ಯಾವ ಸರ್ಕಾರವಿದ್ದರೂ ಸಾಹಿತಿಗಳು ದಿಟ್ಟವಾಗಿ ಸತ್ಯ ಹೇಳಿ ಮರ್ಯಾದಸ್ತರಾಗಬೇಕು- ಸಾಹಿತಿ ಬರಗೂರು ರಾಮಚಂದ್ರಪ್ಪ

ತುಮಕೂರು: ಸಾಹಿತಿಯಾದವ ಸತ್ಯವನ್ನು ಜನರಿಗೆ ಹೇಳುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕಿದೆ.ಯಾವ ಸರಕಾರವಿದ್ದರೂ ದಿಟ್ಟವಾಗಿ ಸತ್ಯ ಹೇಳಿ,ಮರ್ಯಾದಸ್ತರಾಗಬೇಕು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಗಾಜಿನಮನೆಯ ಹೆಚ್.ಎಮ್.ಗಂಗಾಧರಯ್ಯ ವೇದಿಕೆಯಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸಮಾರೋಪ ಭಾಷಣ ಮಾಡಿದ ಅವರು,1963ರಲ್ಲಿಯೇ ಅಂದಿನ ಸರಕಾರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ.ಆದರೆ ಇದುವರೆಗೂ ನಮ್ಮನ್ನು ಆಳಿದ ಸರಕಾರಗಳು ನಿರ್ಲಕ್ಷ ಮಾಡಿಕೊಂಡು ಬಂದಿವೆ. ಹಾಗಾಗಿ ಇಂದು ನಾವು ಕನ್ನಡ ನಾಮಫಲಕಕ್ಕಾಗಿ ಪ್ರತಿಭಟನೆಗೆ ಇಳಿಯುವಂತಹ ಸ್ಥಿತಿ ಬಂದಿದೆ.ಸರಕಾರದ ನಿರ್ಧಾರ ಸ್ವಾಗಾತಾರ್ಹ.ಹಾಗೆಯೇ ಕನ್ನಡ ಭಾಷೆಯನ್ನು ಅನ್ನಭಾಷೆಯಾಗಿಸಿದರೆ ಮಾತ್ರ ಉಳಿಗಾಲ ಎಂಬುದನ್ನು ನಾವ್ಯಾರು ಮೆರೆಯುವಂತಿಲ್ಲ ಎಂದರು.

ಕನ್ನಡವೆಂಬುದು ಕೇವಲ ಬೋರ್ಡಿನಲ್ಲಿದ್ದರೆ ಸಾಲದು,ಅದು ಬದುಕಿಗೆ ಬರಬೇಕು.ಆಗ ಮಾತ್ರ ಜನ ತಮ್ಮ ತಾಯಿ ಭಾಷೆಯನ್ನು ಒಪ್ಪಿಕೊಂಡು,ಅಪ್ಪಿಕೊಳ್ಳಲು ಸಾಧ್ಯ,ನಾವೆಲ್ಲರೂ ಈ ನಿಟ್ಟಿನಲ್ಲಿ ನಡೆಯೋಣ.ಕನ್ನಡ ನಾಡಿನ ಸಾಹಿತಿಗಳು ಸ್ವಾತಂತ್ರ ಪೂರ್ವದಲ್ಲಿಯೂ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಹಿತ್ಯದ ಸ್ವಾಯತತ್ತೆ, ಸಾಹಿತ್ಯದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಸತ್ತಾತ್ಮಕತೆಯನು ಉಳಿಸಿಕೊಂಡು ಬಂದಿದೆ.ಇಕ್ಕಟ್ಟು,ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವರು ತಮ್ಮ ಸಾಹಿತ್ಯದ ಮೂಲಕ ಮಾತನಾಡಿದರೆ,ಕೆಲವರು ಭಾಷಣದ ಮೂಲಕ ಮಾತನಾಡುತ್ತಿದಾರೆ.ಆದರೆ ಕೆಲವೊಮ್ಮೆ ಮೌನವೂ ಪ್ರತಿಭಟನೆಯ ಸಂಕೇತವಾಗಿರುತ್ತದೆ ಎಂದ ಬರಗೂರು ರಾಮಚಂದ್ರಪ್ಪ,ಕೆಲ ಲೇಖಕರು ಸರಕಾರ ವನ್ನು ನಾವೇ ತಂದಿದ್ದು ಎಂಬಂತೆ ಮಾತನಾಡುತಿದ್ದಾರೆ. ಇದು ಸಲ್ಲದು ಎಂದರು.

