಮಸ್ಯೆಗಳಿಗೆ ದ್ವನಿಯಾಗದ ಸಾಹಿತ್ಯ ಬೂಸಾ ಎಂಬ ದಿ.ಬಿ.ಬಸವಲಿಂಗಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಸಾಹಿತಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುವುದು ನಮಗೆ ದೊರೆತ ಜವಾಬ್ದಾರಿಯಿಂದ ನುಣುಚಿಕೊಂಡಂತೆ. ಈ ಬಗ್ಗೆ ಎಲ್ಲಾ ಸಾಹಿತಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕನ್ನಡ ಸಾಹಿತ್ಯವನ್ನು ನಾನು ಕಾಯ ಚರಿತ, ಅಕಾಯಚರಿತ ಹಾಗೂ ಕಾಯಕ ಚರಿತರು ಎಂದು ವಿಂಗಡಿಸುಸ್ತೇನೆ. ಕಾಯ ಚರಿತರಿಗಿಂತ,ಯಾವುದೇ ಸ್ವಾರ್ಥವಿಲ್ಲದೆ ಸಾಮೂಹಿಕ ಹಿತವನ್ನೇ ಗುರಿಯಾಗಿಸಿಕೊಂಡು ರಚಿತವಾದ ಅಕಾಯ ಚರಿತರ (ಜನಪದರ)ಸಾಹಿತ್ಯ,ವ್ಯಕ್ತಿ ಪ್ರಜ್ಷೆಗಿಂತ ಸಾಮೂಹಿಕ ಪ್ರಜ್ಞೆಗೆ ಹೆಚ್ಚು ಒತ್ತು ನೀಡಿದೆ.ಸಮುದಾದ ದ್ವನಿಗಳಾಗಿವೆ.ಅಲ್ಲಮರ ಅನುಭವ ಮಂಟಪದಲ್ಲಿದ್ದ ಕಾಯಕ ಚರಿತರು ರಚಿಸಿರುವ ವಚನ ಸಾಹಿತ್ಯ, ಚಾತುರ್ವಣದ ವಿರುದ್ದ ಸಾರಿಸ ಸಮರ ವಿಶ್ವಮಾನವ ಪಜ್ಞೆಗೆ ಪೂರಕವಾಗಿದೆ.ಸಾಹಿತಿಗಳು ಉತ್ವರದಾಯಿತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿವೆ ಎಂದು ಪ್ರೊ.ಎಸ್.ಜಿ. ಸಿದ್ದರಾಮಯ್ಯ ನುಡಿದರು.
ಶಾಂತಿಯ ಕಾಲದಲ್ಲಿ ಕ್ರಾಂತಿಯ ಮಾತುಗಳನ್ನಾಡುವುದು ಸಾಹಿತ್ಯವಲ್ಲ. ನಿಜವಾಗಿಯೂ ಕ್ರಾಂತಿಯ ಕಾಲದಲ್ಲಿ ಮೌನಕ್ಕೆ ಶರಣಾಗುವುದು ಸಲ್ಲದು ಎಂದ ಅವರು,ಪ್ರಜಾಪ್ರಭುತ್ವಕ್ಕೆ ದೊಡ್ಡ ಆತಂಕ ಎದುರಾಗಿರುವ ಈ ಕಾಲದಲ್ಲಿ ಸಾಹಿತಿಗಳು ಬರೆದಂತೆ ಬದುಕಬೇಕಾಗಿದೆ.ಸಾಹಿತ್ಯ ಸಮ್ಮೇಳನಗಳು ಇಂತಹ ಪ್ರಜ್ಞೆಯನ್ನು ಮೂಡಿಸಬೇಕಿದೆ.ರಾಜಪ್ರಭುತ್ವದ ಕಾಲದಲ್ಲಿಯೂ ಪ್ರಜಾ ಪ್ರಭುತ್ವದ ಆಶಯಗಳನ್ನು ಜಾರಿ ಮಾಡಿ,ಸಾಹಿತ್ಯ ಪರಿಷತ್ ಕಟ್ಟಿ,ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯ ಈಡೇರಬೇಕೆಂದರೆ,ಸಾಹಿತ್ಯ ಆಸ್ಥಾನಗಳಲ್ಲಿ ಪುಂಗಿ ಊದುವ ಬದಲು,ಜನಸಾಮಾನ್ಯರ ಹೃದಯದಲ್ಲಿ ಮನೆ ಮಾಡುವಂತಹ ಕೆಲಸ ಆಗಬೇಕಿದೆ.ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಇಂತಹ ವೇದಿಕೆಗಳು ಬಳಕೆಯಾಗಲಿ ಎಂಬ ಆಶಯವನ್ನು ಪ್ರೊ.ಎಸ್.ಜಿ.ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪ ಸೌರಭ ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಜಿ.