ತುಮಕೂರು : ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಅದ್ಭುತ ಶಿಲ್ಪ ಕೆತ್ತನೆಯಿಂದ ಪ್ರಸಿದ್ಧರಾಗಿದ್ದ ಜಕಣಾಚಾರಿಯವರಿಗೆ ಅಮರ ಶಿಲ್ಪಿಯೆಂದು ಮನ್ನಣೆ ದೊರೆಯಿತು ಎಂದು ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಹಾಗೂ ರಾಜ್ಯ ವಿಶ್ವಕರ್ಮ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಅಮರಶಿಲ್ಪಿ ಜಕಣಾಚಾರ್ಯ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊಯ್ಸಳರ ಕಾಲದಲ್ಲಿ ಶಿಲ್ಪಕಲೆ ಕ್ಷೇತ್ರಕ್ಕೆ ಜಕಣಾಚಾರಿ ಅವರ ಕೊಡುಗೆ ಅಪಾರ. ಎಲ್ಲಾ ಶಿಲ್ಪಿಗಳಿಗೂ ಅಮರಶಿಲ್ಪಿ ಎಂದು ಬಿರುದು ಪಡೆಯಲು ಸಾಧ್ಯವಿಲ್ಲ. ಜನರ ಮನಸೂರೆಗೊಂಡಿರುವ ಹಳೇಬೀಡು ದೇವಾಲಯದಲ್ಲಿ ಜಕಣಾಚಾರಿಯವರು ಕೆತ್ತಿರುವ ಶಿಲ್ಪಕಲೆಯೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಮಧುಗಿರಿ ತಾಲೂಕು ನಿಟ್ರಳ್ಳಿ ಶ್ರೀ ವಿಶ್ವಕರ್ಮ ಸಂಪನ್ಮೂಲ ಮಠದ ಪೀಠಾಧ್ಯಕ್ಷರಾದ ಶ್ರೀ ನೀಲಕಂಠಾಚಾರ್ಯ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಬೇಕು. ಜಕಣಾಚಾರಿಯವರ ವಾಸ್ತುಶಿಲ್ಪ ಕಲಾಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ನಮ್ಮ ವೃತ್ತಿಯನ್ನು ನಾವು ಗೌರವಿಸಬೇಕು. ವೃತ್ತಿಯನ್ನು ನಾವು ಗೌರವಿಸಿದಾಗ ಮಾತ್ರ ಇತರರಿಗೆ ನಮ್ಮ ವೃತ್ತಿಯ ಬಗ್ಗೆ ತಿಳಿಸಲು ಸಾಧ್ಯವಾಗುತ್ತದೆ. ಹಿಂದಿನ ಕಾಲದಲ್ಲಿ ವೃತ್ತಿಗಳ ಆಧಾರದಲ್ಲಿ ಒಂದು ಹಳ್ಳಿ ನಿರ್ಮಾಣವಾಗುತ್ತಿತ್ತು. ಆದರೆ ಕಾಲ ಬದಲಾದಂತೆ ನಾವೆಲ್ಲರು ಏಕಾಂಗಿಗಳಾಗುತ್ತಿದ್ದೇವೆ. ನಮ್ಮ ಸಂಸ್ಕøತಿ ಪರಂಪರೆಯನ್ನು ಮುಂದುವರೆಸಬೇಕೆಂದರೆ ಸಮುದಾಯಗಳು ಒಗ್ಗಟ್ಟಾಗಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ ರಾಜ್ಯ ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಮಾತನಾಡಿ ಜಕಣಾಚಾರಿಯವರು ಜನಮಾನಸದಲ್ಲಿ ಉಳಿಯುವ ಶಿಲ್ಪಿ. ಈಗಲೂ ಸಹ ಅವರು ಕೆತ್ತಿರುವ ಚೆನ್ನಕೇಶವ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ ಎಂದರಲ್ಲದೆ ತಾಲೂಕಿನಲ್ಲಿ ಕೈದಾಳ ದೇವಾಲಯವನ್ನು ಅಭಿವೃದ್ಧಿಪಡಿಸಬೇಕು. ಕೈದಾಳವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ವಾಸ್ತುಶಿಲ್ಪ ಕುರಿತು ತರಬೇತಿ ಕೇಂದ್ರವನ್ನು ತೆರೆಯಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಅಮರಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್. ಪ್ರಭಾಕರ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ: ವಾಸುದೇವ್ ಬಡಿಗೇರ್, ಡಾ: ಗಂಗಾಧರ್ ದೈವಜ್ಞ, ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ: ಕೊಟ್ರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.