ಪ್ರಸ್ತುತ ಬೌದ್ಧಿಕ ವಲಯವನ್ನು ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದು,ಇದು ಆತಂಕಕಾರಿ ವಿಷಯವಾಗಿದೆ. ಭಿನ್ನಾಭಿಪ್ರಾಯ ಗಳ ನಡುವೆ ಸಂವಾದ ನಡೆದರೆ,ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಹುದು. ಪ್ರಗತಿಗಾಮಿಗಳು ಮತ್ತು ಪ್ರತಿಗಾಮಿಗಳ ನಡುವೆ ವಿಚಾರ ವಿನಿಮಯ ಆಗತ್ಯವಿದೆ ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಕನ್ನಡ ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ.ಕೆಲವೇ ಸಂಘಟನೆ ಗಳಿಗೆ ಗುತ್ತಿಗೆ ನೀಡಿಲ್ಲ.ಕನ್ನಡದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆದಲ್ಲ.ಗುಂಡಾಗಿರಿ ಮಾಡುವುದು, ಸಾರ್ವಜನಿಕರ ಆಸ್ತಿ,ಪಾಸ್ತಿಗೆ ನಷ್ಟ ಉಂಟು ಮಾಡುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದರು.

ಕನ್ನಡ ಭಾಷೆಗೆ ಸಾವಿಲ್ಲ.ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕಿದೆ.ಪ್ರಾಥಮಿಕವಾಗಿ ಕನ್ನಡ ಭಾಷೆಯನ್ನು ಮನದಷ್ಟು ಮಾಡಿದ ನಂತರ,ಬೇರೆ ಭಾಷೆಯನ್ನು ಕಲಿಸಿದರೆ ಅಭ್ಯಂತರವಿಲ್ಲ.ಜನಾಭಿಪ್ರಾಯಕ್ಕೆ ಮಣಿದು ಮೈಸೂರು ರಾಜ್ಯ ಕರ್ನಾಟಕವಾಯಿತು. ಭಾಷೆ, ನೆಲ,ಜಲದ ವಿಚಾರದಲ್ಲಿ ನಾವೆಲ್ಲರೂ ಒಗ್ಗೂಡಿ ಅದನ್ನು ರಕ್ಷಿಸುವುದು ಅತಿ ಅಗತ್ಯ.ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಸಿಮೀತವಾಗದೆ ಸದಾ ಭಾಷೆಯ ಹಿರಿಮೆ ಹೆಚ್ಚಿಸುವ ಕೆಲಸ ಆಗಬೇಕು.ಕನ್ನಡ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ.ಕನ್ನಡದ ಸೇವೆ ಮಾಡುವ ಎಲ್ಲರಿಗೂ ಮನ್ನಣೆ ದೊರೆಯುತ್ತದೆ ಎಂಬುದಕ್ಕೆ ಇಂದಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಉದಾಹರಣೆ.ಈ ಜಿಲ್ಲೆಯಲ್ಲಿ ಹುಟ್ಟಿ,ಬೆಳೆಯದೇ ಇದ್ದರು ಅವರನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದೆ.ಅವರು ಮೆರವಣಿಗೆ ವೇಳೆ ರಥ ಏರದೆ ಸಾಮಾನ್ಯರಂತೆ ನಡೆದು ಬಂದಿದ್ದು ವಿಶೇಷವೆನಿಸಿದೆ ಎಂದು ಸಹಕಾರಿ ಸಚಿವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ,ವಿದ್ಯಾರ್ಥಿಯಾಗಿದ್ದಾಗ ಸಿದ್ದಗಂಗಾ ಮಠದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಕನಾಗಿ ಭಾಗಿಯಾಗಿದ್ದು ನೆನಪಿಗೆ ಬಂತು. 108 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿ ಕನ್ನಡ ಭಾಷೆಗೆ ನೀಡಿದ ಗೌರವ ನಾವ್ಯಾರು ಮೆರೆಯು ವಂತಿಲ್ಲ.ವಿಷಾದ ಸಂಗತಿ ಎಂದರೆ,ಆದರೆ ದಕ್ಷಿಣ ಭಾರತದ ನಮ್ಮ ಅಕ್ಕಪಕ್ಕ ರಾಜ್ಯಗಳಲ್ಲಿ ಎಂದಿಗೂ ಆಯಾಯ ರಾಜ್ಯದ ಭಾಷೆಯ ಉಳಿವಿಗಾಗಿ ಹೋರಾಟ ನಡೆದಿಲ್ಲ.ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಭಾಷೆ ಉಳಿಸಲು ಹೋರಾಟ ನಡೆಸಬೇಕಿರುವುದು ದುರ್ದೈದ ಸಂಗತಿ.ಇದು ಕನ್ನಡಕ್ಕೂ ಒಳ್ಳೆಯದಲ್ಲ, ಕನ್ನಡಿಗರಿಗೂ ಶ್ರೇಯಸ್ಸು ತರುವಂತಹ ವಿಚಾರವಲ್ಲ ಎಂದರು.