ಪ್ರಭು,ವಿಜ್ಞಾನ ತಂತ್ರಜ್ಞಾನಗಳು, ಎಲ್ಲರಿಗೂ ಶಿಕ್ಷಣ ಇಲ್ಲದ ಕಾಲದಲ್ಲಿಯೂ ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ಕನ್ನಡಿಗರಿಗೆ ನೆಲೆ ಒದಗಿಸಿದೆ.ಆದರೆ ಎಲ್ಲರಿಗೂ ಜ್ಞಾನ ದೊರೆತ ನಂತರ ಕನ್ನಡವನ್ನು ಉಳಿಸಬೇಕೆಂಬ ಪ್ರಯತ್ನ ನಡೆದಿದೆ.ಅಧುನಿಕತೆ ಮತ್ತು ದುಡಿಮೆಯ ಭರಾಟೆಯಲ್ಲಿ ಎಲ್ಲರೂ ವಿಜ್ಞಾನ, ತಂತ್ರಜ್ಞಾನದತ್ತ ಹೊರಳಿ ವ್ಯಕ್ತಿತ್ವ ವಿಕಸನಕ್ಕೆ ಮೂಲವಾದ ಸಾಹಿತ್ಯ ಮೂಲೆಗುಂಪಾಗಿದೆ.ಭಾಷೆ ಮನುಷ್ಯನ ಹೃದಯವಿದ್ದಂತೆ ಹಾಗಾಗಿ ಇಂತಹ ಸಮ್ಮೇಳನಗಳು ಪ್ರತಿ ಹಳ್ಳಿ, ಗ್ರಾ.ಪಂ.ವ್ಯಾಪ್ತಿಗಳಲ್ಲಿಯೂ ನಡೆಯುವಂತೆ ಸಾಹಿತ್ಯ ಪರಿಷತ್ ಕ್ರಮ ಕೈಗೊಂಡಲ್ಲಿ,ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.

ತುಮಕೂರು ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಮಾತನಾಡಿ,ಜಾಗತೀಕರಣದ ಫಲವಾಗಿ ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿ ರೂಪಗೊಂಡು,ಲಾಭವೇ ಮುಖ್ಯವಾಗಿರುವ ಇಂದಿನ ದಿನದಲ್ಲಿ ಪ್ರಾದೇಶಿಕತೆ ಎಂಬುದು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ.ಪ್ರಜಾಪ್ರಭುತ್ವದ ಅಡಿಯಲ್ಲಿಯೇ ಜಾಗತೀಕರಣ ವಿಸ್ತರಣೆ ಗೊಳ್ಳುತ್ತಿದ್ದು,ಸರ್ವಾಧಿಕಾರಿ ಧೋರಣೆಗಳು,ಬಹುರಾಷ್ಟ್ರೀಯ ದಬ್ಬಾಳಿಕೆಯಿಂದ ಅದಿಮ ಸಂಸ್ಕøತಿ,ಸ್ಥಳೀಯ ಭಾಷೆಗಳಿಗೆ ಕುತ್ತುಂಟಾಗಿದೆ.ಜೀವಪರವಾದ ಸಾಂಸ್ಕøತಿಕ,ಕಲೆ,ಸಂಸ್ಕøತಿ, ಸಾಹಿತ್ಯಗಳು ನಗಣ್ಯವಾಗುತ್ತಿದೆ ಎಂದರು.
ಪ್ರಗತಿ ಮತ್ತು ಪ್ರಕೃತಿ ಎರಡರ ಸಮತೋಲನ ಅಗತ್ಯವಿದೆ.ಎಗ್ಗಿರದ ಪ್ರಗತಿಗೆ ಹವಣಿಸಿದರೆ ಪ್ರಕೃತಿ ತನ್ನ ಅನಿರೀಕ್ಷಿತ ವಿಕೋಪದ ಮೂಲಕ ಅದನ್ನು ಹದ್ದುಬಸ್ತಿಗೆ ತರುವುದು ಎಂಬ ಚಿಂತಕ ಮಾಲ್ಥಸ್ ವಾದ ಒಪ್ಪುವಂತದ್ದು,ವಿಜ್ಞಾನ, ತಂತ್ರಜ್ಞಾನದ ಪ್ರಗತಿಗೂ ಇತಿ,ಮಿತಿಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.ಜೀವಪರವಾದ ಸಾಂಸ್ಕøತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳಿಲದ ಪ್ರಗತಿ,ವಿರುದ್ದವಾದ ದಿಕ್ಕಿನಲ್ಲಿ ನಮ್ಮನ್ನು ತೆಗೆದುಕೊಂಡು ಹೋಗಲಿದೆ ಎಂಬ ಎಚ್ಚರಿಕೆಯನ್ನು ನಾವೆಲ್ಲರೂ ಮನಗಾಣ ಬೇಕಾಗಿದೆ ಎಂದು ಡಾ.ಹೆಚ್.ಎಸ್.ಶಿವಪ್ರಕಾಶ್ ತಿಳಿಸಿದರು.