ಕಲೆ, ಸಂಸ್ಕøತಿಗೆ ಹೆಸರಾದ ಜಿಲ್ಲೆ, ಅದರಿಂದ ಹಿಂದೆ ಸರಿಯುತ್ತಿದೆಯೇನೋ ಎಂಬ ಅನುಮಾನ ಕಾಡುತ್ತಿದೆ.ಕಲೆ, ಸಂಸ್ಕøತಿಗೆ ಹೆಚ್ಚಿನ ಒಲವು ತೋರಬೇಕಾಗಿದೆ.ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ.ಇಂಗ್ಲೀಷ ಬದುಕಿಗೆ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.ಆದರೆ ತಾಯಿ ಭಾಷೆಯನ್ನು ಅಸಡ್ಡೆ ಮಾಡಬಾರದು.ಸರಕಾರ ಐದನೇ ತರಗತಿಯ ವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ.ಇತ್ತೀಚಗೆ ಕನ್ನಡ ನಾಮಫಲಕದ ಹೆಸರಿನಲ್ಲಿ ನಡೆದ ಘಟನೆ ಕನ್ನಡಿಗರಿಗೆ ಗೌರವ ತರುವಂತಹದಲ್ಲ.ಸರಕಾರ ಕನ್ನಡಿಗರ ಪರವಾಗಿದೆ.ಇದನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ. ಕಾನೂನು ಮೊದಲಿನಿಂದಲೂ ಇದೆ.ಅನುಷ್ಠಾನ ಮಾಡಿ ಎಂದು ಕೇಳಿದ ರೀತಿ ಸಹಿಸುವಂತಹದ್ದಲ್ಲ. ಕಾನೂನು ನಿಮ್ಮ ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಶಾಂತಿ ಕದಡಲು ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟ ಎಚ್ಚರಿಕೆ ನೀಡಿದರು.