ನಾನು ತುಮಕೂರಿನಲ್ಲಿ ಹುಟ್ಟಿ,ಬೆಳೆದವನಲ್ಲ.ನಮ್ಮ ಪೂರ್ವಜರು ಗುಬ್ಬಿ,ತುಮಕೂರು ಮೂಲದಿಂದ ಬೆಂಗಳೂರಿನಲ್ಲಿ ನೆಲೆಸಿದವರು.ಇಲ್ಲಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದಾಗ ನಾನು ಕಲಿಸಿದ್ದಕ್ಕಿಂತ,ವಿದ್ಯಾರ್ಥಿ ಮಿತ್ರರಿಂದ ಕಲಿತಿದ್ದೇ ಹೆಚ್ಚು.ವಿಶ್ವ ಸಂಸ್ಕøತಿ ತುಮಕೂರು ಜಿಲ್ಲೆ ನೀಡಿದ ಕೊಡುಗೆ ಅಪಾರ.ಇಂಗ್ಲಿಷ್ ಕಲಿಕೆಯ ಜೊತೆಗೆ, ನಮ್ಮ ಕನ್ನಡ ಉಳಿಸುವ ಛಲ ನಮಗೆ ಬೇಕಿದೆ. ಕನ್ನಡ ಅಳಿಯದಂತೆ ನೋಡಿಕೊಳ್ಳುವ ಶೈಕ್ಷಣಿಕ ಮತ್ತು ಶಾಸನಾತ್ಮಕ ಪ್ರಯತ್ನಗಳನ್ನು ನಿರಂತರವಾಗಿ ನಡೆಸಬೇಕಾಗಿದೆ.ಸಾಮೂಹಿಕವಾಗಿ ನಮ್ಮತನವನ್ನು ಕಳೆದುಕೊಳ್ಳದೆ,ವಿಕಾಸ ಹೊಂದುವ ಸಂಕಲ್ಪಶಕ್ತಿಯನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಡಾ.ಹೆಚ್.ಎಸ್.ಶಿವಪ್ರಕಾಶ್ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸಮ್ಮೇಳನದ ಆಶಯ ನುಡಿಗಳನ್ನಾಡಿದರು.
ಹದಿನಾಲ್ಕನೇ ಸಾಹಿತ್ಯ ಸಮ್ಮೇಳದನ ಅಧ್ಯಕ್ಷ ಎಂ.ವಿ.ನಾಗರಾಜರಾವ್,ನೂತನ ಸಮ್ಮೇಳಾನಾಧ್ಯಕ್ಷರಿಗೆ ಕನ್ನಡ ದ್ವಜ ಹಸ್ತಾಂತರಿಸಿ ದರು. ಸಮ್ಮೇಳನದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಜೀ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು.ಸಮ್ಮೇಳನಾಧ್ಯಕ್ಷರ ಮುಗಿಲ ಜಹಜು ಕೃತಿ ಬಿಡುಗಡೆ ಮಾಡಿ ಡಾ.ಎಂ.ಎಸ್.ಅಶಾದೇವಿ ಮಾತನಾಡಿದರು.
ವೇದಿಕೆಯಲ್ಲಿ ಎಡಿಸಿ ಶಿವಾನಂದ ಬಿ.ಕರಾಳೆ,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮೆರವಣಿಗೆ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್,ಕಸಾಪ ಪದಾಧಿಕಾರಿ ಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ,ಉಮಾಮಹೇಶ್,ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ಎಸ್.ಯೋಗಾನಂದ ಬಮತ್ತಿತರರು ಉಪಸ್ಥಿತರಿದ್ದರು.
ಕಣ್ಮನ ಸೆಳೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ:ಹದಿನೈದನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರ ಆಶಯದಂತೆ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಇರಿಸಿ,ದೊಳ್ಳು, ವೀರಗಾಸೆ, ಕರಡಿ ಮಜಲು, ನಾಸಿಕ್ ಡೋಲು,ನಂದಿ ದ್ವಜ,ಸೋಮನಕುಣಿತ, ನಾದಸ್ವರ, ಗಾರುಡಿ ಗೊಂಬೆ, ಕೋಳಿ ನೃತ್ಯದಂತಹ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಟೌನ್‍ಹಾಲ್‍ನಿಂದ ಎಂ.ಜಿ.ರಸ್ತೆ,ಗುಂಚಿ ಸರ್ಕಲ್, ಡಾಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಗಾಜಿನಮನೆ ತಲುಪಿತು.