ಬೆಂಗಳೂರಿ ಕೇವಲ ಕನ್ನಡದ ನೆಲವಾಗಿಲ್ಲ. ಇಡೀ ವಿಶ್ವದಲ್ಲಿ ಬೆಂಗಳೂರಿಗೆ ಬಗ್ಗೆ ಮಾತನಾಡುತ್ತಾರೆ. ಈ ರೀತಿಯ ವರ್ತನೆ ಸರಿಯಲ್ಲ.ಅದನ್ನು ಸರಕಾರ ಸಹಿಸುವುದಿಲ್ಲ.ಸುಗ್ರಿವಾಜ್ಞೆಯ ಮೂಲಕ ಕನ್ನಡ ನಾಮಫಲಕ ಅಳವಡಿಸುವ ಕಾನೂನು ತಂದಿದ್ದೇವೆ. ನಮಗೆ ಯಾರು ಹೇಳಬೇಕಾಗಿಲ್ಲ. ಇದು ಕನ್ನಡಿಗರ ಸರಕಾರ. ಕನ್ನಡದ ನೆಲ, ಜಲ, ಭಾಷೆಯನ್ನು ರಕ್ಷಿಸದೇ ಹೋದರೆ ನಾವು ಯಾರು ಸರಕಾರದಲ್ಲಿ ಇರುವುದು ತರವಲ್ಲ.ಹಾಗಾಗಿ ಕನ್ನಡ ರಕ್ಷಣೆಗೆ ಸರಕಾರದ ಬದ್ದವಾಗಿದೆ. ಕನ್ನಡ ಕಲಾ ಗ್ರಾಮಕ್ಕೆ 5 ಎಕರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ದವಿದೆ.ನೀರಾವರಿಗೆ ಅನೇಕ ರೀತಿಯ ಹೋರಾಟ ನಡೆದಿದೆ. ಮೇಕೆದಾಟು ಯೋಜನೆಗೆ ಸಾವಿರಾರು ಜನ ಪಾದಯಾತ್ರೆ ನಡೆಸಿದ್ದೇವೆ.ಎತ್ತಿನಹೊಳೆ ಯೋಜನೆ ನಿಧಾನವಾದರೂ ನಿರ್ಧಿಷ್ಟ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮುಂದಿನ ಎರಡು ವರ್ಷದಲ್ಲಿ ಎತ್ತಿನಹೊಳೆಯ ನೀರು ಈ ಭಾಗಕ್ಕೆ ಹರಿಯಲಿದೆ ಎಂದು ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ತುಮಕೂರು ವಿವಿಯ ಬೆಳೆವಣಿಗೆ ಹಣಕಾಸಿನ ಕೊರತೆ ಇದೆ. ವಿವಿಯನ್ನು ಹೊಸ ಕ್ಯಾಂಪಸ್‍ಗೆ ಬದಲಾಯಿಸಿ, ಅಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ಮಾಡಲು ಸರಕಾರ ಸಿದ್ದವಿದೆ. 1986ರ ರಾಷ್ಟ್ರೀಯ ಶಿಕ್ಷಣ ನೀತಿ ಲಕ್ಷಾಂತರ ಜನ ಯುವಕರನ್ನು ಪದವಿಧರರನ್ನು ನೀಡಿದೆ.ಹೊಸ ಶಿಕ್ಷಣ ನೀತಿಯ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ.ಸಮ್ಮೇಳನ ಇಷ್ಟು ಅಚ್ಚುಕಟ್ಟಾಗಿ ಆಯೋಜಿಸಿದ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಶಾಸಕರಾದ ಬಿ.ಸುರೇಶಗೌಡ,ಚಿದಾನಂದಗೌಡ,ಮಾತನಾಡಿದರು.ಡಾ.ವೈ.ಎ.ನಾರಾಯಣಸ್ವಾಮಿ,ಎಸ್.ನಾಗಣ್ಣ,ಚಂದ್ರಶೇಖರಗೌಡ,ಇಕ್ಬಾಲ್‍ಅಹಮದ್, ಜಿಲ್ಲಾಧಿಕಾರಿ ಶ್ರೀಮತಿ ಶುಭಾ ಕಲ್ಯಾಣ,ಸಿಇಓ ಜಿ.ಪ್ರಭು,ಎಸ್.ಪಿ.ಅಶೋಕ್ ಕೆ.ವಿ.ಮುರುಳಿಕೃಷ್ಣಪ್ಪ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಚಲನಚಿತ್ರ ನಟ ಶರತ್ ಲೋಹಿತಾಶ್ವ ಸೇರಿದಂತೆ 26ಕ್ಕೂ ಹೆಚ್ಚು ಸಾಹಿತಿಗಳು,ಕಲಾವಿದರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ನಿರ್ಣಯಗಳು:
15 ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸಮ್ಮೇಳನದ ನಿರ್ಣಣಯಗಳನ್ನು ಮಂಡಿಸಿದರು.

*ಜಿಲ್ಲೆಯಲ್ಲಿ ಕನ್ನಡ ಕಲಾ ಗ್ರಾಮ ನಿರ್ಮಾಣಕ್ಕೆ ವಿಜ್ಞಾನ ಗುಡ್ಡದ ಬಳಿ 25 ಎಕರೆ ಭೂಮಿ ನೀಡುವಂತೆ
*ಕೃಷ್ಣ ಕೊಳ್ಳದ ನೀರನ್ನು ಸಮರ್ಥವಾಗಿ ಜಿಲ್ಲೆಯ ನೀರಾವರಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲು
*ಕನ್ನಡ ಶಾಲೆಗಳ ಉಳಿವಿಗಾಗಿ,ಪದವಿ ಹಂತದಲ್ಲಿಯೂ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವಂತೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.

Leave a Reply

Your email address will not be published. Required fields are marked *